More

    ಬಿಡದಿ ಇನ್‌ಸ್ಪೆಕ್ಟರ್ ವಿರುದ್ಧ ಮತ್ತೆರೆಡು ಆರೋಪ; ಶಿಸ್ತು ಕ್ರಮಕ್ಕೆ ಎಸಿಪಿ ಶಿಫಾರಸ್ಸು

    ಬೆಂಗಳೂರು: ರಾಮನಗರ ಜಿಲ್ಲೆ ಬಿಡದಿ ಠಾಣೆ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ವಿರುದ್ಧ ಮತ್ತೆರೆಡು ದೂರುಗಳು ದಾಖಲಾಗಿರುವುದು ತಡವಾಗಿ ಬೆಳಕಿಗೆ ಬಂದಿವೆ. ಕೆಲ ದಿನಗಳ ಹಿಂದೆ 72 ಲಕ್ಷ ರೂ. ಜಪ್ತಿ ಮಾಡಿ ಸುಳ್ಳು ಎಫ್ಐಆರ್ ದಾಖಲಿಸಿ ಹಣ ದುರ್ಬಳಕ್ಕೆ ಮಾಡಿಕೊಂಡ ಪ್ರಕರಣ ಸಿಸಿಬಿ ತನಿಖೆಯಲ್ಲಿದೆ. ಇದರ ಬೆನ್ನಲೆ ಮತ್ತೆರೆಡು ಆರೋಪಗಳು ಕೇಳಿಬಂದಿವೆ.

    ಮೈಸೂರು ರಸ್ತೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಇನ್‌ಸ್ಪೆಕ್ಟರ್ ಆಗಿದ್ದ ಶಂಕರ್ ನಾಯಕ್, 2022ರ ಆಗಸ್ಟ್ 19 ರಿಂದ 25 ವರೆಗೆ ಸುಮಿತ್ ಎಂಬಾತನನ್ನು ಅಕ್ರಮವಾಗಿ ಠಾಣೆಯಲ್ಲಿ ಬಂಧಿಸಿದ್ದರು. ಇದಕ್ಕೂ ಮೊದಲು ಸಿಪಿಯು, ಲ್ಯಾಪ್‌ಟಾಪ್ ಮತ್ತು ಪೆನ್‌ಡ್ರೈವ್‌ನ್ನು ಜಪ್ತಿ ಮಾಡಿ ಕೇಸ್ ದಾಖಲಿಸದೆ ಕೊನೆಗೆ ಸಂತ್ರಸ್ತನಿಗೆ ವಾಪಸ್ ಕೊಡದೆ ಕಳುಹಿಸಿದ್ದರು.

    ಈ ಕುರಿತು ಸುಮಿತ್, ತಾಯಿ ಸಂಧ್ಯಾ ಎಂಬಾಕೆ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಕೆಂಗೇರಿ ಗೇಟ್ ಉಪವಿಭಾಗ ಎಸಿಪಿ ಭರತ್ ಎಸ್. ರೆಡ್ಡಿ, ತನಿಖೆ ನಡೆಸಿದಾಗ ಪೊಲೀಸ್ ಠಾಣೆಯಲ್ಲಿ ಅಕ್ರಮ ಬಂಧನದಲ್ಲಿ ಇಟ್ಟಿದ್ದ ಸಿಸಿ ಕ್ಯಾಮರಾ ದೃಶ್ಯಾವಳಿ ಪತ್ತೆಯಾಗಿದೆ. ಪಿಎಸ್‌ಐ ಕರಿಯಣ್ಣ ಮತ್ತು ಠಾಣೆಯ ಸಿಬ್ಬಂದಿ ಒಪ್ಪಿಕೊಂಡಿದ್ದರು. ಈ ಬಗ್ಗೆ ಎಸಿಪಿ ಭರತ್ ಎಸ್. ರೆಡ್ಡಿ, ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ನಗರ ಪೊಲೀಸ್ ಆಯುಕ್ತರಿಗೆ ವರದಿ ಒಪ್ಪಿಸಿದ್ದರು.

    ಹಣ ಕೊಡದೆ ವಂಚನೆ :

    ಅಪರಾಧ ಪ್ರಕರಣದಲ್ಲಿ ಆರೋಪಿಗಳಿಂದ ಜಪ್ತಿ ಮಾಡಿದ ಹಣವನ್ನು ಕೋರ್ಟ್ ಆದೇಶ ಇದ್ದರು ವಾರಸುದಾರರಿಗೆ ನೀಡದೆ ಶಂಕರ್‌ನಾಯಕ್, ಮೋಸ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕೆ.ಆರ್.ಪುರದ ವಸಂತ ಎಂಬಾಕೆ, ಹಿರಿಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಈ ಬಗ್ಗೆಯೂ ಎಸಿಪಿ ಭರತ್ ತನಿಖೆ ನಡೆಸಿ ಇನ್‌ಸ್ಪೆಕ್ಟರ್ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆ.

    ಬ್ಯಾಟರಾಯನಪುರ ಠಾಣೆಯಲ್ಲಿ 2022ರಲ್ಲಿ ದಾಖಲಾದ ಪ್ರಕರಣದಲ್ಲಿ ಶಂಕರ್ ನಾಯಕ್, ಆರೋಪಿಗಳಿಂದ 8.85 ಲಕ್ಷ ರೂ. ಜಪ್ತಿ ಮಾಡಿದ್ದರು. ಈ ಹಣವನ್ನು ಬಿಡಿಸಿಕೊಡುವಂತೆ ದೂರುದಾರ ವಸಂತ್, ಕೋರ್ಟ್ ಮೋರೆ ಹೋಗಿದ್ದರು. 31ನೇ ಎಸಿಎಂಎಂ ಕೋರ್ಟ್ ಹಣ ವಾಪಸ್ ಕೊಡುವಂತೆ ತನಿಖಾಧಿಕಾರಿಗೆ ಶಿಫಾರಸ್ಸು ಮಾಡಿತ್ತು. ಆದರೆ, ಶಂಕರ್ ನಾಯಕ್, ಖಾಲಿ ಹಾಳೆಗೆ ಸಹಿ ಪಡೆದು ಹಣ ಕೊಡದೆ ಸತಾಯಿಸಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    20 ಲಕ್ಷಕ್ಕೆ ಲೆಕ್ಕ ಕೊಡದ ಆರೋಪ :

    ಬ್ಯಾಟರಾಯನಪುರ ಪೊಲೀಸ್ ಠಾಣೆಯಿಂದ ಶಂಕರ್ ನಾಯಕ್, ಬೇರೆಗೆ ವರ್ಗಾವಣೆಯಾದ ಮೇಲೆ ತನ್ನ ಜಾಗಕ್ಕೆ ಬಂದ ಇನ್‌ಸ್ಪೆಕ್ಟರ್ ನಿಂಗಣಗೌಡ ಎ. ಪಾಟೀಲ್‌ಗೆ ಖಜಾನೆಯಲ್ಲಿ ಇರುವ ಹಣದ ಮಾಹಿತಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ. ಅಪರಾಧ ಪ್ರಕರಣಗಳಲ್ಲಿ ಜಪ್ತಿಯಾದ 20 ಲಕ್ಷ ರೂ.ಅನ್ನು ಖಜಾನೆಗೆ ಜಮೆ ಮಾಡದೆ ಠಾಣೆಯಲ್ಲೂ ಹಿಡದೆ ಮರೆಮಾಚಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಎಸಿಪಿ ವರದಿ ನೀಡಿದ್ದಾರೆ.

    ಪ್ರಭಾವಿ ರಾಜಕಾರಣಿ ಶ್ರೀರಕ್ಷೆ :

    ಉದ್ಯಮಿ ಬಳಿ ಕಳ್ಳತನ ಮಾಡಿದ್ದ ಆತನ ಕಾರು ಚಾಲಕನ ವಿರುದ್ಧ ಸುಳ್ಳು ಕೇಸ್ ದಾಖಲಿಸಿ 72 ಲಕ್ಷ ರೂ. ವಸೂಲಿ ಮಾಡಿ ಸರ್ಕಾರಕ್ಕೆ ಒಪ್ಪಿಸದೆ ವಂಚಿಸಿದ ಆರೋಪ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ವಿರುದ್ಧ ಕೇಳಿಬಂದಿದೆ. ಕೋರ್ಟ್ ಆದೇಶ ನೀಡುತ್ತಿದಂತೆ ಏಕಾಏಕಿ ಠಾಣೆಗೆ ಹಣ ತಂದಿದ್ದರು. ಈ ಬಗ್ಗೆ ಸಿಸಿಬಿ ತನಿಖೆ ಕೈಗೊಂಡಿದೆ.
    ಬಿಡದಿ ಠಾಣೆ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ವಿರುದ್ಧ ಸಾಲು ಸಾಲು ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಅಲೋಕ್ ಮೋಹನ್ ಅವರಿಗೆ ಆರೋಪಿತ ಇನ್‌ಸ್ಪೆಕ್ಟರ್‌ನನ್ನು ಅಮಾನತು ಮಾಡುವಂತೆ ವರದಿ ಸಲ್ಲಿಸಿದ್ದಾರೆ.ಎರಡು ತಿಂಗಳು ಕಳೆದರೂ ಡಿಜಿ-ಐಜಿಪಿ ಯಾವುದೇ ಕ್ರಮ ಕೈಗೊಂಡಿತ್ತು.

    ಸ್ಥಳೀಯ ಪ್ರಭಾವಿ ರಾಜಕಾರಣಿ ಶ್ರೀರಕ್ಷೆಯಿಂದ ಶಂಕರ್ ನಾಯಕ್, ಅಮಾನತು ಆಗಿಲ್ಲವೆಂಬ ಆರೋಪ ಸಹ ಕೇಳಿಬಂದಿವೆ. ಜತೆಗೆ ಒಬ್ಬರಿಗೊಂದು ಮತ್ತೊಬ್ಬರಿಗೊಂದು ನ್ಯಾಯ ಸಿಗುತ್ತಿದೆ ಎಂಬ ಅಸಮದಾನ ಪೊಲೀಸ್ ಇಲಾಖೆಯಲ್ಲಿ ಕೇಳಿಬರುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts