30 ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ಜಪ್ತಿ, ಅಸ್ಸಾಂ ಪೊಲೀಸರಿಂದ ಇಬ್ಬರು ಪೆಡ್ಲರ್​ಗಳ ಬಂಧನ

police
Published on

ಕರೀಂಗಂಜ್: ಅಸ್ಸಾಂನ ಪೊಲೀಸರು ಡ್ರಗ್ಸ್​ ಪೆಡ್ಲರ್​​ಗಳ ವಿರುದ್ಧ ಸಮರ ಸಾರಿದ್ದಾರೆ. ಡ್ರಗ್ಸ್​ ​ಮುಕ್ತ ನಗರವನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ. ಅದರಂತೆ ಡೀಸೆಲ್‌ ಟ್ಯಾಂಕ್‌ನಲ್ಲಿಟ್ಟು ಡ್ರಗ್ಸ್‌ಗೆ ಸಂಬಂಧಿಸಿದ ಮಾತ್ರೆ ಸಾಗಾಟ ಮಾಡುತ್ತಿದ್ದ ದಂಧೆಕೋರರನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಕರೀಂಗಂಜ್ ಪೊಲೀಸರು ಇಬ್ಬರನ್ನು ಬಂಧಿಸಿದ್ದು, 30 ಕೋಟಿ ರೂ. ಮೌಲ್ಯದ ಒಂದು ಲಕ್ಷ ಮಾತ್ರೆಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತ ಆರೋಪಿಗಳನ್ನು ನಜ್ಮುಲ್ ಹುಸೇನ್ ಮತ್ತು ಮುತ್ಲಿಬ್ ಅಲಿ ಎಂದು ಗುರುತಿಸಲಾಗಿದೆ.

ಮಿಜೋರಂ ಕಡೆಯಿಂದ ಯಾಬಾ ಮಾತ್ರೆಗಳನ್ನು ಸಾಗಿಸುತ್ತಿರುವುದಾಗಿ ಮಾಹಿತಿ ಬಂದಿತ್ತು. ತಕ್ಷಣ ರಟಾಬರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಾಕಾಬಂಧಿ ರಚಿಸಿ ತಪಾಸಣೆ ಶುರು ಮಾಡಿದ್ದೆವು. ಡೀಸೆಲ್‌ ಟ್ಯಾಂಕ್‌ ವಾಹನ ಪರಿಶೀಲಿಸಿದಾಗ ಯಾಬಾ ಮಾತ್ರೆಗಳುಳ್ಳ 10 ಪ್ಯಾಕೆಟ್‌ ಪತ್ತೆಯಾಯಿತು. ಬಳಿಕ ಮಾತ್ರೆಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಲಾಯಿತು. ಮಾದಕ ವಸ್ತುಗಳ ಮಾರುಕಟ್ಟೆಯಲ್ಲಿ ಈ ಮಾತ್ರೆಗಳ ಮೌಲ್ಯ ಸುಮಾರು 30 ಕೋಟಿ ರೂ. ಇದೆ ಎಂದು ಕರೀಂಗಂಜ್ ಎಸ್ಪಿ ಪಾರ್ಥ ಪ್ರೋತಿಮ್ ದಾಸ್ ತಿಳಿಸಿದ್ದಾರೆ.

ಇದಕ್ಕೂ ಮೊದಲು, ಜೂನ್ 7 ರಂದು, ಅಸ್ಸಾಂ ಪೊಲೀಸರು 8.5 ಕೋಟಿ ಮೌಲ್ಯದ 1.7 ಕಿಲೋಗ್ರಾಂಗಳಷ್ಟು ಹೆರಾಯಿನ್ ಅನ್ನು ವಶಪಡಿಸಿಕೊಂಡು, ಅಸ್ಸಾಂ-ಮಿಜೋರಾಂ ಗಡಿಯ ಸಮೀಪವಿರುವ ಧೋಲೈಖಾಲ್ ಪ್ರದೇಶದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದರು. ಮಿಜೋರಾಂನ ಚೈಫೈನಿಂದ ಅಕ್ರಮವಾಗಿ ಸಾಗಿಸಲಾಗಿದೆ ಎಂದು ಶಂಕಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net