ಮುಂಬೈ: ಹರ್ಮಾನ್ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಮಹಿಳೆಯರ ಟೆಸ್ಟ್ ಕ್ರಿಕೆಟ್ನಲ್ಲಿ ಆಸ್ಟ್ರೆಲಿಯಾ ಎದುರು ಮೊಟ್ಟಮೊದಲ ಗೆಲುವಿನ ಐತಿಹಾಸಿಕ ಸಾಧನೆ ಮಾಡಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆಸೀಸ್ ಎದುರು 8 ವಿಕೆಟ್ಗಳಿಂದ ಗೆಲುವು ದಾಖಲಿಸಿ ಬೀಗಿದೆ. ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧಗೂ ಗೆದ್ದಿದ್ದ ಭಾರತಕ್ಕೆ ಇದು ತವರಿನಲ್ಲಿ ಹ್ಯಾಟ್ರಿಕ್ ಟೆಸ್ಟ್ ಗೆಲುವಾಗಿದೆ. 2014ರಲ್ಲಿ ಕೊನೆಯದಾಗಿ ಮೈಸೂರಿನಲ್ಲಿ ಆಡಿದಾಗ ದ. ಆಫ್ರಿಕಾ ವಿರುದ್ಧವೂ ಗೆದ್ದಿತ್ತು.
4ನೇ ಹಾಗೂ ಅಂತಿಮ ದಿನದಾಟದಲ್ಲಿ 5 ವಿಕೆಟ್ಗೆ 233 ರನ್ಗಳಿಂದ 2ನೇ ಇನಿಂಗ್ಸ್ ಮುಂದುವರಿಸಿದ ಆಸೀಸ್, ಭೋಜನ ವಿರಾಮಕ್ಕೆ ಮೊದಲೇ 261 ರನ್ಗಳಿಗೆ ಆಲೌಟ್ ಆಯಿತು. ಸ್ನೇಹಾ ರಾಣಾ (63ಕ್ಕೆ 4), ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ (42ಕ್ಕೆ 2) ಮತ್ತು ಪೂಜಾ ವಸ್ತ್ರಾಕರ್ (40ಕ್ಕೆ 1) ಆಸ್ಟ್ರೆಲಿಯಾದ ಕೊನೇ 5 ವಿಕೆಟ್ಗಳನ್ನು ಹಂಚಿಕೊಂಡರು. ಇದರಿಂದ ಗೆಲುವಿಗೆ 75 ರನ್ ಸವಾಲು ಪಡೆದ ಭಾರತ, 18.4 ಓವರ್ಗಳಲ್ಲೇ 2 ವಿಕೆಟ್ ನಷ್ಟದಲ್ಲಿ ಇನ್ನೂ ಅರ್ಧ ದಿನದಾಟ ಬಾಕಿ ಉಳಿದಿರುವಾಗಲೇ ಗುರಿ ತಲುಪಿತು. ಎಡಗೈ ಆರಂಭಿಕ ಬ್ಯಾಟುಗಾರ್ತಿ ಸ್ಮೃತಿ ಮಂದನಾ (38*) ಭಾರತದ ಸುಲಭ ಚೇಸಿಂಗ್ಗೆ ನೆರವಾದರು.
ಇನ್ನು ಪ್ರವಾಸಿ ವಿರುದ್ಧ ಭಾರತ ತಲಾ 3 ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಲಿದೆ.
ಆಸ್ಟ್ರೆಲಿಯಾ: 219 ಮತ್ತು 105.4 ಓವರ್ಗಳಲ್ಲಿ 261 (ಸುದರ್ಲ್ಯಾಂಡ್ 27, ಗಾರ್ಡ್ನರ್ 7, ಸ್ನೇಹಾ 63ಕ್ಕೆ 4, ರಾಜೇಶ್ವರಿ 42ಕ್ಕೆ 2, ಹರ್ಮಾನ್ಪ್ರೀತ್ 23ಕ್ಕೆ 2). ಭಾರತ: 406 ಮತ್ತು 18.4 ಓವರ್ಗಳಲ್ಲಿ 2 ವಿಕೆಟ್ಗೆ 75 (ಶೆಫಾಲಿ 4, ಸ್ಮೃತಿ 38*, ರಿಚಾ 13, ಜೆಮೀಮಾ 12*, ಗಾರ್ತ್ 19ಕ್ಕೆ 1, ಗಾರ್ಡ್ನರ್ 18ಕ್ಕೆ 1); ಪಂದ್ಯಶ್ರೇಷ್ಠ: ಸ್ನೇಹಾ ರಾಣಾ.
1: ಆಸೀಸ್ ವಿರುದ್ಧದ 11ನೇ ಟೆಸ್ಟ್ನಲ್ಲಿ ಭಾರತದ ಮಹಿಳೆಯರು ಮೊದಲ ಗೆಲುವಿನ ಸಿಹಿ ಕಂಡಿದ್ದಾರೆ. ಈ ಹಿಂದೆ 1977ರಿಂದ ಆಡಿದ್ದ 10 ಟೆಸ್ಟ್ಗಳಲ್ಲಿ ಭಾರತ 4ರಲ್ಲಿ ಸೋತು, 6ರಲ್ಲಿ ಡ್ರಾ ಸಾಧಿಸಿತ್ತು.
ಮೊದಲ ಏಕದಿನ
ಯಾವಾಗ: ಡಿ. 28
ಎಲ್ಲಿ: ವಾಂಖೆಡೆ
ಆರಂಭ: ಮಧ್ಯಾಹ್ನ 1.30
ನೇರಪ್ರಸಾರ: ಜಿಯೋಸಿನಿಮಾ
*7: ಭಾರತ ಮಹಿಳಾ ತಂಡ ಇದುವರೆಗೆ ಆಡಿರುವ 40 ಟೆಸ್ಟ್ಗಳಲ್ಲಿ ಇದು 7ನೇ ಗೆಲುವಾಗಿದೆ. ಉಳಿದಂತೆ 6ರಲ್ಲಿ ಸೋತಿದ್ದು, 27ರಲ್ಲಿ ಡ್ರಾ ಸಾಧಿಸಿದೆ.
*9: ಆಸ್ಟ್ರೆಲಿಯಾ ಮಹಿಳಾ ತಂಡ 9 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಸೋತಿತು. 2014ರಲ್ಲಿ ಕೊನೆಯದಾಗಿ ಇಂಗ್ಲೆಮಡ್ ವಿರುದ್ಧ ಸೋತಿದ್ದ ಆಸೀಸ್, ನಂತರ 2ರಲ್ಲಿ ಗೆದ್ದು, 4ರಲ್ಲಿ ಡ್ರಾ ಸಾಧಿಸಿತ್ತು.
*17: ಭಾರತ ತಂಡ ಮಹಿಳಾ ಟೆಸ್ಟ್ನಲ್ಲಿ ಕಳೆದ 17 ವರ್ಷಗಳಿಂದ ಅಜೇಯವಾಗಿದೆ. 2006ರಲ್ಲಿ ಕೊನೆಯದಾಗಿ ಆಸೀಸ್ ವಿರುದ್ಧ ಅಡಿಲೇಡ್ನಲ್ಲಿ ಸೋತಿತ್ತು. ನಂತರದ 8 ಟೆಸ್ಟ್ಗಳಲ್ಲಿ 5ರಲ್ಲಿ ಗೆದ್ದು, 3ರಲ್ಲಿ ಡ್ರಾ ಸಾಧಿಸಿದೆ.