ಕ್ರೀಡೆ

ಟಿ20 ವಿಶ್ವಕಪ್​ಗೆ ಏಪ್ರಿಲ್​ 27 ಅಥವಾ 28ಕ್ಕೆ ಭಾರತ ತಂಡ ಪ್ರಕಟ; 10 ಆಟಗಾರರ ಹೆಸರು ಈಗಾಗಲೆ ಅಂತಿಮ!

ನವದೆಹಲಿ: ಮುಂಬರುವ ಟಿ20 ವಿಶ್ವಕಪ್​ ಟೂರ್ನಿಗೆ ಭಾರತ ತಂಡದ ಆಯ್ಕೆ ಸಭೆ ಏಪ್ರಿಲ್​ 27 ಅಥವಾ 28ರಂದು ನಡೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಅಮೆರಿಕ-ವೆಸ್ಟ್​ ಇಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಟೂರ್ನಿಗೆ ತಂಡಗಳನ್ನು ಪ್ರಕಟಿಸಲು ಐಸಿಸಿ ಮೇ 1ರ ಗಡುವು ನಿಗದಿಪಡಿಸಿದೆ.

ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡ ಏಪ್ರಿಲ್​ 27ರಂದು ನವದೆಹಲಿಯಲ್ಲಿ ಪಂದ್ಯ ಆಡಲಿದೆ. ಹೀಗಾಗಿ ರೋಹಿತ್​ ಶರ್ಮ, ಆಯ್ಕೆ ಸಮಿತಿ ಸದಸ್ಯರೊಂದಿಗೆ ಕುಳಿತು ಚರ್ಚಿಸಿ ತಂಡವನ್ನು ಆರಿಸಲು ಇದುವೇ ಸೂಕ್ತ ಸ್ಥಳವೆನಿಸಿದೆ. ಆದರೆ ಮುಂಬೈ&ಡೆಲ್ಲಿ ಪಂದ್ಯಕ್ಕೆ ಮುನ್ನವೇ ಸಭೆ ನಡೆಯುವುದೇ ಅಥವಾ ಪಂದ್ಯದ ನಂತರ ಸಭೆ ನಡೆಯುವುದೇ ಎಂಬುದು ಸ್ಪಷ್ಟವಾಗಿಲ್ಲ.

ಆಯ್ಕೆ ಸಮಿತಿಯ ಸದಸ್ಯ ಅಜಿತ್​ ಅಗರ್ಕರ್​ ಸದ್ಯ ಕುಟುಂಬದ ಜತೆಗೆ ಬಿಡುವಿನ ಸಮಯವನ್ನು ಕಳೆಯಲು ಸ್ಪೇನ್​ಗೆ ತೆರಳಿದ್ದು, ಅವರು ಮರಳಿದ ಬೆನ್ನಲ್ಲೇ ಏಪ್ರಿಲ್​ 27 ಅಥವಾ 28 ಸಭೆ ನಡೆಸಲು ಸರಿಯಾದ ಸಮಯವೆನಿಸಿದೆ. ಏಪ್ರಿಲ್​ 30ರಂದು ಮುಂಬೈ ತಂಡ ಲಖನೌದಲ್ಲಿ ಪಂದ್ಯ ಆಡಲಿದೆ. ಹೀಗಾಗಿ ತಂಡ ಆರಿಸಲು ಮೇ 1ರ ಅಂತಿಮ ಗಡುವಿನವರೆಗೆ ಕಾಯುವ ಬದಲಾಗಿ 2-3 ದಿನ ಮುನ್ನವೇ ತಂಡವನ್ನು ಅಂತಿಮಗೊಳಿಸಲು ಬಿಸಿಸಿಐ ಬಯಸಿದೆ.

ಒಟ್ಟು 20 ತಂಡಗಳ ಟಿ20 ವಿಶ್ವಕಪ್​ ಜೂನ್​ 1ರಿಂದ 29ರವರೆಗೆ ನಡೆಯಲಿದ್ದು, ಭಾರತ ತಂಡ ಜೂನ್​ 5ರಂದು ಐರ್ಲೆಂಡ್​ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ.

10 ಆಟಗಾರರು ಅಂತಿಮ?

ಟಿ20 ವಿಶ್ವಕಪ್​ನಲ್ಲಿ ಆಡಲಿರುವ ಭಾರತ ತಂಡದ 10 ಆಟಗಾರರ ಹೆಸರು ಈಗಾಗಲೆ ಬಹುತೇಕ ಅಂತಿಮವಾಗಿದೆ ಎನ್ನಲಾಗಿದೆ. ಅವರಂದರೆ ರೋಹಿತ್​ ಶರ್ಮ (ನಾಯಕ), ವಿರಾಟ್​ ಕೊಹ್ಲಿ, ರಿಷಭ್​ ಪಂತ್​, ಸೂರ್ಯಕುಮಾರ್​ ಯಾದವ್​, ಜಸ್​ಪ್ರೀತ್​ ಬುಮ್ರಾ, ರವೀಂದ್ರ ಜಡೇಜಾ, ಅರ್ಷದೀಪ್​ ಸಿಂಗ್​, ಮೊಹಮದ್​ ಸಿರಾಜ್​, ಕುಲದೀಪ್​ ಯಾದವ್​ ಮತ್ತು ಹಾರ್ದಿಕ್​ ಪಾಂಡ್ಯ. ಈ ಪೈಕಿ ಹಾರ್ದಿಕ್​ರ ಐಪಿಎಲ್​ ನಿರ್ವಹಣೆ ಮತ್ತು ಫಿಟ್ನೆಸ್​ ಕೂಡ ನಿರ್ಣಾಯಕ ಪಾತ್ರ ವಹಿಸಲಿದೆ.