ಕ್ರೀಡೆ

ಈ ಬಾರಿ ಏಷ್ಯನ್​ ಗೇಮ್ಸ್​ನಲ್ಲಿ ಭಾರತಕ್ಕೆ 100 ಪದಕ ಗೆಲ್ಲುವ ಹಂಬಲ

ಹಾಂಗ್​ಝೌ: ಭಾರತದ ಕ್ರೀಡಾಪಟುಗಳು 2021ರ ಟೋಕಿಯೊ ಒಲಿಂಪಿಕ್ಸ್​ ಮತ್ತು 2022ರ ರ್ಬಮಿಂಗ್​ಹ್ಯಾಂ ಕಾಮನ್ವೆಲ್ತ್​ ಗೇಮ್ಸ್​ಗಳಲ್ಲಿ ಮಾತ್ರವಲ್ಲದೆ, ಇತ್ತೀಚೆಗೆ ವಿವಿಧ ವಿಶ್ವ ಚಾಂಪಿಯನ್​ಷಿಪ್​ಗಳಲ್ಲೂ ಹೆಚ್ಚಿನ ಪದಕಗಳನ್ನು ಗೆಲ್ಲುತ್ತಿದ್ದಾರೆ. ಕೇಂದ್ರ ಸರ್ಕಾರವೂ ಟಾರ್ಗೆಟ್​ ಒಲಿಂಪಿಕ್​ ಪೋಡಿಯಂ ಯೋಜನೆಯಡಿ (ಟಾಪ್ಸ್​) ಕ್ರೀಡಾಪಟುಗಳಿಗೆ ಪ್ರತಿ ಬಜೆಟ್​ನಲ್ಲೂ ವಿಶೇಷ ಅನುದಾನಗಳನ್ನು ನೀಡುತ್ತ ಬಂದಿದೆ. ಈ ಹಿನ್ನೆಲೆಯಲ್ಲಿ ಭಾರತ, ಶನಿವಾರ ಆರಂಭಗೊಳ್ಳಲಿರುವ ಹಾಂಗ್​ರೆೌ ಏಷ್ಯಾಡ್​ನಲ್ಲಿ ಪದಕಗಳ ಶತಕ ಸಿಡಿಸುವ ಹಂಬಲದಲ್ಲಿದೆ.

"ಅಬ್​ ಕಿ ಬಾರ್​, ಸೌ ಪಾರ್​' (ಈ ಬಾರಿ ನೂರರ ಆಚೆ) ಎಂಬ ಘೋಷಣೆಯೊಂದಿಗೆ ಕ್ರೀಡಾಪಟುಗಳಿಗೆ ಸ್ಫೂರ್ತಿಯನ್ನೂ ತುಂಬಲಾಗುತ್ತಿದೆ. ಕಳೆದ ಆವೃತ್ತಿಯಲ್ಲಿ 70 ಪದಕ ಗೆದ್ದಿದ್ದು ಭಾರತದ ಇದುವರೆಗಿನ ಶ್ರೇಷ್ಠ ನಿರ್ವಹಣೆಯಾಗಿದೆ.

ಈ ಬಾರಿ ಸರ್ವಾಧಿಕ 655 ಕ್ರೀಡಾಪಟುಗಳ ಬಳಗದೊಂದಿಗೆ ಏಷ್ಯಾಡ್​ಗೆ ತೆರಳಿರುವ ಭಾರತ, 39 ಕ್ರೀಡೆಗಳಲ್ಲಿ ಸ್ಪರ್ಧಿಸುತ್ತಿದ್ದು, ಪದಕ ಪಟ್ಟಿಯ ಅಗ್ರ-5ರೊಳಗೆ ಕಾಣಿಸಿಕೊಳ್ಳುವ ಗುರಿಯನ್ನೂ ಹೊಂದಿದೆ. ಕನಿಷ್ಠ 25 ಸ್ವರ್ಣ ಪದಕ ಗೆಲ್ಲುವ ಹೆಬ್ಬಯಕೆಯೂ ಭಾರತದ್ದಾಗಿದೆ.