ಕ್ರೀಡೆ

ಅಮೆರಿಕ ಟಿ20 ತಂಡದಲ್ಲಿ ಭಾರತೀಯರ ಪ್ರಾಬಲ್ಯ; ನ್ಯೂಜಿಲೆಂಡ್​ನ ಕೋರಿ ಆಂಡರ್​ಸನ್​ಗೂ ಸ್ಥಾನ!

ನ್ಯೂಯಾರ್ಕ್​: ಮುಂಬರುವ ಟಿ20 ವಿಶ್ವಕಪ್​ ಟೂರ್ನಿಗೆ ಪೂರ್ವಭಾವಿಯಾಗಿ ಆತಿಥೇಯ ಅಮೆರಿಕ ತಂಡ ಏಪ್ರಿಲ್​ನಲ್ಲಿ ಕೆನಡ ವಿರುದ್ಧ ಆಡಲಿರುವ 5 ಪಂದ್ಯಗಳ ಟಿ20 ಸರಣಿಗೆ 15 ಆಟಗಾರರ ತಂಡವನ್ನು ಪ್ರಕಟಿಸಲಾಗಿದ್ದು, ಭಾರತ ಮೂಲದ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನ ಪಡೆದಿದ್ದಾರೆ. ಮುಂಬೈ ಮತ್ತು ರಾಜಸ್ಥಾನ ರಾಯಲ್ಸ್​ ತಂಡಗಳ ಮಾಜಿ ಎಡಗೈ ಸ್ಪಿನ್ನರ್​ ಹಮೀರ್ತ್​ ಸಿಂಗ್​ ಮತ್ತು ಆರ್​ಸಿಬಿಯ ಮಾಜಿ ಬ್ಯಾಟರ್​ ಮಿಲಿಂದ್​ ಕುಮಾರ್​ ಇದರಲ್ಲಿ ಪ್ರಮುಖವಾದವರು. ಇವರಿಬ್ಬರು ಇತ್ತೀಚೆಗೆ ಭಾರತದಿಂದ ವಲಸೆ ಹೋಗಿ ಅಮೆರಿಕದಲ್ಲಿ ನೆಲೆಸಿದ್ದರು.

ಹಮೀರ್ತ್​ ಸಿಂಗ್​ 2012ರಲ್ಲಿ 19 ವಯೋಮಿತಿ ವಿಶ್ವಕಪ್​ ಗೆದ್ದ ಭಾರತ ತಂಡದ ಪ್ರಮುಖ ಆಟಗಾರರೂ ಆಗಿದ್ದರು. ಆ ತಂಡದ ನಾಯಕರಾಗಿದ್ದ ಉನ್ಮುಕ್​ ಚಂದ್​ ಕೂಡ ಅಮೆರಿಕಕ್ಕೆ ವಲಸೆ ಹೋಗಿ ಮೇಜರ್​ ಕ್ರಿಕೆಟ್​ ಲೀಗ್​ನಲ್ಲಿ ಆಡಿದ್ದರು. ಆದರೂ ಅಮೆರಿಕದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಲರಾಗಿದ್ದಾರೆ. ನ್ಯೂಜಿಲೆಂಡ್​ನ ಮಾಜಿ ಆಲ್ರೌಂಡರ್​ ಕೋರಿ ಆಂಡರ್​ಸನ್​ ಅಮೆರಿಕ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಮತ್ತೋರ್ವ ಪ್ರಮುಖರು.

2012ರಿಂದ 2018ರ ನಡುವೆ ಕಿವೀಸ್​ ಪರ 13 ಟೆಸ್ಟ್​, 49 ಏಕದಿನ ಮತ್ತು 31 ಟಿ20 ಪಂದ್ಯಗಳನ್ನು ಆಡಿರುವ ಕೋರಿ ಆಂಡರ್​ಸನ್​, 2014ರಲ್ಲಿ ವಿಂಡೀಸ್​ ವಿರುದ್ಧ 36 ಎಸೆತಗಳಲ್ಲೇ ಶತಕ ಸಿಡಿಸಿದ್ದು, ಆಗ ಏಕದಿನ ಕ್ರಿಕೆಟ್​ನಲ್ಲಿ ಅತಿವೇಗದ ಶತಕದ ವಿಶ್ವದಾಖಲೆ ಎನಿಸಿತ್ತು. 33 ವರ್ಷದ ಕೋರಿ ಆಂಡರ್​ಸನ್​ ಎರಡು ದೇಶಗಳ ಪರ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಿದ ಅಪರೂಪದ ಆಟಗಾರರ ಸಾಲಿಗೂ ಸೇರಲಿದ್ದಾರೆ.

ಗುಜರಾತ್​ ಮೂಲದ ವಿಕೆಟ್​ ಕೀಪರ್​-ಬ್ಯಾಟರ್​ ಮೋನಂಕ್​ ಪಟೇಲ್​ ಅಮೆರಿಕ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಗಜಾನಂದ್​ ಸಿಂಗ್​, ಜೆಸ್ಸಿ ಸಿಂಗ್​, ನಿಸರ್ಗ್​ ಪಟೇಲ್​, ನಿತೀಶ್​ ಕುಮಾರ್​, ಸೌರಭ್​ ನೇತ್ರವಲ್ಕರ್​ ತಂಡದಲ್ಲಿರುವ ಇತರ ಭಾರತ ಮೂಲದ ಆಟಗಾರರಾಗಿದ್ದಾರೆ.