ಕ್ರೀಡೆ

10 ವರ್ಷಗಳ ಬಳಿಕ ಐಸಿಸಿ ಟೂರ್ನಿಗೆ ಶಿಖರ್​ ಧವನ್​ ಮಿಸ್​! ಟಾಪ್​ ಸ್ಕೋರರ್​ ಕಡೆಗಣಿಸಿದ ಭಾರತ!

ಬೆಂಗಳೂರು: ಅನುಭವಿ ಎಡಗೈ ಆರಂಭಿಕ ಶಿಖರ್​ ಧವನ್​ ಯಾವುದಾದರೂ ದ್ವಿಪಯ ಸರಣಿಯಲ್ಲಿ ವಿಫಲರಾದಾಗ ಆ ಸರಣಿಗೆ 'ಐಸಿಸಿ' ಎಂದು ಹೆಸರಿಡಿ ಎಂಬುದಾಗಿ ಅವರ ಅಭಿಮಾನಿಗಳು ಪ್ರೀತಿಯಿಂದ ಒತ್ತಾಯಿಸುತ್ತಿದ್ದರು! ಅದಕ್ಕೆ ಕಾರಣ ಐಸಿಸಿ ಟೂರ್ನಿಗಳಲ್ಲಿ ಧವನ್​ ಅವರ ಬಲಿಷ್ಠ ಬ್ಯಾಟಿಂಗ್​ ದಾಖಲೆ. ಕಳೆದ 10 ವರ್ಷಗಳಿಂದ ಐಸಿಸಿ ಟೂರ್ನಿಗಳಲ್ಲಿ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದ ಶಿಖರ್​ ಧವನ್​, ಇದೀಗ ತವರಿನ ಏಕದಿನ ವಿಶ್ವಕಪ್​ ತಂಡದಿಂದ ವಂಚಿತರಾಗಿದ್ದಾರೆ.

ಏಕದಿನ ಮಾದರಿಯ ಐಸಿಸಿ ಟೂರ್ನಿಗಳಲ್ಲಿ 65ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ಸಾವಿರಕ್ಕೂ ಅಧಿಕ ರನ್​ ಗಳಿಸಿದ ಭಾರತದ ಏಕಮಾತ್ರ ಬ್ಯಾಟರ್​ ಎಂಬ ಹೆಗ್ಗಳಿಕೆಯ ಧವನ್​, ಈ ಮುನ್ನ 2015, 2019ರ ಏಕದಿನ ವಿಶ್ವಕಪ್​ ಮತ್ತು 2013, 2017ರ ಚಾಂಪಿಯನ್ಸ್​ ಟ್ರೋಫಿಯಲ್ಲಿ ಆಡಿದ್ದರು. 37 ವರ್ಷದ ಧವನ್​ ಅನುಭವಕ್ಕೆ ಈ ಬಾರಿ ಮಾನ್ಯತೆ ಲಭಿಸಿಲ್ಲ. ಯುವ ಆರಂಭಿಕ ಶುಭಮಾನ್​ ಗಿಲ್​ಗೆ ಆಯ್ಕೆಗಾರರು ಮಣೆ ಹಾಕಿದ್ದಾರೆ. ನಾಯಕ ರೋಹಿತ್​ ಶರ್ಮ ಜತೆ ಧವನ್​ ಯಶಸ್ವಿ ಆರಂಭಿಕರಾಗಿ ಮಿಂಚಿದ್ದರೂ ಅವರ ಜತೆಯಾಟಕ್ಕೆ ಈಗ ಪೂರ್ಣವಿರಾಮ ಬಿದ್ದಂತಾಗಿದೆ.

ಐಸಿಸಿ ಟೂರ್ನಿಗಳಿಗೆ ಹೋಲಿಸಿದರೆ ಶಿಖರ್​ ಧವನ್​ ಅವರ ಒಟ್ಟಾರೆ ಏಕದಿನ ಕ್ರಿಕೆಟ್​ ವೃತ್ತೀಜಿವನದ ಬ್ಯಾಟಿಂಗ್​ ಸರಾಸರಿ (44) ಬಹಳ ಕಡಿಮೆಯಾಗಿದೆ. ಹೀಗಾಗಿ ಅವರನ್ನು ಐಸಿಸಿ ಟೂರ್ನಿಗಳ ಸ್ಪೆಷಲಿಸ್ಟ್​ ಎಂದೇ ಪರಿಗಣಿಸಲಾಗುತ್ತದೆ. 'ಮಿಸ್ಟರ್​ ಐಸಿಸಿ' ಎಂಬ ಹೆಸರನ್ನೂ ಹೊಂದಿದ್ದರು.

2013ರ ಚಾಂಪಿಯನ್ಸ್​ ಟ್ರೋಫಿಯಲ್ಲಿ 90.7ರ ಸರಾಸರಿಯಲ್ಲಿ 363 ರನ್​ ಗಳಿಸಿ ಭಾರತ ತಂಡದ ಪ್ರಶಸ್ತಿ ಗೆಲುವಿಗೆ ನೆರವಾಗಿದ್ದ ಧವನ್​ ನಂತರ 2015ರ ಏಕದಿನ ವಿಶ್ವಕಪ್​ನಲ್ಲಿ 51.5ರ ಸರಾಸರಿಯಲ್ಲಿ 412 ರನ್​ ಸಿಡಿಸಿದ್ದರು. 2017ರ ಚಾಂಪಿಯನ್ಸ್​ ಟ್ರೋಫಿಯಲ್ಲಿ ಮತ್ತೆ 67.7ರ ಸರಾಸರಿಯಲ್ಲಿ 338 ರನ್​ ಸಿಡಿಸಿದ್ದರು. 2019ರ ಏಕದಿನ ವಿಶ್ವಕಪ್​ನಲ್ಲಿ 62.6ರ ಸರಾಸರಿಯಲ್ಲಿ 125 ರನ್​ ಗಳಿಸಿದ್ದರು. ಗಾಯದಿಂದಾಗಿ ಧವನ್​ ಆ ವಿಶ್ವಕಪ್​ನಲ್ಲಿ ಕೇವಲ ಎರಡೇ ಪಂದ್ಯ ಆಡಿದ್ದರು. ಈ ಪೈಕಿ ಆಸೀಸ್​ ವಿರುದ್ಧದ ಪಂದ್ಯದಲ್ಲಿ ಶತಕವನ್ನೂ ಸಿಡಿಸಿದ್ದರು.

ವೃತ್ತೀಜಿವನದಲ್ಲಿ ಒಟ್ಟಾರೆ 167 ಏಕದಿನ ಪಂದ್ಯ ಆಡಿದ 6,793 ರನ್​ ಗಳಿಸಿರುವ ಶಿಖರ್​ ಧವನ್​ ವಿಶ್ವಕಪ್​ ತಂಡದಿಂದ ಹೊರಬೀಳುವುದರೊಂದಿಗೆ ಅವರಿಗೆ ಟೀಮ್​ ಇಂಡಿಯಾದ ಬಾಗಿಲು ಕೂಡ ಇನ್ನು ಶಾಶ್ವತವಾಗಿ ಮುಚ್ಚಿದಂತಾಗಿದೆ.