ಕ್ರೀಡೆ

ಸ್ಟಾರ್ ಟೇಬಲ್ ಟೆನಿಸ್ ಆಟಗಾರರ ಸಾಮಾಜಿಕ ಕಳಕಳಿ

ನವದೆಹಲಿ: ಭಾರತದ ಸ್ಟಾರ್ ಟೇಬಲ್ ಟೆನಿಸ್ ಆಟಗಾರರಾದ ಶರತ್ ಕಮಲ್ ಹಾಗೂ ಜಿ.ಸತ್ಯನ್ ಕೋವಿಡ್-19 ರಿಂದ ಸಂಕಷ್ಟದ ಸುಳಿಗೆ ಸಿಲುಕಿರುವ ಟೇಬಲ್ ಟೆನಿಸ್ ಸಮೂಹಕ್ಕಾಗಿ ದೇಣಿಗೆ ಸಂಗ್ರಹಿಸುತ್ತಿದೆ. ಇವರಿಗೆ ನೇಹಾ ಅಗರ್ವಾಲ್ ಕೂಡ ಸಾಥ್ ನೀಡಿದ್ದು, ಈ ಮೂವರು ಕೇವಲ 4 ದಿನಗಳಲ್ಲಿ 7 ಲಕ್ಷ ರೂಪಾಯಿ ಸಂಗ್ರಹಿಸಿದ್ದು, 10 ಲಕ್ಷ ರೂಪಾಯಿ ಸಂಗ್ರಹಿಸುವ ಗುರಿಯಲ್ಲಿದೆ. ಸಂಗ್ರಹವಾದ ಮೊತ್ತವನ್ನು ಆಟಗಾರರು, ಕೋಚ್‌ಗಳು ಹಾಗೂ ಅಂಪೈರ್‌ಗಳಿಗೆ ನೀಡಲು ತೀರ್ಮಾನಿಸಲಾಗಿದೆ.

ಲಾಕ್‌ಡೌನ್‌ನಿಂದ ಯಾವುದೇ ಟೂರ್ನಿಗಳು ನಡೆಯದ ಹಿನ್ನೆಲೆಯಲ್ಲಿ ಎಲ್ಲರೂ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ. ಈಗ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ನನ್ನ ಸಹಪಾಠಿಗಳು ಕೂಡ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ನನ್ನ ಕೈಲಾದಷ್ಟು ಸಹಾಯ ಮಾಡಬೇಕು ಎಂದು ನಿರ್ಧರಿಸಿದೆ ಎಂದು ವಿಶ್ವ ನಂ.31 ಶರತ್ ಹೇಳಿದ್ದಾರೆ. 100 ಜನರಿಗೆ ಸಹಾಯ ಮಾಡುವ ಗುರಿಯಿದೆ ಎಂದಿದ್ದಾರೆ. ಮುಂದಿನ ಒಂದೆರಡು ದಿನಗಳಲ್ಲಿ 10 ಲಕ್ಷ ರೂಪಾಯಿ ಸಂಗ್ರಹಿಸುವ ಭರವಸೆ ಇದೆ ಎಂದರು.