ಮಹಿಳಾ ಜಿಮ್ನಾಸ್ಟ್, ಪುರುಷ ಕೋಚ್‌ಗೆ ಒಂದೇ ರೂಮ್: ಏಷ್ಯನ್ ಗೇಮ್ಸ್‌ನಲ್ಲಿ ಆಡಳಿತ ಮಂಡಳಿಯ ಎಡವಟ್ಟು! Indian gymnast Pranathi
- ಏಷ್ಯನ್ ಗೇಮ್ಸ್ ವಸತಿ ವ್ಯವಸ್ಥೆಯಲ್ಲಿ ಆಡಳಿತ ಮಂಡಳಿಯಿಂದ ಗಂಭೀರ ಎಡವಟ್ಟು
- ಭಾರತೀಯ ಜಿಮ್ನಾಸ್ಟ್ ಪ್ರಣತಿ ನಾಯಕ್ ಹಾಗೂ ಪುರುಷ ಕೋಚ್‌ಗೆ ಒಂದೇ ರೂಮ್ ಹಂಚಿಕೆ
- ತೀವ್ರ ವಿರೋಧದ ಬಳಿಕ ಮಧ್ಯರಾತ್ರಿ ಐಒಎ ಮಧ್ಯಪ್ರವೇಶದಿಂದ ಬಗೆಹರಿದ ಸಮಸ್ಯೆ
- ಹೆಸರು ತಪ್ಪಾಗಿ ನಮೂದಿಸಿದ್ದರಿಂದ ಕೋಚ್‌ಗೆ ರೂಮ್ ಕೀ ಪಡೆಯಲು ಮತ್ತೆ ಪರದಾಟ
ನವದೆಹಲಿ: ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತೀಯ ಕ್ರೀಡಾಪಟುಗಳು ಪದಕಗಳ ಬೇಟೆಯಾಡಿ ದೇಶದ ಕೀರ್ತಿ ಪತಾಕೆಯನ್ನು ಹಾರಿಸುತ್ತಿದ್ದರೆ, ಮತ್ತೊಂದೆಡೆ ಆಯೋಜಕರ ಕಡೆಯಿಂದ ನಡೆಯುತ್ತಿರುವ ಬೇಜವಾಬ್ದಾರಿತನ ಹಾಗೂ ಆಡಳಿತಾತ್ಮಕ ಎಡವಟ್ಟುಗಳು ಕ್ರೀಡಾಪಟುಗಳ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿವೆ. ಜಪಾನಿನ ನಗೋಮಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಜಿಮ್ನಾಸ್ಟ್ ಪ್ರಣತಿ ನಾಯಕ್ ( Indian gymnast Pranathi ) ಮತ್ತು ಅವರ ಪುರುಷ ಕೋಚ್ ಅಶೋಕ್ ಮಿಶ್ರಾ ಅವರಿಗೆ ಒಂದೇ ಕೊಠಡಿಯನ್ನು ಹಂಚಿಕೆ ಮಾಡುವ ಮೂಲಕ ಆಡಳಿತ ಮಂಡಳಿ ಮತ್ತೊಮ್ಮೆ ಗಂಭೀರ ಎಡವಟ್ಟು ಮಾಡಿರುವುದು ಬೆಳಕಿಗೆ ಬಂದಿದೆ.
ಭಾರತೀಯ ಕ್ರೀಡಾಪಟುಗಳಿಗೆ ವಸತಿ ವ್ಯವಸ್ಥೆಯನ್ನು ಕಲ್ಪಿಸಲು ನಿಗದಿಪಡಿಸಿದ್ದ ಐಷಾರಾಮಿ ಕ್ರೂಸ್ ಹಡಗಿನಲ್ಲಿ ಪ್ರಣತಿ ನಾಯಕ್ ಹಾಗೂ ಕೋಚ್ ಅಶೋಕ್ ಮಿಶ್ರಾ ಅವರಿಬ್ಬರಿಗೂ ಆರಂಭದಲ್ಲಿ ಒಂದೇ ಕೋಠಡಿಯನ್ನು ಕಾಯ್ದಿರಿಸಲಾಗಿತ್ತು. ಇದನ್ನು ಗಮನಿಸಿದ ಕೂಡಲೇ ಮಹಿಳಾ ಅಥ್ಲೀಟ್ ಹಾಗೂ ಪುರುಷ ಕೋಚ್ ಇಬ್ಬರೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಸ್ಥಳದಲ್ಲಿ ಭಾರಿ ಹೈಡ್ರಾಮವೇ ನಡೆಯಿತು. ಅಂತಿಮವಾಗಿ ಮಧ್ಯರಾತ್ರಿಯಲ್ಲಿ ಇಬ್ಬರಿಗೂ ಸೂಕ್ತ ಜಾಗದ ವ್ಯವಸ್ಥೆ ಇಲ್ಲದೆ ಪರದಾಡಬೇಕಾಯಿತು.
ಆಯೋಜಕರ ಬೇಜವಾಬ್ದಾರಿಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ ಇಬ್ಬರೂ ಕೂಡ ಸಂಘಟಕರನ್ನು ಸಂಪರ್ಕಿಸಲು ಹರಸಾಹಸ ಪಟ್ಟರೂ ಗಂಟೆಗಳವರೆಗೆ ಯಾವುದೇ ಪರಿಹಾರ ಸಿಗಲಿಲ್ಲ. ಅಂತಿಮವಾಗಿ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ತಕ್ಷಣವೇ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿತು. ಗುರುವಾರ ಮುಂಜಾನೆ ಸುಮಾರು 1.30ರ ಸುಮಾರಿಗೆ ಇಬ್ಬರಿಗೂ ಪ್ರತ್ಯೇಕ ವಸತಿ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ತಾತ್ಕಾಲಿಕ ನಿರಾಳತೆ ದೊರೆಯುವಂತೆ ಮಾಡಲಾಯಿತು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಏಕೈಕ ಜಿಮ್ನಾಸ್ಟ್ ಆಗಿರುವ ಪ್ರಣತಿ ನಾಯಕ್, ವಸತಿ ವ್ಯವಸ್ಥೆಯಲ್ಲಿ ಕೆಲವು ಗಂಭೀರ ತಪ್ಪುಗಳು ಸಂಭವಿಸಿದ್ದವು ಎಂಬುದನ್ನು ಒಪ್ಪಿಕೊಂಡಿದ್ದಾರೆ. ರಾತ್ರಿ ಕಳೆದು ನಸುಕಿನ 2 ಗಂಟೆಯ ವೇಳೆಗೆ ಈ ಸಮಸ್ಯೆಯನ್ನು ಹೇಗೋ ಬಗೆಹರಿಸಿಕೊಳ್ಳಲಾಯಿತು ಎಂದು ಅವರು ಮಾಧ್ಯಮಗಳೊಂದಿಗೆ ಮಾತನಾಡುವಾಗ ದೃಢಪಡಿಸಿದರು. ಆದರೂ ಕ್ರೀಡಾಪಟುಗಳಿಗೆ ಪಂದ್ಯಾವಳಿಯ ಮುನ್ನಾ ದಿನಗಳಲ್ಲಿ ಈ ರೀತಿಯ ಮಾನಸಿಕ ಅಶಾಂತಿ ಉಂಟಾಗಿರುವುದು ಕಳವಳಕಾರಿ ಸಂಗತಿಯಾಗಿದೆ.
ಆದರೆ, ಕಷ್ಟಗಳು ಅಲ್ಲಿಗೆ ಮುಗಿಯಲಿಲ್ಲ, ಹೊಸ ಕೊಠಡಿಯ ಕೀ ಪಡೆಯಲು ತೆರಳಿದ ಕೋಚ್ ಅಶೋಕ್ ಮಿಶ್ರಾ ಅವರಿಗೆ ಹೊಸ ಸಂಕಷ್ಟ ಎದುರಾಯಿತು. ಹೋಟೆಲ್ ನೋಂದಣಿ ರಿಜಿಸ್ಟರ್‌ನಲ್ಲಿ ಅವರ ಹೆಸರು ಇಲ್ಲದಿರುವುದು ಕಂಡುಬಂದಿತು. ಕೊನೆಗೆ ಅವರ ಅಕ್ರೆಡಿಟೇಷನ್ ಕಾರ್ಡ್ ಪರಿಶೀಲಿಸಿದಾಗ ಕಾಗದಪತ್ರಗಳ ನಿರ್ವಹಣೆಯಲ್ಲಿ ಸ್ಪೆಲ್ಲಿಂಗ್ ತಪ್ಪಿರುವುದು ಪತ್ತೆಯಾಯಿತು. ಈ ರೀತಿಯ ಸಣ್ಣಪುಟ್ಟ ತಪ್ಪುಗಳಿಂದಾಗಿ ಅವರು ತಮ್ಮ ಕೊಠಡಿ ಪ್ರವೇಶಿಸಲು ಮತ್ತೆ ಒಂದು ಗಂಟೆ ಕಾಲ ಕಾಯಬೇಕಾಗಿ ಬಂತು. ಜಪಾನ್‌ಗೆ ಭಾರತೀಯ ತಂಡ ಕಾಲಿಟ್ಟಾಗಿನಿಂದಲೂ ವಸತಿ, ತರಬೇತಿ ಸೌಲಭ್ಯಗಳು ಹಾಗೂ ಪೌಷ್ಟಿಕಾಂಶದ ಕೊರತೆಯಂತಹ ಸಮಸ್ಯೆಗಳು ಸತತವಾಗಿ ಕಾಡುತ್ತಿರುವುದು ಆಡಳಿತ ಮಂಡಳಿಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ, (ಏಜೆನ್ಸೀಸ್).