ಪಾರ್ಲ್: ಆರಂಭಿಕ ಋತುರಾಜ್ ಗಾಯಕ್ವಾಡ್ ಕೈಬೆರಳಿನ ಮೂಳೆ ಮುರಿತದಿಂದಾಗಿ ದಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಈ ವಾರ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಏಕದಿನ ಪಂದ್ಯದ ವೇಳೆ ಕ್ಯಾಚ್ ಒಂದನ್ನು ಹಿಡಿಯುವ ಪ್ರಯತ್ನದ ವೇಳೆ ಋತುರಾಜ್ ಗಾಯಗೊಂಡಿದ್ದರು. ಇದರಿಂದಾಗಿ ಅವರು ಕೊನೇ ಏಕದಿನ ಪಂದ್ಯವನ್ನೂ ತಪ್ಪಿಸಿಕೊಂಡಿದ್ದರು. ಭಾರತ ಎ ತಂಡದಲ್ಲಿರುವ ಅಭಿಮನ್ಯು ಈಶ್ವರನ್, ಋತುರಾಜ್ ಸ್ಥಾನವನ್ನು ತುಂಬುವ ನಿರೀಕ್ಷೆ ಇದೆ.
ಅಭ್ಯಾಸ ಪಂದ್ಯದಲ್ಲಿ ಗಿಲ್, ಸರ್ಫ್ರಾಜ್ ಶತಕ
ಟೆಸ್ಟ್ ಸರಣಿಗೆ ಪೂರ್ವಭಾವಿಯಾಗಿ ಭಾರತ ತಂಡದ ಆಟಗಾರರು ಪ್ರಿಟೋರಿಯಾದ ಟಕ್ಸ್ ಓವಲ್ನಲ್ಲಿ ಆಡಿದ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಆರಂಭಿಕ ಶುಭಮಾನ್ ಗಿಲ್ ಮತ್ತು ಸರ್ಫ್ರಾಜ್ ಖಾನ್ ಶತಕ ಸಿಡಿಸಿ ಮಿಂಚಿದ್ದಾರೆ. ರೋಹಿತ್ ಶರ್ಮ ನೇತೃತ್ವದ ಭಾರತ ತಂಡ ಮತ್ತು ಭಾರತ ಎ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಆಡಿದ ಗಿಲ್, ಪಂದ್ಯದ 2ನೇ ದಿನದಾಟದಲ್ಲಿ ಶತಕ ಸಿಡಿಸಿದರು. ಮತ್ತೋರ್ವ ಆಟಗಾರ ಯಶಸ್ವಿ ಜೈಸ್ವಾಲ್ ಕೂಡ ಅರ್ಧಶತಕ ಬಾರಿಸಿ ಗಮನಸೆಳೆದರು.