ಬೆಂಗಳೂರು: 2007ರಲ್ಲಿ ಆಟಗಾರರಾಗಿ ಜತೆಯಾಗಿ ಟಿ20 ವಿಶ್ವಕಪ್ ಗೆದ್ದಿದ್ದ ಗೌತಮ್ ಗಂಭೀರ್ ಮತ್ತು ರೋಹಿತ್ ಶರ್ಮ ಇದೀಗ 18 ವರ್ಷಗಳ ಬಳಿಕ ಕೋಚ್-ಕ್ಯಾಪ್ಟನ್ ಆಗಿ ಮತ್ತೊಂದು ಐಸಿಸಿ ಟ್ರೋಫಿ ಗೆಲುವಿನ ಸಾಧನೆ ತೋರಿದ್ದಾರೆ. ಇದಕ್ಕೆ ಅವರಿಬ್ಬರು ಕೆಲ ವಿಶೇಷ ಕಾರ್ಯತಂತ್ರಗಳನ್ನು ಅನುಸರಿಸಿ ದುಬೈ ವಾತಾವರಣದ ಸಂಪೂರ್ಣ ಲಾಭ ಎತ್ತಿದ್ದು ಪ್ರಮುಖ ಕಾರಣವಾಗಿದೆ. ಭಾರತ 12 ವರ್ಷಗಳ ಬಳಿಕ ಮತ್ತು 3ನೇ ಬಾರಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ನೆರವಾದ ಅಂಥ ಕೆಲ ವಿಶೇಷ ಕಾರ್ಯತಂತ್ರಗಳ ವಿವರಣೆ ಇಲ್ಲಿದೆ...
ಐವರು ಸ್ಪಿನ್ನರ್ಗಳ ಆಯ್ಕೆ
ಕಳೆದ ವರ್ಷ ಅಮೆರಿಕ&ವೆಸ್ಟ್ ಇಂಡೀಸ್ನಲ್ಲಿ ನಡೆದ ಟಿ20 ವಿಶ್ವಕಪ್ಗೆ ನಾಲ್ವರು ಸ್ಪಿನ್ನರ್ಗಳನ್ನು ಕರೆದೊಯ್ದು ಯಶಸ್ಸು ಕಂಡಿದ್ದ ಭಾರತ ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಐವರು ಸ್ಪಿನ್ನರ್ಗಳನ್ನು ಆರಿಸಿತು. ಈ ಬಗ್ಗೆ ಟೂರ್ನಿಗೆ ಮುನ್ನ ಟೀಕೆಗಳು ವ್ಯಕ್ತವಾಗಿದ್ದರೂ, ಇದಕ್ಕೆ ಗಂಭೀರ್-ರೋಹಿತ್ ತಲೆಕೆಡಿಸಿಕೊಂಡಿರಲಿಲ್ಲ. ಅಲ್ಲದೆ ತಂಡದಲ್ಲಿ ಇಬ್ಬರಷ್ಟೇ (ಕುಲದೀಪ್, ಚಕ್ರವರ್ತಿ) ಸ್ಪಿನ್ನರ್ಗಳಿದ್ದಾರೆ. ಉಳಿದ ಮೂವರು (ಅಕ್ಷರ್, ಜಡೇಜಾ, ವಾಷಿಂಗ್ಟನ್) ಸ್ಪಿನ್ ಬೌಲಿಂಗ್ ಆಲ್ರೌಂಡರ್ಗಳು ಎಂಬ ಸಮರ್ಥನೆಯನ್ನೂ ನೀಡಿದ್ದರು. ಅದರಲ್ಲೂ, ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಮಿಂಚಿದ್ದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿಯನ್ನು ಕೊನೇಕ್ಷಣದಲ್ಲಿ ಬ್ಯಾಟರ್ ಯಶಸ್ವಿ ಜೈಸ್ವಾಲ್ ಬದಲಿಗೆ 15ರ ಬಳಗಕ್ಕೆ ಸೇರಿಸಿಕೊಂಡಿದ್ದು ಮಾಸ್ಟರ್ ಸ್ಟ್ರೊಕ್ ಎನಿಸಿತು. ನಾಲ್ವರು ಸ್ಪಿನ್ನರ್ಗಳನ್ನು 11ರ ಬಳಗದಲ್ಲಿ ಆಡಿಸುವ ಮೂಲಕ ಭಾರತ ದುಬೈ ಪಿಚ್ಅನ್ನು ಸಮರ್ಥವಾಗಿ ಬಳಸಿಕೊಂಡಿತು.
ಅಕ್ಷರ್ಗೆ ಬಡ್ತಿ, ರಾಹುಲ್ ಕೀಪರ್
ಅಕ್ಷರ್ ಪಟೇಲ್ಗೆ 5ನೇ ಕ್ರಮಾಂಕಕ್ಕೆ ಬಡ್ತಿ ನೀಡಿದ ಕ್ರಮಕ್ಕೆ ಆರಂಭದಲ್ಲಿ ಟೀಕೆಗಳು ವ್ಯಕ್ತವಾದರೂ, ಭಾರತ ಈ ಕಾರ್ಯತಂತ್ರವನ್ನು ಮುಂದುವರಿಸಿತು. ಇದರಿಂದ ಭಾರತಕ್ಕೆ 2 ಪ್ರಮುಖ ಲಾಭಗಳಾದವು. ಮೊದಲನೆಯದಾಗಿ ಮಧ್ಯಮ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್ ಕೊರತೆ ನೀಗಿತು. ಎರಡನೆಯದಾಗಿ 3ನೇ ಆಲ್ರೌಂಡರ್ ಬಳಕೆಯಿಂದ 6ನೇ ಬೌಲರ್ ಕೊರತೆಯೂ ಕಾಡಲಿಲ್ಲ. ಇನ್ನು ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಮೊದಲ ಆದ್ಯತೆಯ ವಿಕೆಟ್ ಕೀಪರ್ ಆಗಿ ಬಳಸಿಕೊಳ್ಳುವ ಮೂಲಕ, ಕೆಲವೊಮ್ಮೆ ಅನಗತ್ಯವಾಗಿ ವಿಕೆಟ್ ಕೈಚೆಲ್ಲುವ ಚಾಳಿಯ ರಿಷಭ್ ಪಂತ್ರನ್ನು ಹೊರಗಿಟ್ಟಿತು. ರಾಹುಲ್ ಸೆಮಿಫೈನಲ್, ಫೈನಲ್ನಲ್ಲಿ ಫಿನಿಷರ್ ಪಾತ್ರವನ್ನು ಪಕ್ವತೆಯಿಂದ ನಿಭಾಯಿಸಿ ತನ್ನ ಆಯ್ಕೆಗೆ ಸಮರ್ಥನೆಯನ್ನೂ ನೀಡಿದರು.
ಆಲ್ರೌಂಡರ್ಗಳಿಗೆ ಆದ್ಯತೆ
2023ರ ತವರಿನ ಏಕದಿನ ವಿಶ್ವಕಪ್ ವೇಳೆ ಹಾರ್ದಿಕ್ ಪಾಂಡ್ಯ ಗಾಯದಿಂದಾಗಿ ಟೂರ್ನಿಯ ನಡುವೆ ಹೊರಬಿದ್ದ ಬಳಿಕ ಭಾರತಕ್ಕೆ 6ನೇ ಬೌಲರ್ ಕೊರತೆ ಕಾಡಿತ್ತು ಮತ್ತು ಸಂಪೂರ್ಣವಾಗಿ ಐವರು ತಜ್ಞ ಬೌಲರ್ಗಳನ್ನೇ ನೆಚ್ಚಿಕೊಳ್ಳುವಂತಾಯಿತು. ಭಾರತದ ಪ್ರಮುಖ ಬ್ಯಾಟರ್ಗಳು ಅರೆಕಾಲಿಕ ಬೌಲರ್ಗಳಾಗಿರದೆ ಇರುವುದು ಇದಕ್ಕೆ ಕಾರಣವಾಗಿತ್ತು. ಹೀಗಾಗಿ ಭಾರತ ಈ ಬಾರಿ ಮೂವರು ಆಲ್ರೌಂಡರ್ಗಳಿಗೆ (ಹಾರ್ದಿಕ್, ಅಕ್ಷರ್, ಜಡೇಜಾ) ಆಡುವ 11ರ ಬಳಗದಲ್ಲಿ ಸ್ಥಾನ ಕಲ್ಪಿಸುವ ಮೂಲಕ ಆರನೇ ಬೌಲರ್ ಕೊರತೆ ನೀಗಿಸಿಕೊಂಡಿತು. ಇನ್ನು ಹಾರ್ದಿಕ್ ಪಾಂಡ್ಯ 2ನೇ ವೇಗಿಯಾಗಿ ಹೊಸ ಚೆಂಡಿನಲ್ಲೇ ದಾಳಿಗೆ ಇಳಿದಿದ್ದರಿಂದ ಭಾರತ ನಾಲ್ವರು ಸ್ಪಿನ್ನರ್ಗಳ ಕಾರ್ಯತಂತ್ರವನ್ನು ಯಶಸ್ವಿಗೊಳಿಸಲು ನೆರವಾಯಿತು.
ತಂಡ ಆಯ್ಕೆಯಲ್ಲಿ ದಿಟ್ಟ ನಡೆ
ಈ ಸಲ ಚಾಂಪಿಯನ್ಸ್ ಟ್ರೋಫಿಗೆ 15ರ ಬಳಗವನ್ನು ಆರಿಸುವಾಗಲೇ ಭಾರತ ತಂಡದ ಮ್ಯಾನೇಜ್ಮೆಂಟ್ ಕೆಲ ಬೋಲ್ಡ್ ಹೆಜ್ಜೆ ಇಟ್ಟಿತು. ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ತನಗೆ ಏನು ಬೇಕೋ ಅದನ್ನು ಆಯ್ದುಕೊಳ್ಳುವುದಕ್ಕೆ ಆದ್ಯತೆ ನೀಡಿತು. ಕಳೆದ 2 ವರ್ಷಗಳಿಂದ ಭಾರತ ಪರ ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ವೇಗಿ ಆಗಿದ್ದರೂ, ಹಳೆಯ ಚೆಂಡಿನಲ್ಲಿ ಪರಿಣಾಮಕಾರಿ ಎನಿಸದ ಕಾರಣ ಮೊಹಮದ್ ಸಿರಾಜ್ರನ್ನು ಹೊರಗಿಡಲಾಯಿತು. ಜಸ್ಪ್ರೀತ್ ಬುಮ್ರಾ ಫಿಟ್ ಆಗದೆ ಟೂರ್ನಿಯಿಂದ ಹೊರಬಿದ್ದಾಗ ಯುವವೇಗಿ ಹರ್ಷಿತ್ ರಾಣಾಗೆ ಸ್ಥಾನ ಕಲ್ಪಿಸಲಾಯಿತು. ಇನ್ನು ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ರನ್ನು ಕೊನೇಕ್ಷಣದಲ್ಲಿ ಕೈಬಿಟ್ಟು, ತವರಿನ ಇಂಗ್ಲೆಂಡ್ ವಿರುದ್ಧ ಟಿ20 ಸರಣಿಯಲ್ಲಿ ಮಿಂಚಿದ್ದ ವರುಣ್ ಚಕ್ರವರ್ತಿಗೆ 5ನೇ ಸ್ಪಿನ್ನರ್ ಆಗಿ ತಂಡಕ್ಕೆ ಪ್ರವೇಶ ನೀಡಲಾಯಿತು. ಅದುವರೆಗೆ ಏಕದಿನ ಪಂದ್ಯವನ್ನೇ ಆಡಿರದ ಚಕ್ರವರ್ತಿಯನ್ನು ಸೇರಿಸಿದ್ದು ಅತ್ಯಂತ ರಿಸ್ಕ್ನಿಂದ ಕೂಡಿದ ನಡೆಯಾಗಿತ್ತು.
ರೋಹಿತ್ ಶರ್ಮ ಪವರ್ಪ್ಲೇ
ತವರಿನ 2023ರ ಏಕದಿನ ವಿಶ್ವಕಪ್ನಲ್ಲಿ ಆರಂಭದಲ್ಲೇ ಬಿರುಸಿನ ಆಟವಾಡುವ ಮೂಲಕ "ಪವರ್ಪ್ಲೇ ಓವರ್ಗಳ ಲಾಭವೆತ್ತಿದ್ದ ನಾಯಕ ರೋಹಿತ್ ಶರ್ಮ ಹೆಚ್ಚಿನ ಪಂದ್ಯಗಳಲ್ಲಿ ಉಪಯುಕ್ತ ಕೊಡುಗೆ ನೀಡಿದ್ದರು. ಆಸ್ಟ್ರೆಲಿಯಾ ವಿರುದ್ಧದ ಫೈನಲ್ನಲ್ಲೂ ಭಾರತಕ್ಕೆ ಬಿರುಸಿನ ಆರಂಭ ಒದಗಿಸಿದ್ದರು. ಆದರೆ ಆಗ ಅವರು ಔಟಾದ ಬಳಿಕ ಭಾರತ ಕುಸಿದು ಮುಗ್ಗರಿಸಿತ್ತು. ಈ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲೂ ಇದೇ "ಪವರ್ಪ್ಲೇ' ಮುಂದುವರಿಸಿದ ರೋಹಿತ್, ಕಿವೀಸ್ ವಿರುದ್ಧದ ಫೈನಲ್ನಲ್ಲಿ ಸ್ಪರ್ಧಾತ್ಮಕ ಮೊತ್ತದ ಚೇಸಿಂಗ್ ವೇಳೆ ಎಲ್ಲಕ್ಕಿಂತ ಹೆಚ್ಚು ನಿರ್ಣಾಯಕ ಪಾತ್ರ ವಹಿಸಿದರು. ಆರಂಭದಲ್ಲೇ ವೇಗವಾಗಿ ರನ್ ಗಳಿಸಿ ಕಿವೀಸ್ ಬೌಲರ್ಗಳ ಮೇಲೆ ಅವರು ಒತ್ತಡ ಹೇರಿದ್ದರಿಂದ ಭಾರತದ ಮಧ್ಯಮ ಕ್ರಮಾಂಕ ಹೆಚ್ಚಿನ ಒತ್ತಡವಿಲ್ಲದೆ ಯಶಸ್ವಿ ಚೇಸಿಂಗ್ ಮಾಡುವಂತಾಯಿತು.