ಕ್ರೀಡೆ

ಬಾರ್ಡರ್​-ಗಾವಸ್ಕರ್​ ಟ್ರೋಫಿಗೆ ಭಾರತ ಟೆಸ್ಟ್​ ತಂಡ ಪ್ರಕಟ; ಹರ್ಷಿತ್​, ನಿತೀಶ್​ ಹೊಸಮುಖ; ಇಬ್ಬರು ಕನ್ನಡಿಗರಿಗೆ ಸ್ಥಾನ

ಬೆಂಗಳೂರು: ಮುಂಬರುವ ಆಸ್ಟ್ರೆಲಿಯಾ ಪ್ರವಾಸದ ಬಾರ್ಡರ್​&ಗಾವಸ್ಕರ್​ ಟ್ರೋಫಿ ಟೆಸ್ಟ್​ ಸರಣಿಗೆ ಭಾರತ ತಂಡವನ್ನು ಶುಕ್ರವಾರ ಪ್ರಕಟಿಸಲಾಗಿದೆ. ಒಟ್ಟು 18 ಆಟಗಾರರ ತಂಡದಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಕೆಎಲ್​ ರಾಹುಲ್​ ಜತೆಗೆ ವೇಗಿ ಪ್ರಸಿದ್ಧ ಕೃಷ್ಣ ಸ್ಥಾನ ಸಂಪಾದಿಸಿದ್ದಾರೆ. ದೆಹಲಿಯ ವೇಗಿ ಹರ್ಷಿತ್​ ರಾಣಾ ಮತ್ತು ಆಂಧ್ರದ ವೇಗದ ಬೌಲಿಂಗ್​ ಆಲ್ರೌಂಡರ್​ ನಿತೀಶ್​ ಕುಮಾರ್​ ರೆಡ್ಡಿ ಮೊದಲ ಬಾರಿಗೆ ಟೆಸ್ಟ್​ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ವೇಗಿ ಮೊಹಮದ್​ ಶಮಿ ಇನ್ನೂ ಪೂರ್ಣ ಫಿಟ್ನೆಸ್​ ಕಂಡುಕೊಳ್ಳದ ಕಾರಣ ಆಸೀಸ್​ ಪ್ರವಾಸಕ್ಕೂ ಆಯ್ಕೆಯಾಗಿಲ್ಲ.

ಹಾಲಿ ನ್ಯೂಜಿಲೆಂಡ್​ ವಿರುದ್ಧ ಸರಣಿಯಲ್ಲಿ ಆಡುತ್ತಿರುವ ಆಟಗಾರರ ಪೈಕಿ ಅಕ್ಷರ್​ ಪಟೇಲ್​ ಮಾತ್ರ ಕೊಕ್​ ಪಡೆದಿದ್ದಾರೆ. ಸ್ಪಿನ್ನರ್​ ಕುಲದೀಪ್​ ಯಾದವ್​ ಗಾಯದಿಂದಾಗಿ ಅಲಭ್ಯರಾಗಿದ್ದಾರೆ. 29 ವರ್ಷದ ಅಭಿಮನ್ಯು ಈಶ್ವರನ್​ ಟೆಸ್ಟ್​ ತಂಡಕ್ಕೆ ಮರಳಿದ್ದಾರೆ. ಬಂಗಾಳ ಬ್ಯಾಟರ್​ ಅಭಿಮನ್ಯು ಈಶ್ವರನ್​ ಈ ಹಿಂದೆ 2022ರ ಬಾಂಗ್ಲಾದೇಶ ಪ್ರವಾಸಕ್ಕೆ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆದಿದ್ದರೂ, ಇನ್ನೂ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡುವ ಅವಕಾಶ ಪಡೆದಿಲ್ಲ.

ಪುಣೆ ಟೆಸ್ಟ್​ನಲ್ಲಿ ಕಿವೀಸ್​ ವಿರುದ್ಧ 11 ವಿಕೆಟ್​ ಕಬಳಿಸಿ ಮಿಂಚಿರುವ ವಾಷಿಂಗ್ಟನ್​ ಸುಂದರ್​ ಆಸೀಸ್​ ಪ್ರವಾಸಕ್ಕೂ ತೆರಳಲಿದ್ದಾರೆ. ಮುಕೇಶ್​ ಕುಮಾರ್​, ನವದೀಪ್​ ಸೈನಿ ಮತ್ತು ಖಲೀಲ್​ ಅಹ್ಮದ್​ ಮೀಸಲು ಆಟಗಾರರಾಗಿ ಆಸೀಸ್​ಗೆ ತೆರಳಲಿದ್ದಾರೆ. 5 ಪಂದ್ಯಗಳ ಟೆಸ್ಟ್​ ಸರಣಿ ನವೆಂಬರ್​ 22ರಂದು ಪರ್ತ್​ನಲ್ಲಿ ಶುರುವಾಗಲಿದೆ.

ಜಸ್​ಪ್ರೀತ್​ ಬುಮ್ರಾ ಮತ್ತೊಮ್ಮೆ ಉಪನಾಯಕರಾಗಿ ನೇಮಕಗೊಂಡಿದ್ದಾರೆ. ರೋಹಿತ್​ ಶರ್ಮ 2ನೇ ಮಗುವಿನ ನಿರೀೆಯಲ್ಲಿ ಮೊದಲ ಅಥವಾ 2ನೇ ಟೆಸ್ಟ್​ಗೆ ಗೈರಾದರೆ ಬುಮ್ರಾ ಹಂಗಾಮಿ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ.

ಟೆಸ್ಟ್​ ತಂಡ: ರೋಹಿತ್​ ಶರ್ಮ (ನಾಯಕ), ಜಸ್​ಪ್ರೀತ್​ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್​, ಅಭಿಮನ್ಯು ಈಶ್ವರನ್​, ಶುಭಮಾನ್​ ಗಿಲ್​, ವಿರಾಟ್​ ಕೊಹ್ಲಿ, ಕೆಎಲ್​ ರಾಹುಲ್​, ರಿಷಭ್​ ಪಂತ್​ (ವಿ.ಕೀ), ಸ್ರಾರ್ಜ್​ ಖಾನ್​, ಧ್ರುವ ಜುರೆಲ್​ (ವಿ.ಕೀ), ಆರ್​. ಅಶ್ವಿನ್​, ರವೀಂದ್ರ ಜಡೇಜಾ, ಮೊಹಮದ್​ ಸಿರಾಜ್​, ಆಕಾಶ್​ ದೀಪ್​, ಪ್ರಸಿದ್ಧ ಕೃಷ್ಣ, ಹರ್ಷಿತ್​ ರಾಣಾ, ನಿತೀಶ್​ ಕುಮಾರ್​ ರೆಡ್ಡಿ, ವಾಷಿಂಗ್ಟನ್​ ಸುಂದರ್​.