ಅಹಮದಾಬಾದ್: ಇಂದು (ನ.19) ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಟ್ರಾವಿಸ್ ಹೆಡ್ (137 ರನ್ 120 ಎಸೆತ 15 ಬೌಂಡರಿ, 4ಸಿಕ್ಸರ್) ಅವರ ಶತಕದ ನೆರವಿನಿಂದ ಆತಿಥೇಯ ಭಾರತ ವಿರುದ್ಧ ಭರ್ಜರಿ ಜಯ ದಾಖಲಿಸಿದ ಆಸ್ಟ್ರೇಲಿಯಾ 6ನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿಯುವ ಮೂಲಕ ಮತ್ತೊಮ್ಮೆ ಕ್ರಿಕೆಟ್ ಲೋಕದ ಅಧಿಪತಿ ಎಂಬುದನ್ನು ಸಾಬೀತು ಮಾಡಿದೆ.
ಭಾರತ ನೀಡಿದ 241 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ ಆಸಿಸ್ ಕೇವಲ 43 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 241 ರನ್ ಗಳಿಸುವ ಮೂಲಕ 6 ವಿಕೆಟ್ಗಳ ಅಂತರದಲ್ಲಿ ಸುಲಭವಾಗಿ ಗುರಿ ಮುಟ್ಟಿತು. ಕೇವಲ 47 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ ಆಸಿಸ್ಗೆ ಟ್ರಾವಿಸ್ ಹೆಡ್ ಆಪತ್ಭಾಂದವರಾದರು. ನಿರ್ಣಾಯಕ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಹೆಡ್, ಆಸಿಸ್ಗೆ ಸುಲಭ ಗೆಲುವು ತಂದುಕೊಟ್ಟರು. ಭಾರತೀಯ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಹೆಡ್, ಅಕ್ಷರಶಃ ಅಮೋಘ ಆಟವಾಡಿದರು.
ಲಬುಶೇನ್ ಸಾಥ್
ಹೆಡ್ ಜತೆಗೆ ಮಾರ್ನಸ್ ಲಬುಶೇನ್ ಉತ್ತಮ ಸಾಥ್ ನೀಡಿದರು. ಈ ಜೋಡಿ ನಿರ್ಣಾಯಕ ಪಂದ್ಯದಲ್ಲಿ 192 ರನ್ಗಳ ಅಮೋಘ ಜತೆಯಾಟವಾಡಿದರು. ತಾಳ್ಮೆಯ ಆಟವಾಡಿದ ಲಬುಶೇನ್ 110 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ ಅಜೇಯ 58 ರನ್ಗಳ ಅರ್ಧಶತಕ ಸಿಡಿಸಿ ಮಿಂಚಿದರು. ಉಳಿದಂತೆ ಗ್ಲೇನ್ ಮ್ಯಾಕ್ಸ್ವೆಲ್ 2 ರನ್ ಗಳಿಸಿ ಅಜೇಯರಾಗಿ ಉಳಿದರು.
ಆರಂಭಿಕ ಆಘಾತ
ಆರಂಭದಲ್ಲಿ ಮೊಹಮ್ಮದ್ ಶಮಿ ಮತ್ತು ಜಸ್ಪ್ರೀತ್ ಬುಮ್ರಾ ಆಸಿಸ್ ಪಡೆಗೆ ಆಘಾತ ನೀಡಿದರು. ತಂಡದ ಮೊತ್ತ 16 ರನ್ ಇದ್ದಾಗ 7 ರನ್ ಗಳಿಸಿದ್ದ ಡೇವಿಡ್ ವಾರ್ನರ್ ಮೊಹಮ್ಮದ್ ಶಮಿ ಓವರ್ನಲ್ಲಿ ಕೊಹ್ಲಿಗೆ ಕ್ಯಾಚಿತ್ತು ನಿರ್ಗಮಿಸಿದರು. ಇದರ ಬೆನ್ನಲ್ಲೇ ನಾನೇನು ಕಮ್ಮಿ ಎನ್ನುವಂತೆ ಮಾರಕ ಬೌಲಿಂಗ್ ದಾಳಿ ಮಾಡಿದ ಬುಮ್ರಾ, ಮಿಚೆಲ್ ಮಾರ್ಷ್ (15) ಮತ್ತು ಸ್ಟೀವ್ ಸ್ಮಿತ್ (4) ಅವರನ್ನು ಬಂದಷ್ಟೇ ವೇಗವಾಗಿ ಪೆವಿಲಿಯನ್ ಅಟ್ಟಿದರು. ಕೇವಲ 43 ರನ್ಗೆ ಪ್ರಮುಖ 3 ವಿಕೆಟ್ ಕಳೆದುಕೊಳ್ಳುವ ಮೂಲಕ ಆಸಿಸ್ ಪಡೆ ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಗೆಲುವು ಭಾರತದ್ದೇ ಎಂಬ ಅಭಿಪ್ರಾಯ ಮೂಡಿಬಂದಿತ್ತು. ಆದರೆ, ಅಭಿಪ್ರಾಯವನ್ನು ಹೆಡ್ ಅಕ್ಷರಶಃ ಬದಲಾಯಿಸಿಬಿಟ್ಟರು.
ಆರನೇ ವಿಶ್ವಕಪ್ ಗೆಲುವು
ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್ನಲ್ಲಿ ಮುಖಾಮುಖಿಯಾಗಿದ್ದು, ಇದು ಎರಡನೇ ಬಾರಿ. 2003ರ ವಿಶ್ವಕಪ್‌ನಲ್ಲಿ ಮೊದಲ ಬಾರಿ ಮುಖಾಮುಖಿಯಾಗಿದ್ದವು. ರಿಕಿ ಪಾಂಟಿಂಗ್ ನೇತೃತ್ವದ ಆಸ್ಟ್ರೇಲಿಯಾ ತಂಡ ಸೌರವ್ ಗಂಗೂಲಿ ನಾಯಕತ್ವದ ಭಾರತವನ್ನು ಸೋಲಿಸಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಇದೀಗ ಮತ್ತೊಮ್ಮೆ ಭಾರತದ ವಿರುದ್ಧ ಗೆಲುವು ಸಾಧಿಸುವ ಮೂಲಕ ಆರನೇ ಬಾರಿ ವಿಶ್ವಕಪ್ ಗೆಲುವು ಸಂಭ್ರಮಿಸುತ್ತಿದೆ. 1987, 1999, 2003, 2007, 2015 ಮತ್ತು ಇದೀಗ 2023 ಅಲ್ಲಿಗೆ ಒಟ್ಟು ಆರು ಬಾರಿ ಆಸ್ಟ್ರೇಲಿಯಾ ವಿಶ್ವಕಪ್ ಗೆದ್ದಂತಾಯಿತು.
ಬೌಲಿಂಗ್ ವೈಫಲ್ಯ
ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ 2 ವಿಕೆಟ್ ಕಬಳಿಸಿದರೆ, ಶಮಿ ಒಂದು ವಿಕೆಟ್ಗೆ ತೃಪ್ತಿಪಟ್ಟುಕೊಂಡರು. ಉಳಿದಂತೆ ಯಾವೊಬ್ಬ ಬೌಲರ್ಗಳು ಕೂಡ ಆಸಿಸ್ ಬ್ಯಾಟರ್ಗಳಿಗೆ ಸವಾಲಾಗಲಿಲ್ಲ. ಸ್ಪಿನ್ನರ್ಗಳಂತೂ ತಮ್ಮ ಛಾಪು ಮೂಡಿಸಲೇ ಇಲ್ಲ. ಇಡೀ ಟೂರ್ನಿಯಲ್ಲಿ ಬೌಲಿಂಗ್ನಲ್ಲಿ ತಮ್ಮದೇ ಆದ ಪ್ರಭಾವ ಸೃಷ್ಟಿಸಿದ್ದ ಟೀಮ್ ಇಂಡಿಯಾ ಇಂದು ಅತ್ಯಂತ ಕಳಪೆ ನಿರ್ವಹಣೆ ತೋರಿತು. ಬೌಲರ್ಗಳ ವೈಫಲ್ಯವೇ ಟೀಮ್ ಇಂಡಿಯಾದ ಹೀನಾಯ ಸೋಲಿಗೆ ಕಾರಣ ಎಂದು ಹೇಳಬಹುದು.
ಬ್ಯಾಟಿಂಗ್ನಲ್ಲಿ ಎಡವಿದ ಭಾರತ
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತ 240 ರನ್ ಕಲೆಹಾಕಿತು. ಈ ಮೂಲಕ ಆಸಿಸ್ ಗೆಲುವಿಗೆ 241 ರನ್ಗಳ ಸಾಧಾರಣ ಗುರಿ ನೀಡಿತು. ತಂಡದ ಪರ ಶುಭಮಾನ್ ಗಿಲ್ ಮತ್ತು ರೋಹಿತ್ ಶರ್ಮ ಆರಂಭಿಕರಾಗಿ ಕಣಕ್ಕಿಳಿದರು. ತಂಡದ ಮೊತ್ತ 30 ಆಗಿದ್ದಾಗ 4 ರನ್ ಗಳಿಸಿದ್ದ ಗಿಲ್, ಕ್ಯಾಚಿತ್ತು ನಿರ್ಗಮಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ಇತ್ತ 31 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನೊಂದಿಗೆ 47 ರನ್ ಗಳಿಸಿ ಸ್ಫೋಟಕ ಆಟವಾಡುತ್ತಿದ್ದ ರೋಹಿತ್, ಅರ್ಧ ಶತಕಕ್ಕೆ ಇನ್ನೂ ಮೂರು ರನ್ ಬಾಕಿ ಇರುವಾಗಲೇ ಮಿಚೆಲ್ ಸ್ಟಾರ್ಕ್ ಓವರ್ನಲ್ಲಿ ಆ್ಯಡಂ ಜಂಪಾಗೆ ಕ್ಯಾಚಿತ್ತು ಪೆವಲಿಯನ್ಗೆ ಮರಳಿದರು. ಇದರಿಂದ ತಂಡಕ್ಕೆ ಹಿನ್ನಡೆಯಾಯಿತು.
ವಿರಾಟ್ ಕೊಹ್ಲಿ ತಾಳ್ಮೆಯ ಆಟದೊಂದಿಗೆ ಇನಿಂಗ್ಸ್ ಕಟ್ಟಿದರೆ, ಸಮಿಫೈನಲ್ನಲ್ಲಿ ಸ್ಫೋಟಕ ಶತಕದೊಂದಿಗೆ ಅಬ್ಬರಿಸಿ ಬೊಬ್ಬಿರಿದಿದ್ದ ಶ್ರೇಯಸ್ ಅಯ್ಯರ್ ಕೇವಲ 4 ರನ್ಗಳಿಗೆ ಔಟಾಗಿದ್ದು, ಭಾರತಕ್ಕೆ ಭಾರೀ ಆಘಾತವಾಯಿತು. ಅಲ್ಲದೆ, ಕೇವಲ 81 ರನ್ಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟಕ್ಕೆ ಸಿಲುಕಿತು. ಬಳಿಕ ಕೊಹ್ಲಿ ಮತ್ತು ರಾಹುಲ್ ಜತೆಗೂಡಿ ಉತ್ತಮ ಜತೆಯಾಟದ ಮುನ್ಸೂಚನೆ ನೀಡಿದರು. ಆದರೆ, 64 ಎಸೆತಗಳಲ್ಲಿ 3 ಬೌಂಡರಿಯೊಂದಿಗೆ 54 ರನ್ ಗಳಿಸಿ ಭರವಸೆ ಮೂಡಿಸಿದ್ದ ಕೊಹ್ಲಿ, ಔಟಾಗುವ ಮೂಲಕ ಭಾರತಕ್ಕಿದ್ದ ಬಹುದೊಡ್ಡ ಭರವಸೆ ಮಂಕಾಯಿತು. ಈ ಜೋಡಿ 68 ರನ್ಗಳ ಜತೆಯಾಟ ನೀಡಿತ್ತು.
ಬಳಿಕ ಬಂದ ರವೀಂದ್ರ ಜಡೇಜಾ ಕೇವಲ 9 ರನ್ಗೆ ವಿಕೆಟ್ ಒಪ್ಪಿಸಿ, ಬಂದಷ್ಟೇ ವೇಗವಾಗಿ ಪೆವಿಲಿಯನ್ಗೆ ಮರಳಿದರು. 107 ಎಸೆತಗಳಲ್ಲಿ ಕೇವಲ 1 ಬೌಂಡರಿಯೊಂದಿಗೆ 66 ರನ್ಗಳಿಸಿ ತಾಳ್ಮೆಯ ಆಟಕ್ಕೆ ಮೊರೆ ಹೋಗಿದ್ದ ರಾಹುಲ್ಗೆ ಮಿಚೆಲ್ ಸ್ಟಾರ್ಕ್ ಪೆವಿಲಿಯನ್ ಹಾದಿ ತೋರಿದರು. ನೆದರ್ಲೆಂಡ್ ವಿರುದ್ಧದ ಲೀಗ್ ಪಂದ್ಯದಲ್ಲಿ ಕೇವಲ 64 ಎಸೆತಗಳಲ್ಲಿ 102 ರನ್ ಗಳಿಸಿದ್ದ ರಾಹುಲ್, ಈ ಪಂದ್ಯದಲ್ಲಿ 107 ಎಸೆತಗಳಲ್ಲಿ 66 ರನ್ ಗಳಿಸಿದರು. ಆಸಿಸ್ ಬೌಲರ್ಗಳನ್ನು ಎದುರಿಸಲು ರಾಹುಲ್ ತಡಕಾಡಿದರು.
ಉಳಿದಂತೆ ಮೊಹಮ್ಮದ್ ಶಮಿ 6 ರನ್ ಗಳಿಸಿದರೆ, ಜಸ್ಪ್ರೀತ್ ಬೂಮ್ರಾ 1, ಸೂರ್ಯಕುಮಾರ್ ಯಾದವ್ 18 ಹಾಗೂ ಕುಲದೀಪ್ ಯಾದವ್ 10 ರನ್ ಗಳಿಸಿ ಔಟಾದರೆ, ಮೊಹಮ್ಮದ್ ಸಿರಾಜ್ 9 ರನ್ ಗಳಿಸಿ ಅಜೇಯರಾಗಿ ಉಳಿದರು.
ನಿರ್ಣಾಯಕ ಪಂದ್ಯದಲ್ಲಿ ಆಸಿಸ್ ಪರ ಮಾರಕ ಬೌಲಿಂಗ್ ದಾಳಿ ಮಾಡಿದ ಮಿಚೆಲ್ ಸ್ಟಾರ್ಕ್ ಪ್ರಮುಖ 3 ವಿಕೆಟ್ ಕಬಳಿಸಿ ಮಿಂಚಿದರು. ನಾಯಕ ಪ್ಯಾಟ್ ಕ್ಯುಮಿನ್ಸ್ ಹಾಗೂ ಜೋಶ್ ಹಜಾಲ್ವುಡ್ ತಲಾ 2 ವಿಕೆಟ್ ಪಡೆದರೆ, ಗ್ಲೇನ್ ಮ್ಯಾಕ್ಸ್ವೆಲ್ ಮತ್ತು ಆ್ಯಡಂ ಜಂಪಾ ತಲಾ ಒಂದೊಂದು ವಿಕೆಟ್ ಪಡೆದರು. ಕುಲದೀಪ್ ಯಾದವ್ ರನೌಟ್ಗೆ ತುತ್ತಾದರು.