ಕ್ರೀಡೆ

World Cup 2023: ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಭಾರತ, ಆರಂಭಿಕ ಸ್ಥಾನಕ್ಕೆ ಮತ್ತೆ ಗಿಲ್ ಎಂಟ್ರಿ

ನವದೆಹಲಿ: ಗುಜರಾತಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್​ ಟೂರ್ನಿಯ 12ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಎದುರು ಟಾಸ್​ ಗೆದ್ದ ಆತಿಥೇಯ ಭಾರತ ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

ಡೆಂಘೆ ಜ್ವರದ ಕಾರಣದಿಂದ ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ಶುಭಮನ್​ ಗಿಲ್ ಚೇತರಿಸಿಕೊಂಡಿದ್ದು,​ ಇಂದಿನ ಪಂದ್ಯಕ್ಕೆ ಲಭ್ಯವಾಗಿದ್ದಾರೆ. ಇಶಾನ್​ ಕಿಶನ್​ರನ್ನು ಆಡುವ 11 ಆಟಗಾರರ ಬಳಗದಿಂದ ಕೈಬಿಡಲಾಗಿದೆ. ಗಿಲ್​ 2023ರಲ್ಲಿ ಒಳ್ಳೆಯ ಬ್ಯಾಟಿಂಗ್​ ಪ್ರದರ್ಶನವನ್ನು ನೀಡಿದ್ದಾರೆ. ಕೇವಲ 20 ಏಕದಿನ ಪಂದ್ಯಗಳನ್ನು ಆಡಿರುವ ಗಿಲ್​, 1230 ರನ್​ಗಳೊಂದಿಗೆ ಈ ವರ್ಷ ಮುಂಚೂಣಿಯಲ್ಲಿ ಇರುವ ರನ್​ ಸ್ಕೋರರ್​ ಎನಿಸಿಕೊಂಡಿದ್ದಾರೆ. 72.35 ರನ್​ ಸರಾಸರಿಯೊಂದಿಗೆ 105.03 ಸ್ಟ್ರೈಕ್​ ರೇಟ್​ ಅನ್ನು ಹೊಂದಿದ್ದಾರೆ. ಐದು ಶತಕ ಮತ್ತು ಐದು ಅರ್ಧ ಶತಕಗಳೊಂದಿಗೆ ಒಂದೇ ವರ್ಷದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಶತಕಗಳನ್ನು ಬಾರಿಸಿರುವ ಭಾರತೀಯ ಅಗ್ರಗಣ್ಯ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಗಿಲ್​ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್​ ಕೊಹ್ಲಿ ಮತ್ತು ಸಚಿನ್​ ತೆಂಡೂಲ್ಕರ್​ ಇದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಏಷ್ಯಾ ಕಪ್​ನಲ್ಲೂ ಗಿಲ್​ ಒಳ್ಳೆಯ ರನ್​ ಕಲೆಹಾಕಿದರು. ತಮ್ಮ ಹೆಸರಿನಲ್ಲಿ 302 ರನ್​ ದಾಖಲಿಸಿದ ಗಿಲ್​, ಐಸಿಸಿ ಏಕದಿನ ಬ್ಯಾಟ್ಸ್​ಮೆನ್​ಗಳ ಪಟ್ಟಿಯಲ್ಲಿ ನಂ.1 ಸ್ಥಾನವನ್ನು ಅಲಂಕರಿಸಿದ್ದಾರೆ. ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​ ಅವರು ಒಂದೇ ವರ್ಷದಲ್ಲಿ ಗಳಿಸಿದ 1894 ರನ್​ಗಳ ವಿಶ್ವದಾಖಲೆಯನ್ನು ಮುರಿಯಲು ಈ ಕ್ಯಾಲೆಂಡರ್​ ವರ್ಷದಲ್ಲಿ ಗಿಲ್​ ಅವರಿಗೆ 665 ರನ್​ ಮಾತ್ರ ಬಾಕಿ ಇದೆ.

ಟೀಮ್​ ಇಂಡಿಯಾ ಅಭಿಮಾನಿಗಳಿಗೆ ವಿರಾಟ್​ ಕೊಹ್ಲಿ, ನಾಯಕ ರೋಹಿತ್​ ಶರ್ಮ, ಜಸ್ಪ್ರೀತ್​ ಬೂಮ್ರಾ, ಕೆ ಎಲ್​ ರಾಹುಲ್​ ಮತ್ತು ಮೊಹಮ್ಮದ್​ ಸಿರಾಜ್​ ಅವರ ಮೇಲೆ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಮಳೆ ಸಾಧ್ಯತೆ ವಿರಳ

ಕಳೆದ ಏಷ್ಯಾಕಪ್​ನಲ್ಲಿ ನಡೆದ ಭಾರತ&ಪಾಕ್​ ನಡುವಿನ ಎರಡೂ ಪಂದ್ಯಗಳು ಮಳೆಯಿಂದ ಅಡಚಣೆ ಎದುರಿಸಿದ್ದವು. ಈ ಪೈಕಿ ಒಂದು ಪಂದ್ಯ ರದ್ದುಗೊಂಡಿದ್ದರೆ, ಇನ್ನೊಂದು ಪಂದ್ಯ ಮರುದಿನಕ್ಕೆ ವಿಸ್ತರಿಸಲ್ಪಟ್ಟಿತ್ತು. ವಿಶ್ವಕಪ್​ನಲ್ಲೂ ಭಾರತ-ಪಾಕ್​ ಪಂದ್ಯಕ್ಕೆ ಅಲ್ಪ ಪ್ರಮಾಣದಲ್ಲಿ ಮಳೆ ಮುನ್ಸೂಚನೆ ಇದ್ದರೂ, ಮಳೆಯಿಂದಾಗಿ ಪಂದ್ಯ ತೊಂದರೆ ಎದುರಿಸುವ ಸಾಧ್ಯತೆ (ಶೇ. 14) ವಿರಳ ಎನ್ನಲಾಗುತ್ತಿದೆ. ಆದರೆ, ಮಳೆ ಕಾಡಿದರೆ ಈ ಪಂದ್ಯಕ್ಕೆ ಮೀಸಲು ದಿನ ಇರುವುದಿಲ್ಲ. ವಿಶ್ವಕಪ್​ನಲ್ಲಿ ನಾಕೌಟ್​ ಪಂದ್ಯಗಳಿಗೆ ಮಾತ್ರ ಮೀಸಲು ದಿನವಿದೆ.

ಪಿಚ್​ ರಿಪೋರ್ಟ್​

ನ್ಯೂಜಿಲೆಂಡ್​-ಇಂಗ್ಲೆಂಡ್​ ನಡುವಿನ ಉದ್ಘಾಟನಾ ಪಂದ್ಯದ ಬಳಿಕ ಅಹಮದಾಬಾದ್​ನಲ್ಲಿ ಹಾಲಿ ವಿಶ್ವಕಪ್​ನ 2ನೇ ಪಂದ್ಯ ಇದಾಗಿದೆ. ಮೊದಲ ಪಂದ್ಯವನ್ನು ಗಮನಿಸಿದರೆ ಇಲ್ಲಿನ ಪಿಚ್​ ಬ್ಯಾಟಿಂಗ್​-ಸ್ನೇಹಿಯಂತಿದೆ. ಆದರೆ ಬ್ಯಾಟರ್​ಗಳು ಕ್ರೀಸ್​ಗೆ ಇಳಿದ ಆರಂಭದಲ್ಲಿ ಎಚ್ಚರಿಕೆಯ ಆಟವಾಡುವುದು ಅಗತ್ಯ. ಬಳಿಕ ಬಿರುಸಿನ ಆಟಕ್ಕಿಳಿದರೆ ಬೃಹತ್​ ಮೊತ್ತ ನಿರೀಕ್ಷಿಸಬಹುದು. ಇಬ್ಬನಿ ಕಾಡುವ ಸಾಧ್ಯತೆ ಇದ್ದು, ಆಗ ಚೇಸಿಂಗ್​ ತಂಡಕ್ಕೆ ಅನುಕೂಲವಾಗಲಿದೆ.