ನವದೆಹಲಿ: ಟಿ20 ವಿಶ್ವಕಪ್ ಗೆಲುವಿನ ಗುಂಗಿನಿಂದ ಯಾರು ಆಚೆ ಬಂದಿಲ್ಲ. ಟೀಮ್ ಇಂಡಿಯಾ ಆಟಗಾರರ ಜತೆಗೆ ಇಡೀ ಭಾರತವೇ ವಿಶ್ವಕಪ್ ಗೆದ್ದ ಖುಷಿಯ ಅಲೆಯಲ್ಲಿ ತೇಲಾಡುತ್ತಿದೆ. ರೋಹಿತ್ ಪಡೆ ಕಪ್ ಪಡೆದ ಕ್ಷಣಗಳನ್ನು ಇನ್ನೂ ಹಸಿರಾಗಿವೆ. 13 ವರ್ಷಗಳ ವಿಶ್ವಕಪ್ ಕನಸು ನನಸಾಗುತ್ತಿದ್ದಂತೆ ಎಲ್ಲರೂ ಸಂಭ್ರಮಾಚರಣೆಯಲ್ಲಿ ನಿರತರಾಗಿದ್ದಾರೆ. ಒಂದೆಡೆ ಮೆಗಾ ಟೂರ್ನಮೆಂಟ್ ಬಗ್ಗೆ ಎಲ್ಲರು ಮಾತನಾಡುತ್ತಿದ್ದರೆ ಮತ್ತೊಂದೆಡೆ ಮೆನ್ ಇನ್ ಬ್ಲೂ ಕುತೂಹಲಕಾರಿ ಸರಣಿಗೆ ಸಜ್ಜಾಗಿದೆ.
ಹೌದು, ಭಾರತ ತಂಡ ಜಿಂಬಾಬ್ವೆ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಯುವ ಆರಂಭಿಕ ಆಟಗಾರ ಶುಭಮನ್ ಗಿಲ್ ಈ ತಂಡದ ನಾಯಕರಾಗಲಿದ್ದಾರೆ. ಇವರೊಂದಿಗೆ ಅಭಿಷೇಕ್ ಶರ್ಮ, ರಿಂಕು ಸಿಂಗ್, ರುತುರಾಜ್ ಗಾಯಕ್ವಾಡ್, ಧ್ರುವ್ ಜುರೆಲ್ ಮತ್ತು ವಾಷಿಂಗ್ಟನ್ ಸುಂದರ್ ಕೂಡ ಈ ಸರಣಿಯಲ್ಲಿ ಭಾರತಕ್ಕಾಗಿ ಆಡಲಿದ್ದಾರೆ.
ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟ್ಸ್‌ಮನ್ ರಿಯಾನ್ ಪರಾಗ್ ಕೂಡ ಈ ಸರಣಿಯಲ್ಲಿ ಆಡುವ ಅವಕಾಶ ಪಡೆದಿದ್ದಾರೆ. ಈ ಮೂಲಕ ಟೀಮ್ ಇಂಡಿಯಾಗೆ ಪದಾರ್ಪಣೆ ಮಾಡಲು ಉತ್ಸುಕರಾಗಿದ್ದಾರೆ. ಜಿಂಬಾಬ್ವೆ ವಿರುದ್ಧ ತಮ್ಮ ಐಪಿಎಲ್ ಫಾರ್ಮ್ ಅನ್ನು ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಅಮೋಘ ಇನ್ನಿಂಗ್ಸ್ ಆಡುವ ಮೂಲಕ ತಂಡದಲ್ಲಿ ತಮ್ಮ ಸ್ಥಾನವನ್ನು ಕಾಯಂ ಮಾಡಿಕೊಳ್ಳಲು ಬಯಸಿದ್ದಾರೆ. ಇದರ ಬೆನ್ನಲ್ಲೇ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ವಿಶ್ವಕಪ್ ಹೀರೋ ಶ್ರೀಶಾಂತ್, ರಿಯಾನ್ ಪರಾಗ್ ವಿರುದ್ಧ ಕಿಡಿಕಾರಿದ್ದಾರೆ.
ಭಾರತ ತಂಡದಲ್ಲಿ ಆಡುವ ಮುನ್ನ ದೇಶಪ್ರೇಮವನ್ನು ಬೆಳೆಸಿಕೊಳ್ಳಿ ಎಂದು ಪರಾಗ್ಗೆ ಶ್ರೀಶಾಂತ್ ಬುದ್ಧಿಮಾತು ಹೇಳಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಭಾರತ ಆಡಿದ ಪಂದ್ಯಗಳನ್ನು ನೋಡಿಲ್ಲ ಎಂದು ಕೆಲವರು ಹೇಳುತ್ತಾರೆ. ತಂಡಕ್ಕೆ ಆಯ್ಕೆಯಾಗದ ಕಾರಣ ಪಂದ್ಯಗಳನ್ನು ವೀಕ್ಷಿಸುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದು ಎಷ್ಟು ಸರಿ? ಟೀಮ್ ಇಂಡಿಯಾ ಆಡುವ ಪಂದ್ಯಗಳನ್ನು ವೀಕ್ಷಿಸಲು ಸಾಧ್ಯವಾಗದವರು ದೇಶವನ್ನು ಪ್ರತಿನಿಧಿಸಲು ಅರ್ಹರೇ? ಎಂದು ಶ್ರೀಶಾಂತ್ ಪ್ರಶ್ನಿಸಿದ್ದಾರೆ.
ಇತ್ತೀಚೆಗಷ್ಟೇ ಪಾಡ್‌ಕಾಸ್ಟ್ ಶೋವೊಂದರಲ್ಲಿ ಭಾಗವಹಿಸಿದ್ದ ರಿಯಾನ್ ಪರಾಗ್, ಭಾರತ ತಂಡ ಆಡುವ ಟಿ20 ವಿಶ್ವಕಪ್ ಪಂದ್ಯಗಳನ್ನು ವೀಕ್ಷಿಸುವುದಿಲ್ಲ ಎಂದು ಹೇಳಿದ್ದರು. ಅಲ್ಲದೆ, ನನಗೆ ವಿಶ್ವಕಪ್‌ನಲ್ಲಿ ಆಡುವ ಆಸೆಯಿದೆ. ಆದರೆ, ಪಂದ್ಯಗಳನ್ನು ಮಾತ್ರ ವೀಕ್ಷಿಸುವುದಿಲ್ಲ ಎಂದು ಹೇಳಿದ್ದರು. ಟೀಮ್ ಇಂಡಿಯಾದ ಪಂದ್ಯಗಳನ್ನು ವೀಕ್ಷಿಸಿದರೆ ಅವರ ಮೇಲೆ ಅನುಮಾನ ಮೂಡುತ್ತದೆ, ತನಗಿಂತ ಇತರ ಆಟಗಾರರು ಉತ್ತಮರು ಹಾಗೂ ಹಿಂದುಳಿದವರು ಎಂಬುದರ ಬಗ್ಗೆ ಅನುಮಾನ ಮೂಡುತ್ತದೆ. ಬಳಿಕ ನೆಟ್ಸ್‌ಗೆ ಹೋಗಿ ಚೆಂಡುಗಳನ್ನು ಬಲವಾಗಿ ಹೊಡೆಯುವುದನ್ನು ಬಿಟ್ಟು ಬೇರೇನೂ ಇಲ್ಲ ಎಂದು ಪರಾಗ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಶಾಂತ್ ಪರಾಗ್ ವಿರುದ್ಧ ಕಿಡಿಕಾರಿದ್ದಾರೆ.
ಕ್ರಿಕೆಟ್ ಪ್ರೇಮಿಗಳು ಮೊದಲು ತಮ್ಮ ದೇಶವನ್ನು ಪ್ರೀತಿಸಬೇಕು. ಎಷ್ಟೇ ಆಟಗಾರನಿದ್ದರೂ ದೇಶಭಕ್ತಿ ಇಲ್ಲ ಅಂದರೆ, ಆ ಪ್ರತಿಭೆ ವ್ಯರ್ಥವೇ ಸರಿ ಎಂದು ಪರಾಗ್ ಅವರನ್ನು ಶ್ರೀಶಾಂತ್ ಟೀಕಿಸಿದ್ದಾರೆ. ಪರಾಗ್ಗೆ ದೇಶಭಕ್ತಿ ಇಲ್ಲ ಎಂಬ ಶ್ರೀಶಾಂತ್ ಕಾಮೆಂಟ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಿ. (ಏಜೆನ್ಸೀಸ್)