ಸಿಡ್ನಿ: ಆಸ್ಟ್ರೇಲಿಯಾದ ಎಸಿಟಿ ಪ್ರೀಮಿಯರ್ ಕ್ರಿಕೆಟ್ ಟೂರ್ನಿಯಲ್ಲಿ ಗಿನ್ನಿಂದೆರ್ರಾ ಕ್ರಿಕೆಟ್ ಕ್ಲಬ್ ಮತ್ತು ವೆಸ್ಟ್ ಡಿಸ್ಟ್ರಿಕ್ಟ್ ಕ್ರಿಕೆಟ್ ಕ್ಲಬ್ಗಳ ನಡುವೆ ನಡೆದ 3ನೇ ಗ್ರೇಡ್ ಪಂದ್ಯವು ವಿಚಿತ್ರ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದು, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಸಹ ಹುಬ್ಬೇರುವಂತೆ ಮಾಡಿದೆ.
ಮೂರು ವಿಕೆಟ್ಗಳಲ್ಲಿ ಒಂದು ವಿಕೆಟ್ ಸಂಪೂರ್ಣ ನೆಲಕ್ಕೆ ಉರುಳಿದರೂ ಬೇಲ್ಸ್ ಬೀಳದ ಕಾರಣ ನಾಟೌಟ್ ಎಂದು ಅಂಪೈರ್ ತೀರ್ಪು ನೀಡಿದ್ದಾರೆ. ಈ ವಿಕೆಟ್ನಿಂದ ಪಾರಾದ ಬ್ಯಾಟರ್ನನ್ನು ಕ್ರಿಕೆಟ್ ಇತಿಹಾಸ ಅದೃಷ್ಟಶಾಲಿ ಬ್ಯಾಟರ್ ಎಂದು ಪರಿಗಣಿಸಲಾಗಿದೆ. ವೆಸ್ಟರ್ನ್ ಡಿಸ್ಟ್ರಿಕ್ಟ್ಸ್ ತಂಡದ ಬೌಲರ್ ಆ್ಯಂಡಿ ರೆನಾಲ್ಡ್ಸ್ ಅವರ ಎಸೆತವನ್ನು ಗಿನ್ನಿಂದೆರ್ರಾ ತಂಡದ ಬ್ಯಾಟರ್ ಮ್ಯಾಥ್ಯೂ ಬೊಸುಸ್ಟೋವ್ ಎದುರಿಸಿದರು.
ಚೆಂಡು ಮಧ್ಯದ ವಿಕೆಟ್ಗೆ ಬಡಿದು ನೆಲಕ್ಕೆ ಉರುಳಿಸಿತು. ಇದನ್ನು ನೋಡಿ ಎದುರಾಳಿ ತಂಡದ ಆಟಗಾರರ ಸಂಭ್ರಮಿಸುತ್ತಿದ್ದರು. ಆದರೆ, ಅಂಪೈರ್ ಕೊಟ್ಟ ತೀರ್ಪು ಒಂದು ಕ್ಷಣ ಅವರನ್ನು ಅಚ್ಚರಿಕೆ ದೂಡಿತು. ಏಕೆಂದರೆ, ವಿಕೆಟ್ ಬಿದ್ದರೂ ಬೇಲ್ಸ್ ಮಾತ್ರ ಯಥಾಸ್ಥಿತಿಯಲ್ಲೇ ಇತ್ತು. ಹೀಗಾಗಿ ನಾಟೌಟ್ ಎಂದು ತೀರ್ಮಾನಿಸಲಾಯಿತು.
ಆರಂಭದಲ್ಲಿ ಬ್ಯಾಟರ್ ಬೊಸುಸ್ಟೋವ್ ಕೂಡ ಔಟ್ ಅಂತಾ ಪೆವಿಲಿಯನ್ಗೆ ತೆರಳುತ್ತಿದ್ದರು. ಆದರೆ, ಅಂಪೈರ್ ತೀರ್ಮಾನ ಅವರ ಮುಖದಲ್ಲಿ ಸಂತಸ ತರಿಸಿತು. ಅಷ್ಟಕ್ಕೂ ಈ ತೀರ್ಪು ವಿವಾದವೇನಲ್ಲ. ಸರಿಯಾದ ತೀರ್ಪು ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಒಂದು ಘಟನೆ ಭಾರಿ ಗಮನ ಸೆಳೆದಿದೆ.
ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಸಚಿನ್ ಪೋಸ್ಟ್ ಮಾಡಿದ್ದು, ಬೆಲ್ಸ್ ಬೀಳದೇ ಇದ್ದುದ್ದು ಬಹುದೊಡ್ಡ ಅದೃಷ್ಟವೇ ಎಂದಿದ್ದಾರೆ. ದಿನೇಶ್ ಕಾರ್ತಿಕ್ ಸಹ ಪ್ರತಿಕ್ರಿಯೆ ನೀಡಿದ್ದು, ನೀವು ಕ್ರಿಕೆಟ್‌ನ ಪ್ರೀಮಿಯಂ ಚಂದಾದಾರಿಕೆಯನ್ನು ಪಡೆದಾಗ.... ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಅಂದಹಾಗೆ ಕ್ರಿಕೆಟ್ ಕಾನೂನುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಮೆರಿಲ್‌ಬೋನ್ ಕ್ರಿಕೆಟ್ ಕ್ಲಬ್ (MCC) ಪ್ರಕಾರ, ವಿಕೆಟ್ಗಳ ಮೇಲ್ಭಾಗದಲ್ಲಿರುವ ಎರಡರಲ್ಲಿ ಒಂದು ಬೇಲ್ಸ್ ಕೆಳಗೆ ಬಿದ್ದರೆ ವಿಕೆಟ್ ಎಂದು ಪರಿಗಣಿಸಲಾಗುತ್ತದೆ. ಸ್ಪಂಪ್ ಮೇಲಿಂದ ಬೇಲ್ ಸಂಪೂರ್ಣವಾಗಿ ಹೊರಬಿದ್ದರೆ, ಅಥವಾ ನೆಲದಿಂದ ಸ್ಟಂಪ್ ಕಿತ್ತು ಬಿದ್ದರೆ ಮಾತ್ರ ಬ್ಯಾಟ್ಸ್'ಮ್ಯಾನ್ ಔಟ್ ಆಗುತ್ತಾನೆ" ಎಂದು ನಿಯಮದಲ್ಲಿ ಬರೆಯಲಾಗಿದೆ. (ಏಜೆನ್ಸೀಸ್)