ನವದೆಹಲಿ: ಟಿ20 ವಿಶ್ವಕಪ್ 2024 ಫೀವರ್ ಈಗಷ್ಟೇ ಶುರುವಾಗುತ್ತಿದೆ. ಮೆಗಾ ಟೂರ್ನಿಯ ಆರಂಭಕ್ಕೆ ಇನ್ನೂ ಒಂದು ತಿಂಗಳಷ್ಟೇ ಬಾಕಿ ಇದೆ. ಆಯಾ ತಂಡಗಳು ಘೋಷಣೆಯಾಗುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಏಕಾಏಕಿ ಐಪಿಎಲ್‌ನಿಂದ ವಿಶ್ವಕಪ್‌ನತ್ತ ಗಮನ ಹರಿಸಿದ್ದಾರೆ. ನ್ಯೂಜಿಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ತಮ್ಮ ತಂಡಗಳನ್ನು ಪ್ರಕಟಿಸಿವೆ. ಇದನ್ನು ನೋಡಿದ ಕ್ರೀಡಾಭಿಮಾನಿಗಳು ಎಲ್ಲ ತಂಡವು ಬಲಿಷ್ಠವಾಗಿದೆ ಎನ್ನುತ್ತಿದ್ದಾರೆ. ಇದರ ನಡುವೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಟೀಮ್ ಇಂಡಿಯಾ ತಂಡದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಮೈಕಲ್ ವಾನ್ ಪ್ರಕಾರ ಅಮೆರಿಕ-ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ಶರ್ಮ ಪಡೆ ಸೆಮಿಫೈನಲ್‌ಗೂ ಬರುವುದಿಲ್ಲವಂತೆ. ಇಂಗ್ಲೆಂಡ್ ಜತೆಗೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮಾತ್ರ ಈ ಕಿರು ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪಲಿವೆ ಎಂದು ಮೈಕಲ್ ವಾನ್ ಅಂದಾಜಿಸಿದ್ದಾರೆ.
ಭಾರತ ತಂಡ ಅಂತಿಮ ನಾಲ್ಕರ ಘಟ್ಟ ತಲುಪುವುದು ತುಂಬಾ ಕಷ್ಟಕರ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಟೀಮ್ ಇಂಡಿಯಾದ ವಿಶ್ವಕಪ್ ಪಯಣದ ಬಗ್ಗೆ ವಾನ್ ಹೇಳಿರುವ ಭವಿಷ್ಯ ಇದೀಗ ಹಾಟ್ ಟಾಪಿಕ್ ಆಗಿದ್ದು, ಭಾರತೀಯ ಅಭಿಮಾನಿಗಳು ಅವರ ಮೇಲೆ ಕೋಪಗೊಂಡಿದ್ದಾರೆ.
ಪ್ರಸ್ತುತ ಕ್ರಿಕೆಟ್‌ನಲ್ಲಿ ಅಗ್ರಮಾನ್ಯ ಆಟಗಾರರಾದ ರೋಹಿತ್, ಕೊಹ್ಲಿ, ಬುಮ್ರಾ ಅವರಂತಹ ಆಟಗಾರರನ್ನು ಹೊಂದಿರುವ ತಂಡದ ಮೇಲೆ ಈ ರೀತಿಯ ಟೀಕೆ ಮಾಡುವುದು ಸೂಕ್ತವಲ್ಲ ಎಂದು ಟಿ20ಯಲ್ಲಿ ನಂಬರ್ ಒನ್ ಆಟಗಾರರಾಗಿರುವ ಸೂರ್ಯಕುಮಾರ್ ಯಾದವ್ ಈಗಾಗಲೇ ಹೇಳಿದ್ದಾರೆ.
ಭಾರತದಂತಹ ಬಲಿಷ್ಠ ತಂಡ ಯಾವ ಆಧಾರದಲ್ಲಿ ಸೆಮಿಫೈನಲ್ ತಲುಪುವುದಿಲ್ಲ ಎಂದು ಹೇಳುತ್ತೀರಾ? ಅವೈಜ್ಞಾನಿಕ ಭವಿಷ್ಯ ನುಡಿಯುವುದನ್ನು ಬಿಟ್ಟು ನಿಮ್ಮ ತಂಡದ ಕಡೆ ಗಮನ ಕೊಡಿ, ಟೀಮ್ ಇಂಡಿಯಾ ಈ ಬಾರಿ ಕಪ್ ಗೆಲ್ಲುತ್ತದೆ ಎಂದು ಕ್ರೀಡಾಭಿಮಾನಿಗಳು ಸವಾಲು ಹಾಕುತ್ತಿದ್ದಾರೆ.
ಟೀಮ್ ಇಂಡಿಯಾ ವಿಶ್ವಕಪ್ ಸೆಮಿಸ್‌ಗೆ ಹೋಗುವುದಿಲ್ಲ ಎಂಬ ಮೈಕಲ್ ವಾನ್ ಅವರ ಭವಿಷ್ಯವಾಣಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್‌ಗಳ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ. (ಏಜೆನ್ಸೀಸ್)