ಕ್ರೀಡೆ

ನಮ್ಮವರು ಭಾರತವನ್ನು ಸೋಲಿಸುವುದು ಫಿಕ್ಸ್​​; Champions Trophy ಹೊಸ್ತಿಲಲ್ಲೇ ಪಾಕ್​ ಮಾಜಿ ಆಟಗಾರನ ಹೇಳಿಕೆ ವೈರಲ್

ನವದೆಹಲಿ: ಫೆಬ್ರವರಿ 19ರಿಂದ ಮಾರ್ಚ್​ 09ರವರೆಗೆ ಪಾಕಿಸ್ತಾನ ಹಾಗೂ ದುಬೈ (ಭಾರತದ ಪಂದ್ಯಗಳು ಮಾತ್ರ) ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ (Champions Trophy) ದಿನಗಣನೆ ಆರಂಭವಾಗಿದ್ದು, ಅದಕ್ಕೆ ಪೂರ್ವಭಾವಿಯಂತೆ ತಂಡಗಳು ಸರಣಿಗಳನ್ನು ಆಡುತ್ತಿವೆ. ಕಳೆದ ಒಂದು ವರ್ಷಕ್ಕೂ ಹೆಚ್ಚಿನ ಸಮಯದಿಂದ ಈ ಟೂರ್ನಿ ಮಾಜಿ ಆಟಗಾರರ ಹೇಳಿಕೆಯಿಂದಲೇ ಹೆಚ್ಚು ಸದ್ದು ಮಾಡುತ್ತಿದೆ ಎಂದರೆ ತಪ್ಪಾಗಲಾರದು. ಇದೀಗ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ರಾವಲ್ಪಿಂಡಿ ಎಕ್ಸ್​ಪ್ರೆಸ್​ ಎಂದೇ ಖ್ಯಾತಿ ಪಡೆದಿರುವ ಶೋಯೆಬ್ ಅಖ್ತರ್​ ​ಚಾಂಪಿಯನ್ಸ್ ಟ್ರೋಫಿಯಲ್ಲಿ ಯಾವ ತಂಡ ಸೆಮಿಫಿನಾಲೆ ಪ್ರವೇಶಿಸುತ್ತದೆ ಎಂದು ಭವಿಷ್ಯ ನುಡಿಯುವ ಮೂಲಕ ಗಮನ ಸೆಳೆದಿದ್ದಾರೆ.

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಶೋಯೆಬ್ ಅಖ್ತರ್​, ಅಫ್ಘಾನಿಸ್ತಾನದ ತಂಡವು ಪ್ರಬುದ್ಧತೆಯನ್ನು ಪ್ರದರ್ಶಿಸಿದರೆ, ಅವರು ಸೆಮಿಫೈನಲ್‌ಗೆ ಪ್ರವೇಶಿಸಬಹುದು. ನನ್ನ ಪ್ರಕಾರ ಭಾರತ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ತಂಡವು ಸೆಮಿಫಿನಾಲೆ ಪ್ರವೇಶಿಸುತ್ತವೆ. ಅದು ಬಿಟ್ಟರೆ ಫೆಬ್ರವರಿ 23ರಂದು ಭಾರತದ ವಿರುದ್ಧದ ಪಂದ್ಯದಲ್ಲಿ ನಮ್ಮವರು (ಪಾಕಿಸ್ತಾನ) ಜಯಗಳಿಸುತ್ತಾರೆ. ವಾಸ್ತವವಾಗಿ, ಪಾಕಿಸ್ತಾನ ಮತ್ತು ಭಾರತ ಎರಡೂ ಪಂದ್ಯಾವಳಿಯ ಫೈನಲ್‌ನಲ್ಲಿ ಮುಖಾಮುಖಿಯಾಗಬೇಕು ಎಂದು ನಾನು ಆಶಿಸುತ್ತೇನೆ ಎಂದು ಪಾಕ್​ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಹೇಳಿದ್ದಾರೆ. 

ಹಾಲಿ ಚಾಂಪಿಯನ್ಸ್ ಪಾಕಿಸ್ತಾನದ ಆತಿಥ್ಯದಲ್ಲಿ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ (Champions Trophy) ನಡೆಯುತ್ತಿದ್ದು, ಭದ್ರತೆಯ ಕಾರಣದಿಂದಾಗಿ ಭಾರತದ ಪಂದ್ಯಗಳನ್ನು ಹೈಬ್ರಿಡ್​ ಮಾದರಿಯಲ್ಲಿ ನಡೆಸಲಾಗುತ್ತಿದೆ. ಭಾರತದ ಪಂದ್ಯಗಳು ದುಬೈನಲ್ಲಿ ನಡೆಯಲಿದ್ದು, ಫೆಬ್ರವರಿ 19ರಿಂದ ಮಾರ್ಚ್​ 09ರವರೆಗೆ ಟೂರ್ನಿ ನಡೆಯಲಿದೆ.

ಚಾಂಪಿಯನ್ಸ್​ ಟ್ರೋಫಿಗೆ ಭಾರತ ತಂಡ 

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೀ), ಕೆಎಲ್ ರಾಹುಲ್ (ವಿಕೀ), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ , ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.