ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ 302 ರನ್ಗಳ ಭರ್ಜರಿ ಜಯಗಳಿಸುವ ಮೂಲಕ ತನ್ನ ಅಜೇಯ ಓಟವನ್ನು ಮುಂದುವರೆಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಶುಭಮನ್ ಗಿಲ್ (92 ರನ್, 92 ಎಸೆತ, 11 ಬೌಂಡರಿ, 2 ಸಿಕ್ಸರ್), ವಿರಾಟ್ ಕೊಹ್ಲಿ (88 ರನ್, 94 ಎಸೆತ, 11 ಬೌಂಡರಿ), ಶ್ರೇಯಸ್ ಅಯ್ಯರ್ (82 ರನ್, 56 ಎಸೆತ, 3 ಬೌಂಡರಿ, 6 ಸಿಕ್ಸರ್) ಬಿರುಸಿನ ಆಟದ ಫಲವಾಗಿ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 357 ರನ್ ಪೇರಿಸಿತ್ತು.
ಇದನ್ನೂ ಓದಿ: ಗಿಲ್, ಕೊಹ್ಲಿ, ಅಯ್ಯರ್ ಬಿರುಸಿನ ಬ್ಯಾಟಿಂಗ್ ; ಸಿಂಹಳಿಯರ ಎದುರು ಬೃಹತ್ ಮೊತ್ತ ಪೇರಿಸಿದ ಟೀಂ ಇಂಡಿಯಾ
ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ಶ್ರೀಲಂಕಾ ತಂಡವನ್ನು ಇನ್ನಿಲ್ಲದಂತೆ ಕಾಡಿದ ಭಾರತದ ಬೌಲರ್ಗಳು ಎದುರಾಳಿ ತಂಡವನ್ನು 19.4 ಓವರ್ಗಳಲ್ಲಿ 55 ರನ್ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ಪರ ಜಸ್ಪ್ರೀತ್ ಬುಮ್ರಾ (5-1-8-1), ಮೊಹಮ್ಮದ್ ಶಮಿ (5-1-18-5), ಮೊಹಮ್ಮದ್ ಸಿರಾಜ್ (7-2-16-3), ಕುಲ್ದೀಪ್ ಯಾದವ್(2-0-3-0), ರವೀಂದ್ರ ಜಡೇಜಾ (0.4-0-4-1) ಎದುರಾಳಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀಲಂಕಾದ ವಿರುದ್ಧ 302 ರನ್ಗಳ ಭರ್ಜರಿ ಜಯಗಳಿಸುವ ಮೂಲಕ ಹಾಲಿ ವಿಶ್ವಕಪ್ ಆವೃತ್ತಿಯಲ್ಲಿ ಭಾರತ ತನ್ನ ಅಜೇಯ ಓಟವನ್ನು ಮುಂದುವರೆಸಿದ್ದು, ಸೆಮೀಸ್ಗೆ ಲಗ್ಗೆ ಇಟ್ಟಿದೆ. ಹೀನಾಯ ಸೋಲಿನಿಂದಾಗಿ ತೀವ್ರ ಮುಖಭಂಗ ಅನುಭವಿಸಿರುವ ಶ್ರೀಲಂಕಾ ಸೆಮೀಸ್ ರೇಸ್ನಿಂದ ಹೊರಬಿದ್ದಿದೆ. ಭಾರತದ ಗೆಲುವಿನ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಶುಭ ಹಾರೈಸಿದ್ದಾರೆ.