ಕ್ರೀಡೆ

ಸುಲ್ತಾನ್​ ಜೋಹರ್​ ಕಪ್​ನಲ್ಲಿ ಭಾರತ-ಪಾಕ್​ ಪಂದ್ಯ ರೋಚಕ ಡ್ರಾ; ಪಂದ್ಯಕ್ಕೆ ಮುನ್ನ ಹೈ-ಫೈವ್​ ನೀಡಿದ್ದಕ್ಕೆ ಟೀಕೆ!

ಜೋಹರ್​ (ಮಲೇಷ್ಯಾ): ಮೊದಲಾರ್ಧದ ಹಿನ್ನಡೆಯಿಂದ ಪುಟಿದೆದ್ದು ಮುನ್ನಡೆ ಸಾಧಿಸಿದರೂ ಅಂತಿಮ ಹಂತದಲ್ಲಿ ಮತ್ತೆ ಗೋಲು ಬಿಟ್ಟುಕೊಟ್ಟ ಭಾರತದ ಕಿರಿಯ ಪುರುಷರ ಹಾಕಿ ತಂಡ ಸುಲ್ತಾನ್​ ಜೋಹರ್​ ಕಪ್​ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಎದುರು 3-3 ಅಂತರದಿಂದ ಡ್ರಾಕ್ಕೆ ತೃಪ್ತಿಪಟ್ಟಿದೆ. ಇದರಿಂದ ಭಾರತ ಟೂರ್ನಿಯಲ್ಲಿ ಹ್ಯಾಟ್ರಿಕ್​ ಗೆಲುವಿನ ಅವಕಾಶದಿಂದಲೂ ವಂಚಿತವಾಯಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ 5 ಮತ್ತು 39ನೇ ನಿಮಿಷದಲ್ಲಿ ಗೋಲು ಬಾರಿಸಿತು. ಇದರಿಂದ ಭಾರತ ಮೊದಲಾರ್ಧದಲ್ಲಿ 0-2 ಹಿನ್ನಡೆ ಅನುಭವಿಸಿತು. ನಂತರ ದ್ವೀತಿಯಾರ್ಧದಲ್ಲಿ ಅರೈಜೀತ್​ ಸಿಂಗ್​ (43ನೇ ನಿಮಿಷ), ಸೌರಭ್​ ಆನಂದ್​ (47) ತಲಾ 1 ಗೋಲು ಬಾರಿಸಿ ಸಮಬಲ ತಂದರೆ, ಮನ್​ಮೀತ್​ ಸಿಂಗ್​ (53) ಮುನ್ನಡೆ ಒದಗಿಸಿದರು. ಆದರೆ, ಸುಫಿಯಾನ್​ ಖಾನ್​ 55ನೇ ನಿಮಿಷದಲ್ಲಿ ಪಂದ್ಯದಲ್ಲಿ ತನ್ನ 2ನೇ ಗೋಲು ಸಿಡಿಸಿ ಭಾರತಕ್ಕೆ ಗೆಲುವು ತಪ್ಪಿಸಿದರು.

ಹೈ-ಫೈವ್ ನೀಡಿದ ಹಾಕಿ ಆಟಗಾರರು!

ಭಾರತದ ಕ್ರಿಕೆಟಿಗರು ಏಷ್ಯಾಕಪ್​ ಟಿ20 ಟೂರ್ನಿ ಮತ್ತು ಮಹಿಳೆಯರ ಏಕದಿನ ವಿಶ್ವಕಪ್​ನಲ್ಲಿ ಪಾಕಿಸ್ತಾನದ ಆಟಗಾರರಿಗೆ ಹಸ್ತಲಾವ ನೀಡದೆ, ಪಹಲ್ಗಾಮ್​ ಉಗ್ರರ ದಾಳಿಯನ್ನು ಇನ್ನೂ ಮರೆತಿಲ್ಲ ಎಂಬ ಸಂದೇಶ ರವಾನಿಸಿದ್ದರು. ಆದರೆ, ಸುಲ್ತಾನ್​ ಜೋಹರ್​ ಕಪ್​ನಲ್ಲಿ ಭಾರತದ 21 ವಯೋಮಿತಿ ತಂಡದ ಆಟಗಾರರು ಪಂದ್ಯಕ್ಕೆ ಮುನ್ನ ಪಾಕ್​ ಆಟಗಾರರಿಗೆ ಹೈ-ಫೈವ್  ನೀಡಿ ಟೀಕೆಗೆ ಗುರಿಯಾಗಿದ್ದಾರೆ. ಉಭಯ ದೇಶಗಳ ರಾಷ್ಟ್ರಗೀತೆಯ ಬಳಿಕ ಹಾಕಿ ಆಟದ ಸಂಪ್ರದಾಯದಂತೆ ಹೈ-ಫೈವ್ ನೀಡಿದರು.