ಮುಂಬೈ: ಈಚೆಗೆ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿಯಲ್ಲಿ ಬೆನ್ನು ನೋವಿಗೆ ತುತ್ತಾಗಿದ್ದ ವೇಗಿ ಜಸ್ಪ್ರೀತ್ ಬುಮ್ರಾ ಪಂದ್ಯದ ನಡುವೆಯೇ ಮೈದಾನ ತೊರೆದಿದ್ದರು. ವಿರಾಟ್ ಕೊಹ್ಲಿ ಹಂಗಾಮಿ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಬಾರ್ಡರ್-ಗವಾಸ್ಕರ್ ಟ್ರೋಫಿ ಬೆನ್ನಲ್ಲೇ ಜಸ್ಪ್ರೀತ್ ಬುಮ್ರಾ (Jasprit Bumrah) ಆರೋಗ್ಯದ ಕುರಿತು ಮಹತ್ವದ ಮಾಹಿತಿಯೊಂದು ಹೊರಬಿದ್ದಿದ್ದು, ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲೂ ಆಡುವುದು ಡೌಟ್ ಎಂದು ಹೇಳಲಾಗಿದೆ.
ಫೆಬ್ರವರಿ 19ರಿಂದ ಮಾರ್ಚ್ 09ರವರೆಗೆ ಪಾಕಿಸ್ತಾನ ಹಾಗೂ ದುಬೈ (ಭಾರತದ ಪಂದ್ಯಗಳು ಮಾತ್ರ) ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಈಗಾಗಲೇ ತಂಡಗಳು ತಯಾರಿ ಆರಂಭಿಸಿದ್ದು, 15 ಸದಸ್ಯರ ತಂಡವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ಆದರೆ, ಭಾರತದ ತಂಡದ ವಿಚಾರಕ್ಕೆ ಬರುವುದಾದರೆ ಜಸ್ಪ್ರೀತ್ ಬುಮ್ರಾ (Jasprit Bumrah) ಇಂಗ್ಲೆಂಡ್ ವಿರುದ್ಧದ ಸರಣಿ ಹಾಗೂ ಚಾಂಪಿಯನ್ಸ್ ಟ್ರೋಪಿಯನ್ನು ತಪ್ಪಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿದ್ದು, ಈ ವಿಚಾರ ಭಾರತದ ಚಿಂತೆಯನ್ನು ಹೆಚ್ಚಿಸಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಕೊನೆ ಪಂದ್ಯದ ವೇಳೆ ಜಸ್ಪ್ರೀತ್ ಬುಮ್ರಾ (Jasprit Bumrah) ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಹೀಗಾಗಿ ಕೊನೆಯ ಇನಿಂಗ್ಸ್ನಲ್ಲಿ ಅವರು ಬೌಲಿಂಗ್ ಮಾಡಿರಲಿಲ್ಲ. ಅಲ್ಲದೇ ಇದೇ ನೋವಿನ ಕಾರಣ ಅವರು ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗಿದ್ದು, ಆ ಬಳಿಕ ಚಾಂಪಿಯನ್ಸ್ ಟ್ರೋಫಿ ಭವಿಷ್ಯ ನಿರ್ಧಾರವಾಗಲಿದೆ.
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಬೆನ್ನಿನ ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿರುವ ಬುಮ್ರಾ (Jasprit Bumrah) ಸದ್ಯ ಚಿಕಿತ್ಸೆಗೆ ಒಳಗಾಗಿದ್ದು, ಸುಧಾರಿಸಿಕೊಂಡು ಫಿಟ್ನೆಸ್ ಸಾಬೀತುಪಡಿಸಲು ಮೂರು ವಾರಗಳ ಸಮಯವಕಾಶ ಬೇಕೆಂದು ಹೇಳಲಾಗಿದೆ. ಇಂಗ್ಲೆಂಡ್ ವಿರುದ್ಧದ ಸರಣಿಗೆ ಬುಮ್ರಾಗೆ ರೆಸ್ಟ್ ನೀಡಲಾಗುತ್ತದೆ ಎಂದು ಹೇಳಲಾಗಿದ್ದು, ಆ ಬಳಿಕ ವೈದ್ಯರು ತಪಾಸಣೆಗೆ ಒಳಪಡಿಸಲಿದ್ದಾರೆ. ಈ ಅವಧಿಯಲ್ಲಿ ಬುಮ್ರಾ ತಮ್ಮ ಫಿಟ್ನೆಸ್ಅನ್ನು ಸಾಬೀತುಪಡಿಸಿದರೆ ಅವರು ತಂಡಕ್ಕೆ ವಾಪಸ್ ಆಗಲಿದ್ದಾರೆ. ಇಲ್ಲವಾದಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕೆ ದೊಡ್ಡ ಹಿನ್ನಡೆಯಾಗಲಿದೆ.