ಕ್ರೀಡೆ

ವಿಶ್ವಕಪ್​ಗೆ ಮುನ್ನ ಏಷ್ಯಾಕಪ್​ ಮೇಲೆ ಭಾರತದ ಕಣ್ಣು; ಇಂದು ಶ್ರೀಲಂಕಾ ವಿರುದ್ಧ ಫೈನಲ್​ ಫೈಟ್​

ಕೊಲಂಬೊ: ದ್ವಿಪಯ ಸರಣಿಗಳ ಹೊರತಾಗಿ ಬಹುರಾಷ್ಟ್ರಗಳ ಕ್ರಿಕೆಟ್​ ಟೂರ್ನಿಗಳಲ್ಲಿ ಕಳೆದ 5 ವರ್ಷಗಳಿಂದ ಪ್ರಶಸ್ತಿ ಗೆಲುವಿನ ಬರ ಎದುರಿಸುತ್ತಿರುವ ಭಾರತ ತಂಡಕ್ಕೆ 16ನೇ ಆವೃತ್ತಿಯ ಏಷ್ಯಾಕಪ್​ ಏಕದಿನ ಟೂರ್ನಿಯಲ್ಲಿ ಇದನ್ನು ನೀಗಿಸಿಕೊಳ್ಳುವ ಸುವರ್ಣಾವಕಾಶ ಎದುರಾಗಿದೆ. ಜಂಟಿ ಆತಿಥೇಯ ಶ್ರೀಲಂಕಾ ವಿರುದ್ಧ ಭಾನುವಾರ ನಡೆಯಲಿರುವ ಫೈನಲ್​ ಪಂದ್ಯದಲ್ಲಿ ರೋಹಿತ್​ ಶರ್ಮ ಪಡೆ ಫೇವರಿಟ್​ ತಂಡವಾಗಿ ಕಣಕ್ಕಿಳಿಯಲಿದೆ. ತವರಿನ ಏಕದಿನ ವಿಶ್ವಕಪ್​ ಟೂರ್ನಿಗೆ ಮುನ್ನ ರಾಹುಲ್​ ದ್ರಾವಿಡ್​-ರೋಹಿತ್​ ಶರ್ಮ ಅವರ ಕೋಚ್​-ಕ್ಯಾಪ್ಟನ್​ ಕಾಂಬಿನೇಷನ್​ಗೆ ಏಷ್ಯಾಕಪ್​ ಕಿರೀಟ ದೊಡ್ಡ ಟಾನಿಕ್​ ಆಗಲಿದೆ.

ಸೂಪರ್​-4 ಹಂತದಲ್ಲಿ ಪಾಕ್​, ಲಂಕಾ ಎದುರು ಭರ್ಜರಿ ಗೆಲುವು ದಾಖಲಿಸಿ ಪ್ರಶಸ್ತಿ ಸುತ್ತಿಗೇರುವುದನ್ನು ಖಚಿತಪಡಿಸಿಕೊಂಡಿದ್ದ ಭಾರತ, ಬಾಂಗ್ಲಾ ವಿರುದ್ಧದ ಔಪಚಾರಿಕ ಪಂದ್ಯದಲ್ಲಿ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿ ಕೈಸುಟ್ಟುಕೊಂಡಿತ್ತು. ಇದರಿಂದ ಗೆಲುವಿನ ಲಯ ತಪ್ಪಿದ್ದರೂ, ಉಪನಾಯಕ ಹಾರ್ದಿಕ್​ ಪಾಂಡ್ಯ, ವಿರಾಟ್​ ಕೊಹ್ಲಿ, ಜಸ್​ಪ್ರೀತ್​ ಬುಮ್ರಾ, ಕುಲದೀಪ್​ ಯಾದವ್​ರಂಥ ಪ್ರಮುಖರ ಗೈರಲ್ಲಿ ಈ ಸೋಲು ಎದುರಾಗಿರುವುದರಿಂದ ಹೆಚ್ಚಿನ ಹಿನ್ನಡೆ ತಂದಿಲ್ಲ. ದಸುನ್​ ಶನಕ ಪಡೆಯ ವಿರುದ್ಧ ಭಾರತ ತಂಡ ಪ್ರಶಸ್ತಿ ಸುತ್ತಿನಲ್ಲಿ ವಿಶ್ವಾಸದಿಂದಲೇ ಕಣಕ್ಕಿಳಿಯಲಿದೆ. ಸೂಪರ್​-4 ಮುಖಾಮುಖಿಯಲ್ಲಿ ಕಂಡ ಗೆಲುವು ಕೂಡ ಭಾರತಕ್ಕೆ ವಿಶ್ವಾಸ ತುಂಬಿದೆ. ಆದರೆ ಎಡಗೈ ಸ್ಪಿನ್ನರ್​ ದುನಿತ್​ ವೆಲ್ಲಲಾಗೆ ಅವರನ್ನು ಈ ಬಾರಿ ಎಚ್ಚರಿಕೆಯಿಂದ ಎದುರಿಸಬೇಕಾಗಿದೆ. ಪಾಕಿಸ್ತಾನ ವಿರುದ್ಧ ರೋಚಕ ಗೆಲುವು ದಾಖಲಿಸಿ ಫೈನಲ್​ಗೇರಿರುವ ಲಂಕಾ ಕೂಡ ಈ ಬಾರಿ ವಿಶ್ವಾಸದಿಂದಲೇ ಕಣಕ್ಕಿಳಿಯಲಿದೆ. ಜತೆಗೆ ಲಂಕಾಗೆ ತವರಿನ ಲಾಭವೂ ಇದೆ.

2018ರಿಂದ ಪ್ರಶಸ್ತಿ ಬರ

ಭಾರತ ತಂಡ ಇತ್ತೀಚೆಗೆ ದ್ವಿಪಯ ಸರಣಿಗಳಲ್ಲಿ ಪ್ರಾಬಲ್ಯ ಸಾಧಿಸುತ್ತಿದ್ದರೂ, ಕಳೆದ 5 ವರ್ಷಗಳಿಂದ ಐಸಿಸಿ&ಏಷ್ಯಾಕಪ್​ನಂಥ 2ಕ್ಕಿಂತ ಹೆಚ್ಚು ತಂಡಗಳು ಆಡುವ ಟೂರ್ನಿಗಳಲ್ಲಿ ಪ್ರಶಸ್ತಿ ಗೆಲುವು ಕಂಡಿಲ್ಲ. 2018ರ ಏಷ್ಯಾಕಪ್​ನಲ್ಲೇ ಭಾರತ ಕೊನೆಯದಾಗಿ ಪ್ರಶಸ್ತಿ ಗೆದ್ದಿದೆ. ನಂತರ 2019ರ ವಿಶ್ವಕಪ್​, 2021, 2022ರ ಟಿ20 ವಿಶ್ವಕಪ್​, 2021, 2023ರ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​, 2022ರ ಟಿ20 ಏಷ್ಯಾಕಪ್​ನಲ್ಲಿ ನಿರಾಸೆ ಕಂಡಿದೆ. ಇದೀಗ ಏಷ್ಯಾಕಪ್​ ಗೆಲುವಿನೊಂದಿಗೆ ಈ ಕೊರತೆ ನೀಗಿಸಲು ಅವಕಾಶ ಲಭಿಸಿದೆ.

ಟೀಮ್​ ನ್ಯೂಸ್​:

ಭಾರತ: ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಐವರು ಆಟಗಾರರಾದ ವಿರಾಟ್​ ಕೊಹ್ಲಿ, ಹಾರ್ದಿಕ್​ ಪಾಂಡ್ಯ, ಜಸ್​ಪ್ರೀತ್​ ಬುಮ್ರಾ, ಮೊಹಮದ್​ ಸಿರಾಜ್​, ಕುಲದೀಪ್​ ಯಾದವ್​ ಮರಳಿ ಕಣಕ್ಕಿಳಿಯಲಿದ್ದಾರೆ. ಇದೇ ವೇಳೆ ತಿಲಕ್​ ವರ್ಮ, ಸೂರ್ಯಕುಮಾರ್​, ಪ್ರಸಿದ್ಧ ಕೃಷ್ಣ, ಮೊಹಮದ್​ ಶಮಿ ಹೊರಬೀಳುವುದು ನಿಶ್ಚಿತ. ಆದರೆ ಅಕ್ಷರ್​ ಪಟೇಲ್​ ಸ್ಥಾನದಲ್ಲಿ ಶಾರ್ದೂಲ್​ ಠಾಕೂರ್​ ಸ್ಥಾನ ಉಳಿಸಿಕೊಳ್ಳುವರೇ ಅಥವಾ ವಾಷಿಂಗ್ಟನ್​ ಸುಂದರ್​ ಆಡುವರೇ ಎಂಬುದು ಸ್ಪಷ್ಟವಿಲ್ಲ.

ಶ್ರೀಲಂಕಾ: ಗಾಯದಿಂದಾಗಿ ಫೈನಲ್​ ಪಂದ್ಯಕ್ಕೆ ಅಲಭ್ಯರಾಗಿರುವ ಮಹೀಶ್​ ತೀಕ್ಷಣ ಸ್ಥಾನವನ್ನು 11ರ ಬಳಗದಲ್ಲಿ ಲೆಗ್​ ಸ್ಪಿನ್ನರ್​ ದುಶನ್​ ಹೇಮಂತ ತುಂಬುವ ನಿರೀಕ್ಷೆ ಇದೆ. ತೀಕ್ಷಣ ಬದಲಿಗೆ ಆಲ್ರೌಂಡರ್​ ಸಹನ್​ ಅರಚ್ಚಿಗೆ ತಂಡ ಸೇರಿದ್ದರೂ, ಆಡುವ ಸಾಧ್ಯತೆ ಕಡಿಮೆ ಇದೆ. ದಿಮುತ್​ ಕರುಣರತ್ನೆ ಬದಲಿಗೆ ಪಾಕ್​ ವಿರುದ್ಧದ ಪಂದ್ಯದಲ್ಲಿ ಅವಕಾಶ ಪಡೆದ ಕುಸಲ್​ ಪೆರೇರಾ ಸ್ಥಾನ ಉಳಿಸಿಕೊಳ್ಳುವ ನಿರೀಕ್ಷೆ ಇದೆ.

ಆರಂಭ: ಮಧ್ಯಾಹ್ನ 3.00

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಡಿಡಿ ಸ್ಪೋರ್ಟ್ಸ್​, ಡಿಸ್ನಿ+ಹಾಟ್​ಸ್ಟಾರ್​ (ಒಟಿಟಿ).

7: ಭಾರತ-ಶ್ರೀಲಂಕಾ ತಂಡಗಳು ಏಷ್ಯಾಕಪ್​ ಫೈನಲ್​ನಲ್ಲಿ ಈ ಹಿಂದೆ 7 ಬಾರಿ ಪರಸ್ಪರ ಮುಖಾಮುಖಿ ಆಗಿದ್ದು, ಭಾರತ 4 ಮತ್ತು ಲಂಕಾ 3ರಲ್ಲಿ ಗೆಲುವು ಕಂಡಿದೆ.

ಮಳೆ ಕಾಡಿದರೆ ಮೀಸಲು ದಿನವಿದೆ

ಭಾರತ-ಪಾಕ್​ ನಡುವಿನ ಸೂಪರ್​-4 ಪಂದ್ಯದಂತೆ ಫೈನಲ್​ ಪಂದ್ಯಕ್ಕೂ ಮೀಸಲು ದಿನವಿದೆ. ಭಾನುವಾರ ಮಳೆ ಅಡಚಣೆ ತಂದರೆ ಸೋಮವಾರ ಪಂದ್ಯ ಮುಂದುವರಿಯಲಿದೆ. ಟೂರ್ನಿಯಲ್ಲಿ ಲಂಕಾ ಚರಣದ ಇದುವರೆಗಿನ ಪಂದ್ಯಗಳಿಗೆ ಕಾಡಿದಂತೆ, ಫೈನಲ್​ಗೂ ಮಳೆ ಭೀತಿ ಇದೆ. ಸಂಜೆ ವೇಳೆ ಮಳೆ ಬರುವ ಸಾಧ್ಯತೆ ಶೇ. 50ರಷ್ಟಿದ್ದರೆ, ರಾತ್ರಿ ವೇಳೆಗೆ ಈ ಸಾಧ್ಯತೆ ಶೇ.68ಕ್ಕೆ ಏರಿಕೆಯಾಗಲಿದೆ. ಹೀಗಾಗಿ ಫೈನಲ್​ನಲ್ಲೂ ಓವರ್​ ಕಡಿತದ ಸಾಧ್ಯತೆಗಳಿವೆ.

ಮುಖಾಮುಖಿ: 166

ಭಾರತ: 97

ಶ್ರೀಲಂಕಾ: 57

ಟೈ: 1, ರದ್ದು: 11

ಏಷ್ಯಾಕಪ್​ನಲ್ಲಿ: 20

ಭಾರತ: 10

ಶ್ರೀಲಂಕಾ: 10

8: ಭಾರತ ತಂಡ ಏಕದಿನ ಮಾದರಿಯಲ್ಲಿ 7ನೇ (1984, 1988, 1990-91, 1995, 2010, 2018) ಮತ್ತು ಒಟ್ಟಾರೆ 8ನೇ ಬಾರಿ (2016ರಲ್ಲಿ ಟಿ20 ಮಾದರಿ) ಏಷ್ಯಾಕಪ್​ ಗೆಲ್ಲುವ ಅವಕಾಶ ಹೊಂದಿದೆ.

7: ಶ್ರೀಲಂಕಾ ತಂಡ ಏಕದಿನ ಮಾದರಿಯಲ್ಲಿ 6ನೇ (1986, 1997, 2004, 2008, 2014) ಮತ್ತು ಒಟ್ಟಾರೆ 7ನೇ ಬಾರಿ (2022ರಲ್ಲಿ ಟಿ20 ಮಾದರಿ) ಏಷ್ಯಾಕಪ್​ ಗೆಲ್ಲುವ ಅವಕಾಶ ಹೊಂದಿದೆ.

1: ಇದುವರೆಗಿನ ಎಲ್ಲ ಏಷ್ಯಾಕಪ್​ ಫೈನಲ್​ಗಳಲ್ಲಿ ಭಾರತ ಅಥವಾ ಪಾಕಿಸ್ತಾನ ಮತ್ತು ಶ್ರೀಲಂಕಾ ಅಥವಾ ಬಾಂಗ್ಲಾದೇಶ ತಂಡಗಳು ಕಾಣಿಸಿಕೊಂಡಿವೆ. ಆದರೆ ಭಾರತ-ಪಾಕ್​, ಲಂಕಾ-ಬಾಂಗ್ಲಾ ಒಮ್ಮೆಯೂ ಫೈನಲ್​ನಲ್ಲಿ ಮುಖಾಮುಖಿ ಆಗಿಲ್ಲ!