ಬೆಂಗಳೂರು: ಜಾಗತಿಕ ಕ್ರಿಕೆಟ್ನಲ್ಲಿ ಅತ್ಯಂತ ಕಠಿಣ ಸವಾಲಿನಲ್ಲಿ ಆಸ್ಟ್ರೆಲಿಯಾ ಪ್ರವಾಸವೂ ಒಂದಾಗಿದೆ. ಹೀಗಾಗಿ ಆಸೀಸ್ ನೆಲದಲ್ಲಿ ಮಿಂಚುವ ಆಟಗಾರರಿಗೆ ವಿಶೇಷ ಮನ್ನಣೆ ಲಭಿಸುತ್ತದೆ. ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ ಅವರಂಥ ಆಟಗಾರರು ಆಸೀಸ್ನಲ್ಲಿ ರನ್ಪ್ರವಾಹ ಹರಿಸಿದ ಬಲದಿಂದಲೇ ತಾರೆಯರಾಗಿ ಬೆಳೆದವರು. ಕಳೆದ 3 ದಶಕಗಳಲ್ಲಿ ಕಾಂಗರೂ ನೆಲದಲ್ಲಿ ಮಿಂಚಿದ ಕೆಲ ಪ್ರಮುಖ ಭಾರತೀಯ ಕ್ರಿಕೆಟಿಗರ ಮೆಲುಕು ಇಲ್ಲಿದೆ...
*ಸಚಿನ್ ತೆಂಡುಲ್ಕರ್
1992ರ ಸಿಡ್ನಿ ಟೆಸ್ಟ್ನಲ್ಲಿ 18ನೇ ವಯಸ್ಸಿನಲ್ಲೇ ಅಜೇಯ 148 ರನ್ ಬಾರಿಸಿ ಜಗತ್ತಿನ ಗಮನಸೆಳೆದವರು ಸಚಿನ್ ತೆಂಡುಲ್ಕರ್. ಒಟ್ಟಾರೆ 5 ಬಾರಿ ಆಸೀಸ್ ಪ್ರವಾಸ ಕೈಗೊಂಡಿರುವ ಸಚಿನ್ 15 ಟೆಸ್ಟ್ಗಳಲ್ಲಿ 4 ಶತಕ, 7 ಅರ್ಧಶತಕಗಳ ಸಹಿತ 1,441 ರನ್ ಬಾರಿಸಿದ್ದಾರೆ. 2004ರ ಸಿಡ್ನಿ ಟೆಸ್ಟ್ನಲ್ಲಿ ಅಜೇಯ 241 ರನ್ ಸಿಡಿಸಿ ರನ್ಬರ ನೀಗಿಸಿಕೊಂಡಿದ್ದ ಸಚಿನ್, 2007-08ರ ಪ್ರವಾಸದಲ್ಲಿ 2 ಶತಕ ಸಿಡಿಸಿ ಮಿಂಚಿದ್ದರು.
*ವಿವಿಎಸ್ ಲಕ್ಷ್ಮಣ್
ವಿವಿಎಸ್ ಲಕ್ಷ್ಮಣ್ ಪಾಲಿಗೆ ಆಸೀಸ್ ನೆಚ್ಚಿನ ಎದುರಾಳಿ ಎನಿಸಿತ್ತು. ಲಕ್ಷ್ಮಣ್ ಆಸೀಸ್ನಲ್ಲಿ ಆಡಿದ 15 ಟೆಸ್ಟ್ಗಳಲ್ಲಿ 4 ಶತಕಗಳ ಸಹಿತ 1,236 ರನ್ ಬಾರಿಸಿದ್ದಾರೆ. ಈ ಪೈಕಿ 1999-00ರ ಪ್ರವಾಸದಲ್ಲಿ ಭಾರತದ ಹೀನಾಯ ಸೋಲಿನ ನಡುವೆ ಸಿಡ್ನಿ ಟೆಸ್ಟ್ನಲ್ಲಿ ಆಕರ್ಷಕ 167 ರನ್ ಬಾರಿಸಿ ಮಿಂಚಿದ್ದರು. 2003-04ರ ಪ್ರವಾಸದಲ್ಲಿ 2 ಶತಕ ಸಿಡಿಸಿದ್ದರು.
*ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್ ಆಸೀಸ್ ನೆಲದ ಟೆಸ್ಟ್ಗಳಲ್ಲಿ ಸಾವಿರ ರನ್ ಬಾರಿಸಿರುವ ಮತ್ತೋರ್ವ ಭಾರತೀಯ. 2003ರ ಪ್ರವಾಸದ ಅಡಿಲೇಡ್ ಟೆಸ್ಟ್ನಲ್ಲಿ 233 ರನ್ ಬಾರಿಸುವ ಮೂಲಕ ದ್ರಾವಿಡ್ ಭಾರತದ ಐತಿಹಾಸಿಕ ಪಂದ್ಯ ಗೆಲುವು ಮತ್ತು ಸರಣಿ ಸಮಬಲದ ಸಾಧನೆಗೆ ನೆರವಾಗಿದ್ದರು.
*ಚೇತೇಶ್ವರ ಪೂಜಾರ
ಕಳೆದೆರಡು ಆಸ್ಟ್ರೆಲಿಯಾ ಪ್ರವಾಸದ ಟೆಸ್ಟ್ ಸರಣಿ ಗೆಲುವುಗಳ ಪ್ರಮುಖ ರೂವಾರಿ ಚೇತೇಶ್ವರ ಪೂಜಾರ. ಗಳಿಸಿದ ರನ್ಗಳಿಗಿಂತ ಹೆಚ್ಚಾಗಿ ಎದುರಾಳಿ ಬೌಲರ್ಗಳನ್ನು ಅವರು ಸತಾಯಿಸಿಯೇ ಅರ್ಧ ಗೆಲುವು ತಂದುಕೊಟ್ಟಿದ್ದರು. 2018-19ರ ಪ್ರವಾಸದಲ್ಲಿ 3 ಶತಕ ಸಹಿತ 521 ರನ್ ಬಾರಿಸಿದ್ದ ಪೂಜಾರ, 2020-21ರ ಪ್ರವಾಸದಲ್ಲಿ ಗಳಿಸಿದ್ದು 3 ಅರ್ಧಶತಕಗಳಷ್ಟೇ ಆಗಿದ್ದರೂ, ಸಿಡ್ನಿ ಟೆಸ್ಟ್ನಲ್ಲಿ ಸುದೀರ್ ಕಾಲ ಕ್ರೀಸ್ನಲ್ಲಿ ನಿಂತು ವೀರೋಚಿತ ಡ್ರಾ ಸಾಧಿಸುವಲ್ಲಿ ನೆರವಾಗಿದ್ದರು. ಬ್ರಿಸ್ಬೇನ್ ಗೆಲುವಿನಲ್ಲೂ ಪಂತ್ ಅವರಷ್ಟೇ ಪೂಜಾರ ಆಟವೂ ನಿರ್ಣಾಯಕವಾಗಿತ್ತು.
*ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಜಾಗತಿಕ ಸ್ಟಾರ್ ಆಗಿ ಬೆಳೆಯುವಲ್ಲಿ ಆಸೀಸ್ ನೆಲದ ನಿರ್ವಹಣೆಯ ಬಲ ದೊಡ್ಡದಾಗಿದೆ. 2014&15ರ ಆಸೀಸ್ ಪ್ರವಾಸದಲ್ಲಿ ಭಾರತ ತಂಡದ ಸೋಲಿನ ನಡುವೆ 4 ಶತಕಗಳ ಸಹಿತ 692 ರನ್ ಹರಿಸಿದ್ದರು. 2018-19ರಲ್ಲಿ ಭಾರತ ತಂಡ ಅವರ ನಾಯಕತ್ವದಲ್ಲೇ ಮೊದಲ ಬಾರಿಗೆ ಕಾಂಗರೂ ನೆಲದಲ್ಲಿ ಸರಣಿ ಗೆದ್ದು ಬೀಗಿತ್ತು.
*ರಿಷಭ್ ಪಂತ್
ಭಾರತ ತಂಡ ಕಳೆದ 2 ಆಸೀಸ್ ಪ್ರವಾಸಗಳಲ್ಲಿ ಐತಿಹಾಸಿಕ ಗೆಲುವು ದಾಖಲಿಸುವಲ್ಲಿ ಪಂತ್ ಕೊಡುಗೆಯೂ ಅಮೂಲ್ಯವಾದುದು. 2019ರ ಸಿಡ್ನಿ ಟೆಸ್ಟ್ನಲ್ಲಿ ಅಜೇಯ 159 ರನ್ ಸಿಡಿಸಿ ಪೂಜಾರಗೆ ಉತ್ತಮ ಸಾಥ್ ನೀಡಿದ್ದ ಪಂತ್, 2020-21ರ ಪ್ರವಾಸದ ಸಿಡ್ನಿ ಟೆಸ್ಟ್ ಡ್ರಾ ಮತ್ತು ಬ್ರಿಸ್ಬೇನ್ ಟೆಸ್ಟ್ ಗೆಲುವಿನಲ್ಲಿ ಕ್ರಮವಾಗಿ 97 ಮತ್ತು ಅಜೇಯ 89 ರನ್ ಬಾರಿಸಿ ಮಿಂಚಿದ್ದರು.