ಕ್ರೀಡೆ

Asia Cup: ರೋಹಿತ್​ ಶರ್ಮಾರ ಈ ತಂತ್ರವನ್ನು ಭಾರತ ತಂಡ ಮಿಸ್​ ಮಾಡಿಕೊಳ್ಳಲಿದೆ ಎಂದ ಮೊಹಮ್ಮದ್ ಕೈಫ್!

Asia Cup: ಭಾರತ ತಂಡ 2024 ರ ಟಿ20 ವಿಶ್ವಕಪ್‌ನ ರೋಹಿತ್ ಶರ್ಮಾ ಅವರ ಗೆಲುವಿನ ತಂತ್ರವನ್ನು 2025 ರ ಏಷ್ಯಾಕಪ್‌ನಲ್ಲಿ ಮಿಸ್​​ ಮಾಡಿಕೊಳ್ಳುತ್ತದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಎಕ್ಸ್​​​​ ಖಾತೆಯಲ್ಲಿ ಪೋಸ್ಟ್​​ ಹಂಚಿಕೊಂಡು, ತಂಡದ ಸಂಯೋಜನೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಕೈಫ್, ಭಾರತ ತಂಡ ತಮ್ಮ ಟಿ20 ವಿಶ್ವಕಪ್ ವಿಜೇತ ತಂಡದಲ್ಲಿ ಮೂವರು ಆಲ್‌ರೌಂಡರ್‌ಗಳನ್ನು ಹೊಂದುವ ಮೂಲಕ ತಂಡಕ್ಕೆ ಅನುಕೂಲಕರವಾಗಿತ್ತು. ರೋಹಿತ್ ಟಿ20 ವಿಶ್ವಕಪ್​​ನಲ್ಲಿ 3 ಆಲ್‌ರೌಂಡರ್‌ಗಳೊಂದಿಗೆ ಚಾಂಪಿಯನ್​​ ಪಟ್ಟಕ್ಕೇರಿದ್ದರು, (ಅಕ್ಷರ್, ಜಡೇಜಾ, ಹಾರ್ದಿಕ್) ಪ್ರಸ್ತುತ ಹಾರ್ದಿಕ್ ಮತ್ತು ಅಕ್ಷರ್ ಇಬ್ಬರನ್ನೇ ಬಳಸಿಕೊಂಡು ಭಾರತ ಹೊಸ ಗೆಲುವಿನ ಸಂಯೋಜನೆಯನ್ನು ಕಂಡುಹಿಡಿಯಬೇಕಾಗುತ್ತದೆ. ವಾಷಿಂಗ್ಟನ್ ಸುಂದರ್ ಅವರನ್ನು ಈ ವೇಳೆ ಮಿಸ್ ಮಾಡಿಕೊಳ್ಳಲಾಗುವುದು ಎಂದು ಬರೆದುಕೊಂಡಿದ್ದಾರೆ.

ಏಷ್ಯಾಕಪ್‌ಗಾಗಿ ತಂಡವನ್ನು ಘೋಷಿಸುವ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್, ತಂಡವು ಈಗಾಗಲೇ ಮೂವರು ಸ್ಪಿನ್ನರ್‌ಗಳನ್ನು ಹೊಂದಿರುವುದರಿಂದ, ಅವರು ರಿಂಕು ಸಿಂಗ್‌ನಲ್ಲಿ ಹೆಚ್ಚುವರಿ ಬ್ಯಾಟ್ಸ್‌ಮನ್‌ ಆಗಿ ಆಯ್ಕೆ ಮಾಡಲಾಗಿದೆ, ವಾಷಿಂಗ್ಟನ್ ಸುಂದರ್ ಅವರನ್ನು ಸ್ಟ್ಯಾಂಡ್-ಬೈ ಆಟಗಾರರಿಗೆ ಉಳಿಸಿಕೊಳ್ಳಲಾಗಿದೆ ಎಂದಿದ್ದರು.

ಸುಂದರ್ ಪಂದ್ಯದ ಸಮಯದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ಪ್ರಸ್ತುತ, ನಮ್ಮಲ್ಲಿ ವರುಣ್ ಮತ್ತು ಕುಲದೀಪ್ ಇಬ್ಬರು ರಿಸ್ಟ್‌ಸ್ಪಿನ್ನರ್‌ಗಳಿದ್ದಾರೆ, ಅಕ್ಷರ್ ಕೂಡ ಸ್ಪಿನ್​​ ಆಯ್ಕೆಯಾಗಿದ್ದು, ನಮಗೆ ನಾಲ್ಕು ಸ್ಪಿನ್ನರ್‌ಗಳು ಅವಶ್ಯಕತೆ ಎದುರಾದರೆ ನಾವೂ ಬೇರೆ ಮಾರ್ಗ ಹುಡುಕುತ್ತೇವೆ, ಸದ್ಯ ನಮಗೆ ಹೆಚ್ಚುವರಿ ಬ್ಯಾಟ್ಸ್‌ಮನ್ ಅಗತ್ಯವಿರುವುದರಿಂದ ರಿಂಕು ಸಿಂಗ್​​ರನ್ನು ಮಣೆ ಹಾಕಿದ್ದೇವೆ ಎಂದರು.

ಭಾರತ ತಂಡ 2025 ರ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಐದು ಸ್ಪಿನ್ ಆಯ್ಕೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಮುಂಬರುವ ಟೂರ್ನಿಯಲ್ಲೂ ಸ್ಪಿನ್ ಮತ್ತೆ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿರುವುದರಿಂದ, ತಂಡವು ತಮ್ಮ ಸ್ಪಿನ್ ಆಯ್ಕೆಗಳನ್ನು ಹೇಗೆ ಬಳಸಿಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.(ಏಜೆನ್ಸೀಸ್​​)