ಮುಂಬೈ: ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) 3ನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಶೇ.74.24 ಅಂಕಗಳೊಂದಿಗೆ ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು ಆರಂಭಿಸಿತ್ತು ಮತ್ತು ಸರಣಿಯ ಮೂರೂ ಪಂದ್ಯ ಗೆದ್ದು ಫೈನಲ್ ಪ್ರವೇಶವನ್ನು ಬಹುತೇಕ ಖಾತ್ರಿಪಡಿಸಿಕೊಳ್ಳುವ ಭರವಸೆಯಲ್ಲಿತ್ತು. ಆದರೀಗ ಸರಣಿ ಮುಗಿದಾಗ, ಸತತ 3 ಸೋಲಿನೊಂದಿಗೆ ಭಾರತದ ಅಂಕ ಗಳಿಕೆ ಶೇ.58.33ಕ್ಕೆ ಇಳಿದಿದ್ದು, ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದಿದೆ. ಹಾಲಿ ಚಾಂಪಿಯನ್ ಆಸ್ಟ್ರೆಲಿಯಾ (ಶೇ.62.50) ಅಗ್ರಸ್ಥಾನಕ್ಕೇರಿದೆ. ಶ್ರೀಲಂಕಾ (ಶೇ.55.56) 3, ನ್ಯೂಜಿಲೆಂಡ್ (54.55) 4 ಮತ್ತು ದಕ್ಷಿಣ ಆಫ್ರಿಕಾ (ಶೇ.54.17) 5ನೇ ಸ್ಥಾನದಲ್ಲಿದೆ. ಅಂಕಪಟ್ಟಿಯ ಅಗ್ರಸ್ಥಾನದಲ್ಲಿರುವ ಎಲ್ಲ 5 ತಂಡಗಳೂ ಈಗ ಫೈನಲ್ಗೇರುವ ಅವಕಾಶ ಜೀವಂತ ಉಳಿಸಿಕೊಂಡಿವೆ.
ಡಬ್ಲ್ಯುಟಿಸಿ ಫೈನಲ್ ಹಾದಿ ಕಠಿಣ
ಕಿವೀಸ್ ವಿರುದ್ಧದ ಸರಣಿಯಲ್ಲಿನ ತ್ರಿವಳಿ ಶಾಕ್ನಿಂದ ಡಬ್ಲ್ಯುಟಿಸಿಯಲ್ಲಿ ಸತತ 3ನೇ ಬಾರಿ ಫೈನಲ್ಗೇರುವ ಭಾರತದ ಹಾದಿ ಕಠಿಣಗೊಂಡಿದೆ. ಭಾರತ ಇನ್ನು ಇತರ ಯಾವ ಫಲಿತಾಂಶಗಳನ್ನೂ ಅವಲಂಬಿಸದೆ ನೇರವಾಗಿ ಫೈನಲ್ ಪ್ರವೇಶಿಸಬೇಕಾದರೆ ಆಸ್ಟ್ರೆಲಿಯಾ ಪ್ರವಾಸದ 5 ಟೆಸ್ಟ್ಗಳಲ್ಲಿ 4ರಲ್ಲಿ ಗೆದ್ದು, 1ರಲ್ಲಿ ಡ್ರಾ ಸಾಧಿಸಿ 4&0ಯಿಂದ ಸರಣಿ ವಶಪಡಿಸಿಕೊಳ್ಳಬೇಕಾಗುತ್ತದೆ. ಆಗ ಶೇ. 65.79 ಅಂಕಗಳೊಂದಿಗೆ ಭಾರತ ಫೈನಲ್ಗೇರಬಹುದಾಗಿದೆ. ಯಾಕೆಂದರೆ ಆಗ ದ. ಆಫ್ರಿಕಾಕ್ಕೆ ಮಾತ್ರ ಭಾರತಕ್ಕಿಂತ ಹೆಚ್ಚಿನ (ಶೇ.69.44) ಅಂಕ ಗಳಿಸುವ ಅವಕಾಶವಿರುತ್ತದೆ. ಇದರ ಹೊರತಾಗಿ ಭಾರತ ತಂಡ ಆಸೀಸ್ನಲ್ಲಿ 2-3ರಿಂದ ಸರಣಿ ಸೋತರೂ ಫೈನಲ್ಗೇರುವ ಅವಕಾಶವಿರುತ್ತದೆ. ಆದರೆ ಆಗ ಇತರ ಸರಣಿಗಳ ಫಲಿತಾಂಶವೂ ಭಾರತಕ್ಕೆ ವರವಾಗಿ ಬರಬೇಕಾಗುತ್ತದೆ.
ಭಾರತ ತಂಡ ಆಸೀಸ್ನಲ್ಲಿ 2 ಪಂದ್ಯವನ್ನಷ್ಟೇ ಗೆದ್ದು, 3ರಲ್ಲಿ ಸೋತರೂ ಫೈನಲ್ಗೇರಬೇಕಾದರೆ, ನ್ಯೂಜಿಲೆಂಡ್-ಇಂಗ್ಲೆಂಡ್ ನಡುವಿನ ಸರಣಿ 1-1ರಿಂದ ಸಮಬಲಗೊಳ್ಳಬೇಕು, ದ. ಆಫ್ರಿಕಾ ತಂಡವೂ ತವರಿನ ಕೊನೇ 2 ಸರಣಿಗಳಲ್ಲಿ 1-1ರಿಂದ ಸಮಬಲಕ್ಕೆ ತೃಪ್ತಿಪಡಬೇಕು ಮತ್ತು ಆಸೀಸ್-ಲಂಕಾ ನಡುವಿನ ಸರಣಿ 0-0ಯಿಂದ ಡ್ರಾಗೊಳ್ಳಬೇಕಾಗುತ್ತದೆ. ಇದರ ಹೊರತಾಗಿ ಆಸೀಸ್ ತಂಡ ಭಾರತ ವಿರುದ್ಧದ ಟೆಸ್ಟ್ ಸರಣಿಯಲ್ಲಿ 3-2ರಿಂದ ಗೆದ್ದರೆ ಡಬ್ಲ್ಯುಟಿಸಿ ಫೈನಲ್ಗೇರಬಹುದಾಗಿದೆ. ಕಿವೀಸ್ ತಂಡ ತವರಿನಲ್ಲೂ ಇಂಗ್ಲೆಂಡ್ ವಿರುದ್ಧ 3-0ಯಿಂದ ಸರಣಿ ಗೆದ್ದರಷ್ಟೇ ಫೈನಲ್ಗೇರುವ ಆಸೆ ಜೀವಂತ ಉಳಿಸಿಕೊಳ್ಳಲಿದೆ. ದ. ಆಫ್ರಿಕಾ ತಂಡ ತವರಿನ ಕೊನೇ 4 ಟೆಸ್ಟ್ಗಳಲ್ಲಿ 3ರಲ್ಲಿ ಗೆದ್ದರೂ ಫೈನಲ್ಗೇರಲಿದೆ. ಶ್ರೀಲಂಕಾ ತನ್ನ ಕೊನೇ 4 ಟೆಸ್ಟ್ಗಳಲ್ಲೂ ಗೆದ್ದರೆ ಫೈನಲ್ಗೇರಬಹುದಾಗಿದೆ.