ವಿಶಾಖಪಟ್ಟಣ: ಕೊನೆಗೂ ಲಯಕ್ಕೆ ಮರಳಿದ ಯುವ ಬ್ಯಾಟರ್ ಶುಭಮಾನ್ ಗಿಲ್ (104 ರನ್, 147 ಎಸೆತ, 11 ಬೌಂಡರಿ, 2 ಸಿಕ್ಸರ್) ಶತಕದಾಟದ ಬಲದಿಂದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ಸವಾಲಿನ ಗುರಿ ನೀಡುವಲ್ಲಿ ಯಶಸ್ವಿಯಾಗಿದೆ. ಪಂದ್ಯದಲ್ಲಿ ಇನ್ನೂ 2 ದಿನದಾಟ ಬಾಕಿ ಉಳಿದಿದ್ದರೂ, ಸೋಮವಾರವೇ ಫಲಿತಾಂಶ ಹೊರಬೀಳುವ ನಿರೀೆ ಹೆಚ್ಚಿದೆ. ಆಂಗ್ಲರ ಬಾಜ್ಬಾಲ್ ಕಾರ್ಯತಂತ್ರದಿಂದಾಗಿ 4ನೇ ದಿನದಾಟ ಕುತೂಹಲ ಕೆರಳಿಸಿದ್ದು, ರೋಹಿತ್ ಶರ್ಮ ಬಳಗಕ್ಕೆ ಸರಣಿ ಸಮಬಲ ಸಾಧಿಸಲು ಇನ್ನೂ 9 ವಿಕೆಟ್ ಅಗತ್ಯವಾಗಿದೆ.
ವೈಎಸ್ಆರ್ ರೆಡ್ಡಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾನುವಾರ ವಿಕೆಟ್ ನಷ್ಟವಿಲ್ಲದೆ 28 ರನ್ಗಳಿಂದ 3ನೇ ದಿನದಾಟ ಆರಂಭಿಸಿದ ಭಾರತ ತಂಡ, ಚಹಾ ವಿರಾಮದ ಬಳಿಕ 78.3 ಓವರ್ಗಳಲ್ಲಿ 255 ರನ್ಗಳಿಗೆ ಸರ್ವಪತನ ಕಂಡಿತು. ಗಿಲ್ ಶತಕದ ನಡುವೆ ಭಾರತಕ್ಕೆ ಇತರ ಪ್ರಮುಖ ಬ್ಯಾಟರ್ಗಳು ಮತ್ತೊಮ್ಮೆ ಕೈಕೊಟ್ಟರು. ಇದರ ನಡುವೆಯೂ ಭಾರತ 399 ರನ್ಗಳ ಕಠಿಣ ಸವಾಲನ್ನೇ ನಿಗದಿಪಡಿಸಿದ್ದು, ಬಿರುಸಿನ ಆರಂಭ ಪಡೆದಿರುವ ಇಂಗ್ಲೆಂಡ್ ದಿನದಂತ್ಯಕ್ಕೆ ತನ್ನ 2ನೇ ಇನಿಂಗ್ಸ್ನಲ್ಲಿ 1 ವಿಕೆಟ್ಗೆ 67 ರನ್ ಗಳಿಸಿದ್ದು, ಗೆಲುವಿಗೆ ಇನ್ನೂ 332 ರನ್ ಅಗತ್ಯವಿದೆ.
ಆಂಗ್ಲರ ಚೇಸಿಂಗ್ಗೆ ಆಕ್ರಮಣಕಾರಿ ಆರಂಭ ಒದಗಿಸಿದ ಬೆನ್ ಡಕೆಟ್ (28) ಮೊದಲ ವಿಕೆಟ್ಗೆ ಜಾಕ್ ಕ್ರೌಲಿ (29*) ಜತೆ 66 ಎಸೆತಗಳಲ್ಲಿ 50 ಸೇರಿಸಿ ಅಶ್ವಿನ್ಗೆ ವಿಕೆಟ್ ಒಪ್ಪಿಸಿದರು. ಕ್ರೌಲಿ ಮತ್ತು ನೈಟ್ ವಾಚ್ಮನ್ ರೆಹನ್ ಅಹ್ಮದ್ (9*) ಕ್ರೀಸ್ನಲ್ಲಿದ್ದಾರೆ. ಪ್ರತಿ ಓವರ್ಗೆ 4.78ರ ಸರಾಸರಿಯಲ್ಲಿ ಚೇಸಿಂಗ್ ಆರಂಭಿಸಿರುವ ಆಂಗ್ಲರು, ನಾಲ್ಕನೇ ದಿನವೂ ಬಾಜ್ಬಾಲ್ ಸ್ಟೈಲ್ನಲ್ಲೇ ರನ್ ಬೆನ್ನಟ್ಟುವ ನಿರೀಕ್ಷೆ ಇದ್ದು, ಭಾರತ ಸಂಟಿತ ಬೌಲಿಂಗ್ ನಿರ್ವಹಣೆಯ ಮೂಲಕ ಗೆಲುವು ಒಲಿಸಿಕೊಳ್ಳಬೇಕಾಗಿದೆ.
ಶುಭಮಾನ್ ಗಿಲ್ ಶತಕದಾಟ
ಭಾರತ ತಂಡ ಬೆಳಗ್ಗೆ ಆಘಾತಕಾರಿ ಆರಂಭ ಕಂಡಿತು. ದಿನದ 2ನೇ ಓವರ್ನಲ್ಲೇ ನಾಯಕ ರೋಹಿತ್ ಶರ್ಮ (13) ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ ಎಸೆತದಲ್ಲಿ ಬೌಲ್ಡಾದರು. ಆಂಡರ್ಸನ್ರ ಮರುಓವರ್ನಲ್ಲಿ ಮೊದಲ ಇನಿಂಗ್ಸ್ ದ್ವಿಶತಕವೀರ ಯಶಸ್ವಿ ಜೈಸ್ವಾಲ್ (17) ಕೂಡ ಔಟಾದರು. ಆಗ ಶುಭಮಾನ್ ಗಿಲ್ ಭಾರತಕ್ಕೆ ಆಸರೆಯಾಗಿ ನಿಂತರು. ಶ್ರೇಯಸ್ ಅಯ್ಯರ್ (29) ಜತೆಗೂಡಿ 3ನೇ ವಿಕೆಟ್ಗೆ 81 ರನ್ ಸೇರಿಸಿ ಚೇತರಿಕೆ ಒದಗಿಸಿದ ಗಿಲ್, ಬಿರುಸಿನ ಆಟದೊಂದಿಗೆ 60 ಎಸೆತಗಳಲ್ಲೇ ಅರ್ಧಶತಕ ಪೂರೈಸಿದರು. ಭೋಜನ ವಿರಾಮಕ್ಕೆ ಮುನ್ನ ಶ್ರೇಯಸ್ ಬೆನ್ನಲ್ಲೇ ರಜತ್ ಪಾಟೀದಾರ್ (9) ಕೂಡ ಔಟಾದರು. ಈ ವೇಳೆ ಭಾರತ ಮತ್ತೆ ಸಂಕಷ್ಟ ಎದುರಿಸಿದಾಗ ಅಕ್ಷರ್ ಪಟೇಲ್ (45) ಜತೆಗೂಡಿ ಗಿಲ್ ಮೊತ್ತ ಏರಿಸಿದರು. 5ನೇ ವಿಕೆಟ್ಗೆ ಇವರಿಬ್ಬರು 89 ರನ್ ಸೇರಿಸಿದರು. ಇದೇ ವೇಳೆ 132 ಎಸೆತಗಳಲ್ಲಿ ಶತಕ ಪುರೈಸುವ ಮೂಲಕ ಗಿಲ್ ಟೆಸ್ಟ್ ತಂಡದಲ್ಲಿ ಅಲುಗಾಡುತ್ತಿದ್ದ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡರು. ಈ ಜೋಡಿ ಬೇರ್ಪಟ್ಟ ಬಳಿಕ ಬಾಲಂಗೋಚಿಗಳಲ್ಲಿ ಆರ್. ಅಶ್ವಿನ್ (29) ಮಾತ್ರ ಭಾರತಕ್ಕೆ ಉಪಯುಕ್ತ ಕೊಡುಗೆ ನೀಡಿದರು. ಭಾರತದ ಕೊನೇ 5 ವಿಕೆಟ್ಗಳು 44 ರನ್ ಅಂತರದಲ್ಲಿ ಉರುಳಿದವು.
ಗಿಲ್ಗೆ ಡಿಆರ್ಎಸ್ ಲಾಭ
ಶುಭಮಾನ್ ಗಿಲ್ 4 ರನ್ ಗಳಿಸಿದ್ದಾಗ ಸ್ಪಿನ್ನರ್ ಹಾರ್ಟ್ಲಿ ಎಸೆತದಲ್ಲಿ ಅಂಪೈರ್ ಎಲ್ಬಿಡಬ್ಲ್ಯು ತೀರ್ಪು ನೀಡಿದರು. ಜತೆಗಾರ ಶ್ರೇಯಸ್ ಅಯ್ಯರ್ ಜತೆ ಚರ್ಚಿಸಿ ಗಿಲ್ ಡಿಆರ್ಎಸ್ ಮೊರೆ ಹೋದರು. ಟಿವಿ ಮರುಪ್ರಸಾರದಲ್ಲಿ ಚೆಂಡು ಬ್ಯಾಟ್ಗೆ ಸ್ಪರ್ಶಿಸಿದ್ದು ಕಾಣಿಸಿತು. ಇದರಿಂದ ತೃತೀಯ ಅಂಪೈರ್ ನಾಟೌಟ್ ತೀರ್ಪಿತ್ತರು. ಇದು ಗಿಲ್ ಮತ್ತು ಭಾರತಕ್ಕೆ 100 ರನ್ ಲಾಭ ತಂದುಕೊಟ್ಟಿತು. ಗಿಲ್ 4 ರನ್ ಗಳಿಸಿದ್ದಾಗ ಇಂಗ್ಲೆಂಡ್ ಮತ್ತೊಮ್ಮೆ ಎಲ್ಬಿಗಾಗಿ ಡಿಆರ್ಎಸ್ ಮೊರೆ ಹೋದರೂ ಪ್ರಯೋಜನವಾಗಲಿಲ್ಲ. ಗಿಲ್ ಶತಕ ಸಿಡಿಸಿದ ಬಳಿಕ ಇಂಗ್ಲೆಂಡ್ ಡಿಆರ್ಎಸ್ ಮೂಲಕವೇ ಅವರ ವಿಕೆಟ್ ಕಬಳಿಸಿತು.
*ಈ ಪಿಚ್ನಲ್ಲಿ ಬ್ಯಾಟಿಂಗ್ ಸುಲಭವಲ್ಲ. ಈಗಲೂ ಭಾರತದ ಗೆಲುವಿಗೆ ಶೇ. 70 ಮತ್ತು ಇಂಗ್ಲೆಂಡ್ ಗೆಲುವಿಗೆ ಶೇ. 30 ಅವಕಾಶವಿದೆ. 4ನೇ ದಿನ ಬೆಳಗ್ಗಿನ ಅವಧಿಯ ಆಟವೇ ನಿರ್ಣಾಯಕ.
| ಶುಭಮಾನ್ ಗಿಲ್
*3: ಶುಭಮಾನ್ ಗಿಲ್ ಟೆಸ್ಟ್ ಕ್ರಿಕೆಟ್ನಲ್ಲಿ ಸಿಡಿಸಿದ 3ನೇ ಶತಕ ಇದಾಗಿದೆ. 2023ರ ಮಾರ್ಚ್ನಲ್ಲಿ ಆಸೀಸ್ ಎದುರು ಕೊನೇ ಶತಕ ಸಿಡಿಸಿದ್ದ ಅವರು ನಂತರದ 12 ಇನಿಂಗ್ಸ್ಗಳಲ್ಲಿ ಒಂದೂ ಅರ್ಧಶತಕ ಬಾರಿಸಿರಲಿಲ್ಲ.
ಇಂಗ್ಲೆಂಡ್ ಗೆದ್ದರೆ ದಾಖಲೆ
ಇಂಗ್ಲೆಂಡ್ ತಂಡ ವಿಶಾಖಪಟ್ಟಣದಲ್ಲಿ ಗೆಲ್ಲಬೇಕಾದರೆ ಭಾರತ ಮತ್ತು ಉಪಖಂಡದಲ್ಲಿ ಸರ್ವಾಧಿಕ ಮೊತ್ತದ ಚೇಸಿಂಗ್ ದಾಖಲೆಯನ್ನೇ ಬರೆಯಬೇಕಾಗಿದೆ. 2021ರಲ್ಲಿ ಬಾಂಗ್ಲಾ ವಿರುದ್ಧ ಚಟ್ಟೋಗ್ರಾಮ್ನಲ್ಲಿ ವಿಂಡೀಸ್ 395 ರನ್ ಬೆನ್ನಟ್ಟಿ ಗೆದ್ದಿರುವುದು ಏಷ್ಯಾದ ಚೇಸಿಂಗ್ ದಾಖಲೆಯಾಗಿದೆ. ಇಂಗ್ಲೆಂಡ್ ವಿರುದ್ಧವೇ ಭಾರತ ತಂಡ 2008ರಲ್ಲಿ ಚೆನ್ನೆ$ ಟೆಸ್ಟ್ನಲ್ಲಿ 387 ರನ್ ಬೆನ್ನಟ್ಟಿ ಗೆದ್ದಿರುವುದು ಭಾರತೀಯ ನೆಲದ ಗರಿಷ್ಠ ಚೇಸಿಂಗ್ ದಾಖಲೆಯಾಗಿದೆ. ಭಾರತದಲ್ಲಿ ಇದುವರೆಗೆ 5 ಬಾರಿ ಮಾತ್ರ ತಂಡವೊಂದು 250ಕ್ಕಿಂತ ಅಧಿಕ ಮೊತ್ತವನ್ನು ಚೇಸಿಂಗ್ ಮಾಡಿ ಗೆದ್ದ ದಾಖಲೆ ಇದೆ. ಈ ಪೈಕಿ 4 ಬಾರಿ ಆತಿಥೇಯ ತಂಡವೇ ಗೆದ್ದಿದ್ದರೆ, ವಿಂಡೀಸ್ ಈ ಸಾಧನೆ ಮಾಡಿರುವ ಏಕೈಕ ವಿದೇಶಿ ತಂಡವಾಗಿದೆ.
ಆಂಗ್ಲರಿಗೆ ರೂಟ್ ಗಾಯದ ಹಿನ್ನಡೆ
3ನೇ ದಿನದಾಟದಲ್ಲಿ ಬೆಳಗ್ಗೆ ಇಂಗ್ಲೆಂಡ್ ಮಾಜಿ ನಾಯಕ ಹಾಗೂ ಅನುಭವಿ ಆಟಗಾರ ಜೋ ರೂಟ್ ಸ್ಲಿಪ್ನಲ್ಲಿ ಶುಭಮಾನ್ ಗಿಲ್ ಕ್ಯಾಚ್ ಹಿಡಿಯುವ ಪ್ರಯತ್ನದಲ್ಲಿ ಬಲಗೈ ಕಿರುಬೆರಳಿನ ಗಾಯಕ್ಕೊಳಗಾಗಿ ಮೈದಾನದಿಂದ ಹೊರನಡೆದರು. ಸರಣಿಯಲ್ಲಿ ರೂಟ್ ಬ್ಯಾಟಿಂಗ್ನಲ್ಲಿ ಹೆಚ್ಚಿನ ಕೊಡುಗೆ ನೀಡಿರದಿದ್ದರೂ, ಅರೆಕಾಲಿಕ ಸ್ಪಿನ್ನರ್ ಆಗಿ ಆಂಗ್ಲರಿಗೆ ಹೆಚ್ಚು ಉಪಯುಕ್ತರೆನಿಸಿದ್ದಾರೆ. ಆದರೆ 3ನೇ ದಿನದಾಟದಲ್ಲಿ ಅವರು ಗಾಯಗೊಂಡ ಬಳಿಕ ಬೌಲಿಂಗ್ ಮಾಡಿಸಲು ಆಗಲಿಲ್ಲ. ಮುನ್ನೆಚ್ಚರಿಕೆಯ ಕ್ರಮವಾಗಿ ರೂಟ್ ಮೈದಾನಕ್ಕೆ ಮರಳಲಿಲ್ಲ ಎಂದಿರುವ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್, 2ನೇ ಇನಿಂಗ್ಸ್ನಲ್ಲಿ ರೂಟ್ ಬ್ಯಾಟಿಂಗ್ಗೆ ಇಳಿಯುವ ಸುಳಿವನ್ನೂ ನೀಡಿದ್ದಾರೆ.
ಇಂಗ್ಲೆಂಡ್ 600 ರನ್ ಚೇಸಿಂಗ್ಗೂ ಸಿದ್ಧ!
ಭಾರತ 600 ರನ್ ಸವಾಲು ನೀಡಿದರೂ, ಅದರ ಚೇಸಿಂಗ್ಗೆ ಸಿದ್ಧವಾಗಿರಬೇಕೆಂದು ಕೋಚ್ ಬ್ರೆಂಡನ್ ಮೆಕ್ಕಲಂ ಶನಿವಾರ ರಾತ್ರಿಯೇ ತಂಡಕ್ಕೆ ಸೂಚನೆ ನೀಡಿದ್ದರು ಎಂದು ಇಂಗ್ಲೆಂಡ್ ತಂಡದ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ 3ನೇ ದಿನದಾಟದ ಬಳಿಕ ತಿಳಿಸಿದರು. ಹೀಗಾಗಿ ಇಂಗ್ಲೆಂಡ್ ತಂಡ 4ನೇ ದಿನ ಬಾಜ್ಬಾಲ್ ಆಕ್ರಮಣದ ಮೂಲಕ 399 ರನ್ ಚೇಸಿಂಗ್ಗೆ ಪ್ರಯತ್ನಿಸುವ ಸುಳಿವು ಬಿಟ್ಟುಕೊಟ್ಟರು. ಭಾರತೀಯ ಬೌಲರ್ಗಳು ಬಾಜ್ಬಾಲ್ಗೆ ಯಾವ ರೀತಿ ಬ್ರೇಕ್ ಹಾಕಲಿದ್ದಾರೆ ಎಂಬುದು ನಿರ್ಣಾಯಕವೆನಿಸಿದೆ.