ಕ್ರೀಡೆ

ಇಂದಿನಿಂದ ಆಂಗ್ಲರ ಬಜ್​ಬಾಲ್​ಗೆ ಭಾರತದ ಸ್ಪಿನ್​ಬಾಲ್​ ಸವಾಲು; ಹೈದರಾಬಾದ್​ನಲ್ಲಿ ಮೊದಲ ಮುಖಾಮುಖಿ

ಹೈದರಾಬಾದ್​: ಕಳೆದ 12 ವರ್ಷಗಳಿಂದ ತವರಿನಲ್ಲಿ ಅಜೇಯವಾಗಿರುವ ಭಾರತ ಮತ್ತು ಆಕ್ರಮಣಕಾರಿ ಬಜ್​ಬಾಲ್​ ಕಾರ್ಯತಂತ್ರದ ಮೂಲಕ ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ಕ್ರಾಂತಿ ಎಬ್ಬಿಸಿರುವ ಇಂಗ್ಲೆಂಡ್​ ತಂಡಗಳ ನಡುವಿನ ಬಹುನಿರೀತ 5 ಪಂದ್ಯಗಳ ಟೆಸ್ಟ್​ ಸರಣಿಗೆ ಗುರುವಾರ ಚಾಲನೆ ಸಿಗಲಿದೆ. ಹೈದರಾಬಾದ್​ನ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನ ಸ್ಪಿನ್​ಸ್ನೇಹಿ ಪಿಚ್​ನಲ್ಲಿ ಮೊದಲ ಮುಖಾಮುಖಿ ನಡೆಯಲಿದೆ. ಹೀಗಾಗಿ ಆಂಗ್ಲರ "ಬಜ್​ಬಾಲ್​' ಕಾರ್ಯತಂತ್ರಕ್ಕೆ ಭಾರತದ "ಸ್ಪಿನ್​ಬಾಲ್​' ಯಾವ ರೀತಿಯಲ್ಲಿ ಸವಾಲೊಡ್ಡಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ 3ನೇ ಆವೃತ್ತಿಯ ಭಾಗವಾಗಿರುವ ಈ ಸರಣಿಯಲ್ಲಿ ಶುಭಾರಂಭ ಕಾಣುವ ಮೂಲಕ ತವರಿನ ಪ್ರಾಬಲ್ಯ ಮುಂದುವರಿಸುವುದು ರೋಹಿತ್​ ಶರ್ಮ ಬಳಗದ ಹಂಬಲವಾಗಿದೆ.

ಆಂಗ್ಲರು ಬಜ್​ಬಾಲ್​ ಕಾರ್ಯತಂತ್ರದ ಮೂಲಕ ಈಗಾಗಲೆ ತವರಿನಲ್ಲಿ ಮಾತ್ರವಲ್ಲದೆ, ಪಾಕಿಸ್ತಾನ, ನ್ಯೂಜಿಲೆಂಡ್​ ಮತ್ತು ಆಸ್ಟ್ರೆಲಿಯಾದಲ್ಲೂ ಉತ್ತಮ ಯಶಸ್ಸು ಸಾಧಿಸಿದ್ದಾರೆ. ಆದರೆ ಭಾರತದ ಸ್ಪಿನ್​ ಸ್ನೇಹಿ ವಾತಾವರಣದಲ್ಲೂ ಆಂಗ್ಲರಿಗೆ ಅಂಥದ್ದೇ ಯಶಸ್ಸು ಸಾಧಿಸಲು ಸಾಧ್ಯವಾಗುವುದೇ ಎಂಬ ಕೌತುಕ ಸರಣಿಯ ರೋಚಕತೆ ಹೆಚ್ಚಿಸಿದೆ. ಕಳೆದೊಂದು ದಶಕದಿಂದ ಭಾರತ ಪ್ರವಾಸ ಕೈಗೊಂಡ ಎಲ್ಲ ತಂಡಗಳನ್ನೂ ಸ್ಪಿನ್​ ಜೋಡಿಯಾದ ಆರ್​. ಅಶ್ವಿನ್​ ಮತ್ತು ರವೀಂದ್ರ ಜಡೇಜಾ ಕಟ್ಟಿಹಾಕಿದ್ದಾರೆ. ಕೆಲ ಸರಣಿಗಳಲ್ಲಿ ಅವರಿಗೆ ಕುಲದೀಪ್​ ಯಾದವ್​ ಮತ್ತು ಅಕ್ಷರ್​ ಪಟೇಲ್​ ಕೂಡ ಉತ್ತಮ ಸಾಥ್​ ನೀಡಿದ್ದಾರೆ. ಹೀಗಾಗಿ ಈ ಅನುಭವಿ ಸ್ಪಿನ್​ ಜೋಡಿಯ ಎದುರು ಬಜ್​ಬಾಲ್​ ಕಾರ್ಯಗತವಾಗುವುದೇ ಎಂಬ ಪ್ರಶ್ನೆ ಎಲ್ಲರಲ್ಲಿದೆ.

ಇಂಗ್ಲೆಂಡ್​ ಬಜ್​ಬಾಲ್​ ಮೂಲಕವೇ 2022ರಲ್ಲಿ ಪಾಕಿಸ್ತಾನದಲ್ಲಿ 3-0ಯಿಂದ ಟೆಸ್ಟ್​ ಸರಣಿ ಗೆದ್ದಿತ್ತು. ಆದರೆ ಆಗ ಪಾಕ್​ ಬಹುತೇಕ ನಿರ್ಜೀವ ಪಿಚ್​ಗಳನ್ನು ಸಿದ್ಧಪಡಿಸಿತ್ತು ಮತ್ತು ಅದು ಗುಣಮಟ್ಟದ ಸ್ಪಿನ್ನರ್​ಗಳನ್ನು ಹೊಂದಿರಲಿಲ್ಲ. ಹೀಗಾಗಿ ಪಾಕಿಸ್ತಾನದಲ್ಲಿ ಕಂಡ ಗೆಲುವು ಉಪಖಂಡದಲ್ಲೂ ಬಜ್​ಬಾಲ್​ ಯಶಸ್ಸು ಕಾಣುತ್ತದೆ ಎಂಬ ಗ್ಯಾರಂಟಿ ನೀಡುವುದಿಲ್ಲ.

ಇಂಗ್ಲೆಂಡ್​ ತಂಡ ಸರಣಿಗೆ ಕೇವಲ 3 ದಿನ ಮೊದಲಷ್ಟೇ ಭಾರತಕ್ಕೆ ಆಗಮಿಸಿದ್ದರೂ, ಅದಕ್ಕೆ ಮುನ್ನ 10 ದಿನ ಅಬುಧಾಬಿಯಲ್ಲಿ ಏಷ್ಯಾದ ವಾತಾವರಣಕ್ಕೆ ಸಿದ್ಧತೆ ನಡೆಸಿದೆ. ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ವೈಯಕ್ತಿಕ ಕಾರಣದಿಂದಾಗಿ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿರುವುದು ಸರಣಿಗೆ ಮುನ್ನ ಭಾರತಕ್ಕೆ ಪ್ರಮುಖ ಹಿನ್ನಡೆ ಎನಿಸಿದೆ.

ತವರಿನ ಪ್ರಾಬಲ್ಯ ಉಳಿಸುವ ತವಕ

ಭಾರತ ತಂಡ ಕಳೆದ 12 ವರ್ಷಗಳಿಂದ ತವರಿನಲ್ಲಿ ಅಜೇಯವಾಗಿದೆ. ತವರಿನಲ್ಲಿ 7 ಸರಣಿ ಕ್ಲೀನ್​ಸ್ವೀಪ್​ ಸಹಿತ ಸತತ 16 ಟೆಸ್ಟ್​ ಸರಣಿ ಗೆದ್ದ ದಾಖಲೆ ಹೊಂದಿದೆ. ಆದರೆ ಭಾರತ ತಂಡ ಕೊನೆಯದಾಗಿ ತವರಿನಲ್ಲಿ ಸೋತಿದ್ದು ಇಂಗ್ಲೆಂಡ್​ ವಿರುದ್ಧವೇ ಆಗಿದೆ ಎಂಬುದು ಗಮನಾರ್ಹ ಸಂಗತಿ. 2012ರಲ್ಲಿ ಅಲಸ್ಟೈರ್​​ ಕುಕ್​ ವಿರುದ್ಧದ ಭಾರತ ತಂಡ 1&2ರಿಂದ ಸರಣಿ ಸೋತಿತ್ತು. ನಂತರದಲ್ಲಿ ತವರಿನಲ್ಲಿ ಆಂಗ್ಲರ ವಿರುದ್ಧ ಆಡಿದ 2 ಸರಣಿಗಳಲ್ಲಿ ಭಾರತ ಗೆದ್ದಿದೆ. 2016-17ರಲ್ಲಿ 4-1ರಿಂದ ಮತ್ತು 2020-21ರಲ್ಲಿ 3-1ರಿಂದ ಗೆದ್ದಿತ್ತು. ಕಳೆದ 12 ವರ್ಷಗಳಲ್ಲಿ ತವರಿನಲ್ಲಿ ಆಡಿದ 44 ಟೆಸ್ಟ್​ಗಳಲ್ಲಿ ಭಾರತ ಕೇವಲ 3ರಲ್ಲಿ ಮಾತ್ರ ಸೋತಿದೆ.

ಟೀಮ್​ ನ್ಯೂಸ್​:

ಭಾರತ: ಕನ್ನಡಿಗ ಕೆಎಲ್​ ರಾಹುಲ್​ ಕೇವಲ ಬ್ಯಾಟರ್​ ಆಗಿ ಆಡಲಿದ್ದಾರೆ ಎಂದು ಕೋಚ್​ ದ್ರಾವಿಡ್​ ಸ್ಪಷ್ಟಪಡಿಸಿರುವುದರಿಂದ ಕೆಎಸ್​ ಭರತ್​ ಕೀಪಿಂಗ್​ ಮಾಡುವುದು ಬಹುತೇಕ ಖಚಿತವೆನಿಸಿದೆ. ವಿರಾಟ್​ ಕೊಹ್ಲಿ ಗೈರಿನಲ್ಲಿ ಶುಭಮಾನ್​ ಗಿಲ್​&ಶ್ರೇಯಸ್​ ಅಯ್ಯರ್​ ಇಬ್ಬರಿಗೂ 11ರ ಬಳಗದಲ್ಲಿ ಸ್ಥಾನ ಲಭಿಸಲಿದೆ. ಆದರೆ 3ನೇ ಸ್ಪಿನ್ನರ್​ ಬಗ್ಗೆ ಗೊಂದಲವಿದೆ. ಕುಲದೀಪ್​-ಅಕ್ಷರ್​ ಇಬ್ಬರಲ್ಲಿ ಯಾರು ಆಡಬಹುದೆಂದು ನಾಯಕ ರೋಹಿತ್​ ಶರ್ಮ ಬುಧವಾರದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿಲ್ಲ. ಆದರೆ ಬ್ಯಾಟಿಂಗ್​ನಲ್ಲೂ ಉಪಯುಕ್ತರಾಗಬಲ್ಲ ಅಕ್ಷರ್​ ಆಡುವ ಸಾಧ್ಯತೆ ಹೆಚ್ಚಿದೆ.

ಸಂಭಾವ್ಯ ತಂಡ: ರೋಹಿತ್​ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್​, ಶುಭಮಾನ್​ ಗಿಲ್​, ಶ್ರೇಯಸ್​ ಅಯ್ಯರ್​, ಕೆಎಲ್​ ರಾಹುಲ್​, ರವೀಂದ್ರ ಜಡೇಜಾ, ಕೆಎಸ್​ ಭರತ್​ (ವಿ.ಕೀ), ಅಕ್ಷರ್​ ಪಟೇಲ್​/ಕುಲದೀಪ್​, ಆರ್​. ಅಶ್ವಿನ್​, ಜಸ್​ಪ್ರೀತ್​ ಬುಮ್ರಾ, ಮೊಹಮದ್​ ಸಿರಾಜ್​.

ಇಂಗ್ಲೆಂಡ್​: ಪಂದ್ಯಕ್ಕೆ ಮುನ್ನದಿನವೇ ಆಡುವ 11ರ ಬಳಗವನ್ನು ಬಹಿರಂಗಪಡಿಸಿರುವ ಇಂಗ್ಲೆಂಡ್​, ಅನುಭವಿ ವೇಗಿ ಜೇಮ್ಸ್​ ಆಂಡರ್​ಸನ್​ರನ್ನು ಕೈಬಿಟ್ಟಿರುವುದು ಅಚ್ಚರಿ ಎನಿಸಿದೆ. ಸ್ಪಿನ್​ ಸ್ನೇಹಿ ಪಿಚ್​ನ ಲಾಭವೆತ್ತಲು ಮೂವರು ಸ್ಪಿನ್ನರ್​ಗಳನ್ನು ಆಡಿಸಲಿದ್ದು, ಮಾರ್ಕ್​ ವುಡ್​ ಏಕೈಕ ವೇಗಿಯಾಗಿದ್ದಾರೆ. ಇತ್ತೀಚೆಗಷ್ಟೇ ಗಾಯದಿಂದ ಚೇತರಿಸಿಕೊಂಡಿರುವ ನಾಯಕ ಬೆನ್​ ಸ್ಟೋಕ್ಸ್​ ಸರಣಿಯಲ್ಲಿ ಬೌಲಿಂಗ್​ ಮಾಡುವುದಿಲ್ಲವೆಂದು ಖಚಿತಪಡಿಸಿದ್ದಾರೆ. ಯುವ ಲೆಗ್​ ಸ್ಪಿನ್ನರ್​ ರೆಹನ್​ ಅಹ್ಮದ್​ ಜತೆಗೆ ಎಡಗೈ ಸ್ಪಿನ್ನರ್​ಗಳಾದ ಜಾಕ್​ ಲೀಚ್​ ಮತ್ತು ಟಾಮ್​ ಹಾರ್ಟ್ಲಿ ಭಾರತಕ್ಕೆ ಸವಾಲೊಡ್ಡಲಿದ್ದಾರೆ. ಬೆರ್​ಸ್ಟೋ ಬ್ಯಾಟರ್​ ಆಗಿ ಆಡಲಿದ್ದು, ಬೆನ್​ ಫೋಕ್ಸ್​ ಕೀಪರ್​ ಆಗಿದ್ದಾರೆ.

ಸಂಭಾವ್ಯ ತಂಡ: ಜಾಕ್​ ಕ್ರೌಲಿ, ಬೆನ್​ ಡಾಕೆಟ್​, ಒಲಿ ಪೋಪ್​, ಜೋ ರೂಟ್​, ಜಾನಿ ಬೇರ್​ಸ್ಟೋ, ಬೆನ್​ ಸ್ಟೋಕ್ಸ್​ (ನಾಯಕ), ಬೆನ್​ ಫೋಕ್ಸ್​ (ವಿ.ಕೀ), ರೆಹನ್​ ಅಹ್ಮದ್​, ಟಾಮ್​ ಹಾರ್ಟ್ಲಿ, ಮಾರ್ಕ್​ ವುಡ್​, ಜಾಕ್​ ಲೀಚ್​.

ಅಶ್ವಿನ್​ 500, ಜಡೇಜಾ 300ರ ಮೇಲೆ ಕಣ್ಣು

ಅಶ್ವಿನ್​-ಜಡೇಜಾ ಸ್ಪಿನ್​ ಜೋಡಿ ಸರಣಿಯಲ್ಲಿ ಆಂಗ್ಲರನ್ನು ಕಾಡುವ ಜತೆಗೆ ವೈಯಕ್ತಿಕ ಮೈಲಿಗಲ್ಲಿನ ಮೇಲೂ ಕಣ್ಣಿಟ್ಟಿದೆ. ಅಶ್ವಿನ್​ಗೆ (490) ಟೆಸ್ಟ್​ ಕ್ರಿಕೆಟ್​ನಲ್ಲಿ 500 ವಿಕೆಟ್​ ಕಬಳಿಸಿದ 2ನೇ ಭಾರತೀಯರೆನಿಸಲು ಕೇವಲ 10 ವಿಕೆಟ್​ ಬೇಕಿದ್ದರೆ, ಜಡೇಜಾಗೆ (275) 300 ವಿಕೆಟ್​ ಪೂರೈಸಲು 25 ವಿಕೆಟ್​ ಬೇಕಿದೆ.

ಟೆಸ್ಟ್​ ಸರಣಿ ವೇಳಾಪಟ್ಟಿ

ಪಂದ್ಯ ದಿನಾಂಕ ಸ್ಥಳ

1. ಜ.25-29 ಹೈದರಾಬಾದ್​

2. ಫೆ. 2-6 ವಿಶಾಖಪಟ್ಟಣ

3. ಫೆ.15-19 ರಾಜ್​ಕೋಟ್​

4. ಫೆ. 23-27 ರಾಂಚಿ

5. ಮಾ. 7-11 ಧರ್ಮಶಾಲಾ

ಪಂದ್ಯ ಆರಂಭ: ಬೆಳಗ್ಗೆ 9.30

ನೇರಪ್ರಸಾರ: ಸ್ಪೋರ್ಟ್ಸ್​18, ಜಿಯೋಸಿನಿಮಾ

*ಹಿಂದಿನ ದಾಖಲೆಗಳು ಏನೇ ಇದ್ದರೂ ಅವು ನಾವು ಈ ಸರಣಿಯನ್ನೂ ಗೆಲ್ಲಲಿದ್ದೇವೆ ಎಂಬ ಗ್ಯಾರಂಟಿಯನ್ನು ನೀಡುವುದಿಲ್ಲ. ಅದಕ್ಕೆ ನಾವು ಈ ಸಲವೂ ಅತ್ಯುತ್ತಮ ಕ್ರಿಕೆಟ್​ ಆಡುವುದು ಅಗತ್ಯ. ನಮ್ಮನ್ನು ತವರಿನಲ್ಲಿ ಕೊನೆಯದಾಗಿ ಸೋಲಿಸಿದ ತಂಡ ಇಂಗ್ಲೆಂಡ್​. ನಮ್ಮದು ಸೋಲಿಸಲಾಗದ ತಂಡವೆಂದು ಹೇಳಲಾರೆ. ನಾವು ನಮ್ಮ ಶ್ರೇಷ್ಠ ನಿರ್ವಹಣೆ ತೋರದಿದ್ದರೆ ಖಂಡಿತವಾಗಿಯೂ ಸಂಕಷ್ಟಕ್ಕೆ ಸಿಲುಕಲಿದ್ದೇವೆ.

| ರೋಹಿತ್​ ಶರ್ಮ, ಟೀಮ್​ ಇಂಡಿಯಾ ನಾಯಕ

*ದಿಟ್ಟ ಅಥವಾ ಕೆಚ್ಚೆದೆಯ ನಿರ್ಧಾರ ಎನ್ನುವುದಕ್ಕಿಂತ ನಾವು ಪಿಚ್​ ಗಮನದಲ್ಲಿಟ್ಟುಕೊಂಡು ನಮ್ಮ ಆಡುವ 11ರ ಬಳಗವನ್ನು ಆರಿಸಿದ್ದೇವೆ. ಇದು ನಮಗೆ ಗೆಲುವು ತಂದುಕೊಡುವ ಅವಕಾಶವಿರುವ ಅತ್ಯುತ್ತಮ ತಂಡವೆಂದು ಭಾವಿಸಿದ್ದೇವೆ. ಯಾವುದೇ ತಂಡಕ್ಕೆ ಭಾರತದಲ್ಲಿ ಆಡುವುದು ಕಠಿಣ ಸವಾಲು. ಇತಿಹಾಸ ನಿರ್ಮಿಸುವ ಈ ಅವಕಾಶವನ್ನು ನಾವು ಆನಂದಿಸುತ್ತೇವೆ.

| ಬೆನ್​ ಸ್ಟೋಕ್ಸ್​, ಇಂಗ್ಲೆಂಡ್​ ನಾಯಕ

ಕೊಹ್ಲಿ ಸ್ಥಾನ ತುಂಬಿದ ಪಾಟೀದಾರ್​

ವೈಯಕ್ತಿಕ ಕಾರಣ ನೀಡಿ ಸರಣಿಯ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿರುವ ಸ್ಟಾರ್​ ಬ್ಯಾಟರ್​ ವಿರಾಟ್​ ಕೊಹ್ಲಿ ಸ್ಥಾನವನ್ನು ಮಧ್ಯಪ್ರದೇಶದ ರಜತ್​ ಪಾಟೀದಾರ್​ ತುಂಬಿದ್ದಾರೆ. 30 ವರ್ಷದ ಪಾಟೀದಾರ್​ ಇತ್ತೀಚೆಗೆ ಇಂಗ್ಲೆಂಡ್​ ಲಯನ್ಸ್​ ವಿರುದ್ಧದ ಚತುರ್ದಿನ ಪಂದ್ಯದಲ್ಲಿ ಭಾರತ ಎ ಪರ ಶತಕ ಸಿಡಿಸಿ ಮಿಂಚಿದ್ದರು.