ಕ್ರೀಡೆ

ಹಸೆಮಣೆಗೇರಿದ ಟೀಮ್ ಇಂಡಿಯಾ ಆಲ್ರೌಂಡರ್ ವಿಜಯ್ ಶಂಕರ್

ಚೆನ್ನೈ: ಭಾರತ ತಂಡದ ಆಲ್ರೌಂಡರ್ ವಿಜಯ್‌ಶಂಕರ್ ಬುಧವಾರ ಚೆನ್ನೈನಲ್ಲಿ ಹಣೆಮಣೆ ಏರಿದರು. ಶಿಕ್ಷಕಿಯಾಗಿರುವ ವೈಶಾಲಿ ವಿಶ್ವೇಶ್ವರನ್ ಎಂಬುವರನ್ನು ಕುಟುಂಬ ಸದಸ್ಯರ ಸಮ್ಮುಖದಲ್ಲಿ ವರಿಸಿದರು. ಕೋವಿಡ್-19 ಮಾರ್ಗಸೂಚಿಯಿಂದಾಗಿ ಎರಡು ಕುಟುಂಬಗಳ ಸದಸ್ಯರಿಗಷ್ಟೇ ಆಮಂತ್ರಣ ನೀಡಲಾಗಿತ್ತು. ಭಾರತದ ಮತ್ತೋರ್ವ ಕ್ರಿಕೆಟಿಗ ಯಜುವೇಂದ್ರ ಚಾಹಲ್ ವಿವಾಹವೂ ಇತ್ತೀಚೆಗಷ್ಟೇ ದಂತವೈದ್ಯೆ, ಡ್ಯಾನ್ಸರ್ ಧನಶ್ರೀ ವರ್ಮ ಜತೆ ನಡೆದಿತ್ತು.

ತಮಿಳುನಾಡಿನ ಅಯ್ಯರ್ ಕುಟುಂಬದವರಾದ ವಿಜಯ್ ಶಂಕರ್ ಹಾಗೂ ವೈಶಾಲಿ ಅವರ ನಿಶ್ಚಿತಾರ್ಥ ಸಮಾರಂಭ ಕಳೆದ ಆಗಸ್ಟ್ ತಿಂಗಳಲ್ಲಿ ನಡೆದಿತ್ತು. 29 ವರ್ಷದ ವಿಜಯ್ ಶಂಕರ್, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ತಮಿಳುನಾಡಿನ ಪರ ಲೀಗ್ ಹಂತದಲ್ಲಿ ಆಡಿದ್ದರು. ಬಳಿಕ ಮದುವೆ ಹಿನ್ನೆಲೆಯಲ್ಲಿ ನಾಕೌಟ್ ಹಂತದಿಂದ ಹಿಂದೆ ಸರಿದಿದ್ದಾರೆ. ಕೋಲ್ಕತದಲ್ಲಿ ನಡೆದ ಲೀಗ್ ಹಂತದಲ್ಲಿ ವಿಜಯ್ ಶಂಕರ್ 5 ಪಂದ್ಯಗಳನ್ನೂ ಆಡಿದ್ದರು.

ನಾಕೌಟ್ ಹಂತಕ್ಕೆ ಅಲಭ್ಯತೆ ಕುರಿತು ವಿಜಯ್ ಶಂಕರ್ ಈ ಮೊದಲೇ ಟಿಎನ್‌ಸಿಎಗೆ ತಿಳಿಸಿದ್ದರು. ಆದರೆ, ಕರೊನಾ ಮಾರ್ಗಸೂಚಿ ಹಾಗೂ ಕ್ವಾರಂಟೈನ್ ಅವಧಿಯಿಂದಾಗಿ ವಿಜಯ್ ಶಂಕರ್ ಬದಲಿಗೆ ಟಿಎನ್‌ಸಿಎ ಬದಲಿ ಆಟಗಾರರನ್ನು ಪ್ರಕಟಿಸಿರಲಿಲ್ಲ.