ಕ್ರೀಡೆ

ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಅಶ್ವಿನ್! ಕೊಹ್ಲಿ ತಬ್ಬಿಕೊಂಡು ಭಾವುಕರಾದ ಸ್ಪಿನ್​ ಮಾಂತ್ರಿಕ | R Ashwin

R Ashwin : ಟೀಮ್​ ಇಂಡಿಯಾದ ಸ್ಪಿನ್​ ಮಾಂತ್ರಿಕ ರವಿಚಂದ್ರನ್​ ಅಶ್ವಿನ್​ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. ಇಂದು (ಡಿ.18) ಡ್ರಾನಲ್ಲಿ ಅಂತ್ಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್‌ ಪಂದ್ಯದ ಕೊನೆಯಲ್ಲಿ ಅಶ್ವಿನ್​ ಅವರು ತಮ್ಮ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಬ್ರಿಸ್ಬೇನ್​ನ ಗಬ್ಬಾ ಸ್ಟೇಡಿಯಂನಲ್ಲಿ ನಡೆದ 3ನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು. ಇದೇ ವೇಳೆ ನಿವೃತ್ತಿ ಘೋಷಣೆ ಮಾಡಿದ ಅಶ್ವಿನ್​, ಪಂದ್ಯದ ನಡುವೆ ಸ್ಟೇಡಿಯಂನಲ್ಲಿ ವಿರಾಟ್​ ಕೊಹ್ಲಿ ಅವರನ್ನು ತಬ್ಬಿಕೊಂಡು ಭಾವುಕರಾದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪಂದ್ಯದ ಬಳಿಕ ಮಾತನಾಡಿದ ಅಶ್ವಿನ್​, ನಾನು ನಿಮ್ಮ ಸಮಯವನ್ನು ಹೆಚ್ಚು ತೆಗೆದುಕೊಳ್ಳುವುದಿಲ್ಲ. ಭಾರತೀಯ ಕ್ರಿಕೆಟಿಗನಾಗಿ ಇಂದು ನನಗೆ ಕೊನೆಯ ದಿನವಾಗಿದೆ ಎಂದರು.

ಅಂದಹಾಗೆ ಅಶ್ವಿನ್​ ಅವರು 106 ಟೆಸ್ಟ್‌ ಪಂದ್ಯಗಳಲ್ಲಿ 24ರ ಸರಾಸರಿಯಲ್ಲಿ 537 ವಿಕೆಟ್‌ಗಳನ್ನು ಪಡೆದು ಟೆಸ್ಟ್​ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. 132 ಟೆಸ್ಟ್‌ಗಳಲ್ಲಿ 619 ವಿಕೆಟ್‌ಗಳನ್ನು ಪಡೆದಿರುವ ಟೀಮ್​ ಇಂಡಿಯಾದ ದಿಗ್ಗಜ ಆಟಗಾರ ಅನಿಲ್ ಕುಂಬ್ಳೆ ಬಳಿಕ ಭಾರತದ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿ ವೃತ್ತಿ ಬದುಕನ್ನು ಅಶ್ವಿನ್​ ಕೊನೆಗೊಳಿಸಿದರು.

ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್​-ಗವಾಸ್ಕರ್​ ಟ್ರೋಫಿ ಸರಣಿಯ ಮೊದಲ ಮೂರು ಟೆಸ್ಟ್‌ ಪಂದ್ಯದಲ್ಲಿ ಕೇವಲ ಒಂದು ಟೆಸ್ಟ್​ ಪಂದ್ಯದಲ್ಲಿ ಮಾತ್ರ ಅಶ್ವಿನ್​ ಆಡಿದರು. ಅಡಿಲೇಡ್‌ನಲ್ಲಿ ನಡೆದ ಅಹರ್ನಿಶಿ ಪಂದ್ಯದಲ್ಲಿ 53ಕ್ಕೆ 1 ವಿಕೆಟ್ ಪಡೆದರು. ಈ ಹಿಂದಿನ ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ತವರು ನೆಲದಲ್ಲಿ ನಡೆದ ಟೆಸ್ಟ್​ ಸರಣಿಯಲ್ಲಿ ಟೀಮ್​ ಇಂಡಿಯಾ 3-0 ಸೋಲು ಅನುಭವಿಸಿತು. ಈ ಸರಣಿಯಲ್ಲಿ ಅಶ್ವಿನ್ 41.22 ಸರಾಸರಿಯಲ್ಲಿ ಒಂಬತ್ತು ವಿಕೆಟ್​ಳನ್ನು ಪಡೆದಿದ್ದರು.

ಅಶ್ವಿನ್​ ಅವರು ಬೌಲಿಂಗ್​ನಲ್ಲಿ ಮಾತ್ರವಲ್ಲದೆ, ಆರು ಶತಕಗಳು ಮತ್ತು 14 ಅರ್ಧಶತಕಗಳೊಂದಿಗೆ 3503 ಟೆಸ್ಟ್ ರನ್‌ಗಳನ್ನು ಗಳಿಸಿ, ಬ್ಯಾಟಿಂಗ್​ನಲ್ಲೂ ಮಿಂಚಿದ್ದಾರೆ. 3000ಕ್ಕೂ ಹೆಚ್ಚು ರನ್ ಮತ್ತು 300 ವಿಕೆಟ್‌ಗಳೊಂದಿಗೆ 11 ಆಲ್‌ರೌಂಡರ್‌ಗಳಲ್ಲಿ ಒಬ್ಬರಾಗಿದ್ದಾರೆ. (ಏಜೆನ್ಸೀಸ್​)