ಮುಂಬೈ: ಬಲಿಷ್ಠ ನಿರ್ವಹಣೆಯೊಂದಿಗೆ ಸತತ 9 ಗೆಲುವು ದಾಖಲಿಸಿ ಲೀಗ್ ಹಂತದಲ್ಲಿ ಅಜೇಯ ಸಾಧನೆ ಮಾಡಿರುವ ಭಾರತ ತಂಡ ತವರಿನ ಏಕದಿನ ವಿಶ್ವಕಪ್ನಲ್ಲಿ, ಇದೇ ಜೋಶ್ನಲ್ಲಿ ಪ್ರಶಸ್ತಿ ಸುತ್ತಿಗೇರುವ ಹಂಬಲದಲ್ಲಿದೆ. ದೀಪಾವಳಿ ಹಬ್ಬದ ಸಂಭ್ರಮದ ಬಳಿಕ ಬುಧವಾರ ವಿಶ್ವಕಪ್ನಲ್ಲಿ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ರೋಹಿತ್ ಶರ್ಮ ಪಡೆ ಹಾಲಿ ರನ್ನರ್ಅಪ್ ನ್ಯೂಜಿಲೆಂಡ್ ತಂಡದ ಸವಾಲು ಎದುರಿಸಲಿದೆ. ಕಿವೀಸ್ ಎದುರು ಐಸಿಸಿ ಟೂರ್ನಿಗಳಲ್ಲಿ 20 ವರ್ಷಗಳಿಂದ ಗೆಲ್ಲದ ಕೊರತೆಯನ್ನು ಲೀಗ್ ಹಂತದ ಮುಖಾಮುಖಿಯಲ್ಲಿ ನೀಗಿಸಿಕೊಂಡಿರುವ ಟೀಮ್ ಇಂಡಿಯಾ, ಸೆಮೀಸ್ನಲ್ಲಿ 2019ರ ಆವೃತ್ತಿಯ ಸೋಲಿಗೂ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. 2011ರಲ್ಲಿ ವಿಶ್ವಕಪ್ ಕನಸು ನನಸಾಗಿಸಿಕೊಂಡಿದ್ದ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಈ ಬಾರಿ ಫೈನಲ್ ಟಿಕೆಟ್ ವಶಪಡಿಸಿಕೊಳ್ಳಬೇಕಾಗಿದೆ.
ಭಾರತ ತಂಡ ಸತತ 4ನೇ ಬಾರಿ ವಿಶ್ವಕಪ್ ಉಪಾಂತ್ಯಕ್ಕೇರಿದ್ದು, ಹಿಂದಿನ 2 ಆವೃತ್ತಿಗಳ ಎಡವಟ್ಟನ್ನು ಈ ಬಾರಿ ಸರಿಪಡಿಸಿಕೊಳ್ಳಬೇಕಾಗಿದೆ. ಲೀಗ್ ಹಂತದ ಪಂದ್ಯಗಳನ್ನು 9 ಭಿನ್ನ ತಾಣಗಳಲ್ಲಿ ಆಡಿದ್ದರೂ, ಪ್ರಯಾಣದ ಬಳಲಿಕೆ ತೋರಿಸಿಕೊಳ್ಳದೆ ಸರ್ವಾಂಗೀಣ ನಿರ್ವಹಣೆಯೊಂದಿಗೆ ಮಿಂಚಿರುವ ರೋಹಿತ್ ಶರ್ಮ ನಾಕೌಟ್ ಹಂತದಲ್ಲೂ 140 ಕೋಟಿ ಭಾರತೀಯರ ನಿರೀೆ ಹುಸಿಯಾಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಈ ಮೂಲಕ 2011ರ ಬಳಿಕ ಮತ್ತೊಮ್ಮೆ ತವರಿನ ಅಂಗಣದಲ್ಲೇ ಫೈನಲ್ ಆಡುವ ಅವಕಾಶವನ್ನು ಒಲಿಸಿಕೊಳ್ಳಬೇಕಾಗಿದೆ.
ಅತ್ತ ಕಿವೀಸ್ ತಂಡ ಸತತ 3ನೇ ಬಾರಿ ಫೈನಲ್ಗೇರುವ ಆಸೆಯಲ್ಲಿದೆ. ಕಳೆದೆರಡು ಆವೃತ್ತಿಗಳಲ್ಲಿ ಕೈಗೆಟುಕದ ಪ್ರಶಸ್ತಿಯನ್ನು ಈ ಸಲವಾದರೂ, ಒಲಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಇದಕ್ಕೆ, 2019ರಲ್ಲಿ ಭಾರತವನ್ನು ಸೋಲಿಸಿದ ಸಾಧನೆ ಕೇನ್ ವಿಲಿಯಮ್ಸನ್ ಬಳಗಕ್ಕೆ ಸ್ಫೂರ್ತಿಯಾಗಿದೆ.
ಭಾರತ ಆಲ್ರೌಂಡ್ ಶೋ...
ರೋಹಿತ್ ಶರ್ಮ ಪಡೆ ಕ್ರಿಕೆಟ್ ಪ್ರೇಮಿಗಳ ಕನಸಿನ ಆಟವನ್ನು ಲೀಗ್ ಹಂತದಲ್ಲಿ ಪ್ರದರ್ಶಿಸಿದೆ. ಯಾವ ದೌರ್ಬಲ್ಯವೂ ಇಲ್ಲದ ಸರ್ವಾಂಗೀಣ ನಿರ್ವಹಣೆ ದಾಖಲಾಗಿದೆ. ಬ್ಯಾಟಿಂಗ್ನಲ್ಲಿ ಶುಭಮಾನ್ ಗಿಲ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಭರ್ಜರಿ ಆಟವಾಡಿದ್ದರೆ, ಬೌಲಿಂಗ್ನಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮದ್ ಶಮಿ, ಸಿರಾಜ್, ರವೀಂದ್ರ ಜಡೇಜಾ, ಕುಲದೀಪ್ ಎದುರಾಳಿ ಪಾಲಿಗೆ ದುಃಸ್ವಪ್ನ ಎನಿಸಿದ್ದಾರೆ.
ಕಿವೀಸ್ಗೂ ಅನುಭವಿ-ಯುವಕರ ಬಲ
ಭಾರತದಂತೆ ಕಿವೀಸ್ ಕೂಡ ಅನುಭವಿ ಮತ್ತು ಯುವ ಆಟಗಾರರ ಮಿಶ್ರಣದಿಂದ ಕೂಡಿರುವ ತಂಡ. ಲೀಗ್ ಹಂತದಲ್ಲಿ ಭಾರತವನ್ನು ಎದುರಿಸುವ ಮುನ್ನ ಸತತ 4 ಜಯದೊಂದಿಗೆ ಅಜೇಯವಾಗಿಯೇ ಇದ್ದ ಕಿವೀಸ್, ನಂತರ ಸತತ 4 ಸೋಲಿನೊಂದಿಗೆ ಸೆಮಿಫೈನಲ್ಗೇರಲು ಪರದಾಡಿತ್ತು. ಆದರೆ ಕೊನೇ ಲೀಗ್ ಪಂದ್ಯದಲ್ಲಿ ಲಂಕಾ ಎದುರು ಬಲಿಷ್ಠ ನಿರ್ವಹಣೆ ತೋರಿ ಲಯಕ್ಕೆ ಮರಳಿದೆ. ಲೀಗ್ನಲ್ಲಿ ಗಾಯದಿಂದಾಗಿ ನಾಯಕ ಕೇನ್ ವಿಲಿಯಮ್ಸನ್ ಗೈರಿನ ಹಿನ್ನಡೆ ಎದುರಿಸಿದ್ದ ಕಿವೀಸ್ಗೆ ಬ್ಯಾಟಿಂಗ್ನಲ್ಲಿ ರಚಿನ್ ರವೀಂದ್ರ (565), ಡೆರಿಲ್ ಮಿಚೆಲ್ (418) ಮತ್ತು ಡೆವೊನ್ ಕಾನ್ವೇ (359) ಆಸರೆಯಾಗಿದ್ದರೆ, ಬೌಲಿಂಗ್ನಲ್ಲಿ ಮಿಚೆಲ್ ಸ್ಯಾಂಟ್ನರ್ (16), ಟ್ರೆಂಟ್ ಬೌಲ್ಟ್ (13) ಬಲ ತುಂಬಿದ್ದಾರೆ. ವೇಗಿ ಮ್ಯಾಟ್ ಹೆನ್ರಿ ಗಾಯದಿಂದ ಹೊರಬಿದ್ದಿರುವುದು ಕಿವೀಸ್ ಪ್ರಮುಖ ಹಿನ್ನಡೆಯಾಗಿದೆ.
4: ಭಾರತ ತಂಡ ಏಕದಿನ ವಿಶ್ವಕಪ್ನಲ್ಲಿ 4ನೇ ಬಾರಿ ೈನಲ್ಗೇರುವ ಅವಕಾಶ ಹೊಂದಿದೆ. ಈ ಮುನ್ನ 1983, 2011 (ಚಾಂಪಿಯನ್ಸ್) ಮತ್ತು 2003ರಲ್ಲಿ (ರನ್ನರ್ಅಪ್) ೈನಲ್ಗೇರಿತ್ತು.
9: ಕಿವೀಸ್ ಏಕದಿನ ವಿಶ್ವಕಪ್ನಲ್ಲಿ 9ನೇ ಬಾರಿ ಸೆಮಿೈನಲ್ಗೇರಿದ ಸಾಧನೆ ಮಾಡಿದೆ. ಈ ಮುನ್ನ 8ರಲ್ಲಿ 6ರಲ್ಲಿ ಸೋತಿದ್ದು, 2ರಲ್ಲಿ ಗೆದ್ದಿದೆ.
ಏಕದಿನ ಮುಖಾಮುಖಿ: 117
ಭಾರತ: 59, ನ್ಯೂಜಿಲೆಂಡ್: 50, ಟೈ: 1, ರದ್ದು: 7
ವಿಶ್ವಕಪ್ ಮುಖಾಮುಖಿ: 9
ಭಾರತ: 4, ನ್ಯೂಜಿಲೆಂಡ್ 5
ಆರಂಭ: ಬುಧವಾರ ಮಧ್ಯಾಹ್ನ 2
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಡಿ
ಭಾರತದ ಸೆಮಿಫೈನಲ್ ಹಾದಿ...
1. ಆಸ್ಟ್ರೆಲಿಯಾ ವಿರುದ್ಧ 6 ವಿಕೆಟ್ ಜಯ
2. ಅಫ್ಘಾನಿಸ್ತಾನ ವಿರುದ್ಧ 8 ವಿಕೆಟ್ ಜಯ
3. ಪಾಕಿಸ್ತಾನ ವಿರುದ್ಧ 7 ವಿಕೆಟ್ ಗೆಲುವು
4. ಬಾಂಗ್ಲಾದೇಶ ವಿರುದ್ಧ 7 ವಿಕೆಟ್ ಜಯ
5. ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್ ಜಯ
6. ಇಂಗ್ಲೆಂಡ್ ವಿರುದ್ಧ 100 ರನ್ ಗೆಲುವು
7. ಶ್ರೀಲಂಕಾ ವಿರುದ್ಧ 302 ರನ್ ಜಯಭೇರಿ
8. ದಕ್ಷಿಣ ಆಫ್ರಿಕಾ ಎದುರು 243 ರನ್ ಜಯ
9. ನೆದರ್ಲೆಂಡ್ ವಿರುದ್ಧ 160 ರನ್ ಗೆಲುವು
ನ್ಯೂಜಿಲೆಂಡ್ ಸೆಮಿಫೈನಲ್ ಹಾದಿ...
1. ಇಂಗ್ಲೆಂಡ್ ವಿರುದ್ಧ 9 ವಿಕೆಟ್ ಜಯ
2. ನೆದರ್ಲೆಂಡ್ ವಿರುದ್ಧ 99 ರನ್ ಜಯ
3. ಬಾಂಗ್ಲಾದೇಶ ವಿರುದ್ಧ 8 ವಿಕೆಟ್ ಜಯ
4. ಅಫ್ಘಾನಿಸ್ತಾನ ವಿರುದ್ಧ 149 ರನ್ ಜಯ
5. ಭಾರತದ ವಿರುದ್ಧ 4 ವಿಕೆಟ್ ಸೋಲು
6. ಆಸ್ಟ್ರೆಲಿಯಾ ವಿರುದ್ಧ 5 ರನ್ ಸೋಲು
7. ದಕ್ಷಿಣ ಆಫ್ರಿಕಾ ವಿರುದ್ಧ 190 ರನ್ ಸೋಲು
8. ಪಾಕಿಸ್ತಾನ ವಿರುದ್ಧ 21 ರನ್ ಸೋಲು
9. ಶ್ರೀಲಂಕಾ ವಿರುದ್ಧ 5 ವಿಕೆಟ್ ಗೆಲುವು
*3: ಮೊಹಮದ್ ಶಮಿ (47) ಇನ್ನು 3 ವಿಕೆಟ್ ಗಳಿಸಿದರೆ ಏಕದಿನ ವಿಶ್ವಕಪ್ನಲ್ಲಿ 50 ವಿಕೆಟ್ ಪಡೆದ ಭಾರತದ ಮೊದಲ ಮತ್ತು ವಿಶ್ವದ 7ನೇ ಬೌಲರ್ ಎನಿಸಲಿದ್ದಾರೆ.
ಸೆಮಿಫೈನಲಿಸ್ಟ್ಗಳ ವಿಶೇಷ
ಭಾರತ: ಎಲ್ಲ 9 ತಂಡಗಳ ವಿರುದ್ಧ ಜಯ
ದಕ್ಷಿಣ ಆಫ್ರಿಕಾ: ಭಾರತದ ವಿರುದ್ಧ ಸೋಲು
ಆಸ್ಟ್ರೆಲಿಯಾ: ಭಾರತ, ದ. ಆಫ್ರಿಕಾ ವಿರುದ್ಧ ಸೋಲು
ನ್ಯೂಜಿಲೆಂಡ್: ಭಾರತ, ಆಫ್ರಿಕಾ, ಆಸೀಸ್ ವಿರುದ್ಧ ಸೋಲು
*ಭಾರತದ ಹಾಲಿ ಬೌಲಿಂಗ್ ವಿಭಾಗ ನಾನು ಇದುವರೆಗೆ ನೋಡಿದ ಅತ್ಯುತ್ತಮವಾಗಿದೆ. ಭಾರತ ಈ ಹಿಂದೆ ಹಲವು ಶ್ರೇಷ್ಠ ಬೌಲರ್ಗಳನ್ನು ಹೊಂದಿತ್ತು. ಆದರೆ ಒಂದೇ ಬಾರಿ ಸಂಟಿತವಾಗಿ ನೋಡಿದಾಗ ಇದುವೇ ಅತ್ಯುತ್ತಮ ಬೌಲಿಂಗ್ ವಿಭಾಗವಾಗಿದೆ. ಬುಮ್ರಾ, ಸಿರಾಜ್, ಶಮಿ ಎದುರು ಬಚಾವ್ ಆಗಿಬಿಟ್ಟರೆ, ಸ್ಪಿನ್ನರ್ಗಳಾದ ಜಡೇಜಾ, ಕುಲದೀಪ್ ಕಾಡುತ್ತಾರೆ. ಭಾರತ ಈ ಹಿಂದೆ ಫ್ಯಾಬ್-5 (ಸಚಿನ್, ದ್ರಾವಿಡ್, ಸೆಹ್ವಾಗ್, ಗಂಗೂಲಿ, ಲಕ್ಷ್ಮಣ್) ಬ್ಯಾಟರ್ಗಳನ್ನು ಹೊಂದಿತ್ತು. ಈಗಿನದು ಫ್ಯಾಬ್-5 ಬೌಲಿಂಗ್ ವಿಭಾಗವಾಗಿದೆ.
| ನಾಸಿರ್ ಹುಸೇನ್, ಇಂಗ್ಲೆಂಡ್ ಮಾಜಿ ನಾಯಕ
*ರೋಹಿತ್ ನಾಯಕತ್ವಕ್ಕೆ ಗಂಭೀರ್ ಭೇಷ್
ವಿಶ್ವಕಪ್ನಲ್ಲಿ ಭಾರತ ತಂಡವನ್ನು ಅಜೇಯವಾಗಿ ಮುನ್ನಡೆಸುತ್ತಿರುವ ರೋಹಿತ್ ಶರ್ಮ ಅವರನ್ನು ಮಾಜಿ ಆರಂಭಿಕ ಗೌತಮ್ ಗಂಭೀರ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ರೋಹಿತ್ ತಂಡದ ಆಟಗಾರರಿಗೆ ಅತ್ಯುತ್ತಮ ಭದ್ರತೆಯನ್ನು ಒದಗಿಸುತ್ತಿದ್ದಾರೆ. ರೋಹಿತ್ ತಂಡದ ಇತರ 14 ಆಟಗಾರರ ಬಗ್ಗೆಯೂ ಕಾಳಜಿ ವಹಿಸುತ್ತಿದ್ದಾರೆ. ಅಂಥ ನಾಯಕತ್ವ ಗುಣದಿಂದಲೇ ಅವರು ಐಪಿಎಲ್ನಲ್ಲಿ 5 ಟ್ರೋಫಿ ಗೆದ್ದುಕೊಂಡಿದ್ದಾರೆ ಎಂದು ಗಂಭೀರ್ ಹೊಗಳಿದ್ದಾರೆ.