ಚೆನ್ನೈ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ (ಡಬ್ಲ್ಯುಟಿಸಿ) ಸತತ 3ನೇ ಬಾರಿಗೆ ಫೈನಲ್ಗೇರುವ ಹಂಬಲದಲ್ಲಿರುವ ಭಾರತ ತಂಡಕ್ಕೆ ತನ್ನ ಮುಂದಿನ 10 ಪಂದ್ಯಗಳ ಲಿತಾಂಶಗಳು ಈ ನಿಟ್ಟಿನಲ್ಲಿ ಮಹತ್ವದ್ದಾಗಿವೆ. 2023-25ರ ಸಾಲಿನ ಹಾಲಿ ಆವೃತ್ತಿಯಲ್ಲಿ ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 6ರಲ್ಲಿ ಗೆದ್ದು, 2ರಲ್ಲಿ ಸೋತು, ಒಂದು ಡ್ರಾದೊಂದಿಗೆ ಶೇ. 68.52 ಅಂಕ ಕಲೆಹಾಕಿರುವ ಭಾರತ ತಂಡ ಸದ್ಯ ಅಗ್ರಸ್ಥಾನದಲ್ಲಿದೆ. ಅಂಕಪಟ್ಟಿಯ ಅಗ್ರ 2 ತಂಡಗಳಲ್ಲಿ ಒಂದಾಗಿ ಫೈನಲ್ನಲ್ಲಿ ಆಡುವ ಅವಕಾಶಕ್ಕಾಗಿ ಭಾರತ ತಂಡ ತನ್ನ ಗೆಲುವಿನ ಲಯ ಕಾಯ್ದುಕೊಳ್ಳುವುದು ಅಗತ್ಯವಾಗಿದೆ.
ಡಬ್ಲ್ಯುಟಿಸಿಯಲ್ಲಿ ಫೈನಲ್ಗೇರಲು ಇಷ್ಟೇ ಅಂಕಗಳನ್ನು ಗಳಿಸಬೇಕೆಂದು ನಿಖರವಾಗಿ ಹೇಳುವುದು ಕಷ್ಟ. ಆದರೆ ಶೇ. 60 ಅಂಕ ಗಳಿಸಿದರೆ ಫೈನಲ್ಗೇರುವುದು ಬಹುತೇಕ ನಿಶ್ಚಿತ ಎನ್ನಬಹುದು. ಈ ನಿಟ್ಟಿನಲ್ಲಿ ಭಾರತ ತನ್ನ ಮುಂದಿನ 10 ಟೆಸ್ಟ್ಗಳಲ್ಲಿ ಕನಿಷ್ಠ 5ರಲ್ಲಿ ಗೆಲ್ಲಬೇಕು ಮತ್ತು ಒಂದರಲ್ಲಾದರೂ ಡ್ರಾ ಸಾಧಿಸಬೇಕಾಗಿದೆ. 6ರಲ್ಲಿ ಗೆದ್ದರೆ ಭಾರತ ಶೇ.64.03 ಅಂಕ ಗಳಿಸಲಿದ್ದು, ಫೈನಲ್ ಹಾದಿ ಸುಗಮವಾಗಲಿದೆ.
ಬಾಂಗ್ಲಾ ಎದುರು 2-0ಯಿಂದ ಗೆದ್ದರೆ ಭಾರತದ ಅಂಕ ಶೇ. 74.2ಕ್ಕೆ ಏರಲಿದೆ. ಬಳಿಕ ನ್ಯೂಜಿಲೆಂಡ್ ವಿರುದ್ಧವೂ 3-0ಯಿಂದ ಗೆದ್ದರೆ ಶೇ. 79.76 ಅಂಕ ಕಲೆಹಾಕಲಿದೆ. ತವರಿನ ಮುಂಬರುವ ಎಲ್ಲ 5 ಟೆಸ್ಟ್ ಗೆದ್ದರೆ ಭಾರತದ ಫೈನಲ್ ಹಾದಿ ಸುಗಮವಾಗಲಿದೆ. ಬಳಿಕ ಆಸ್ಟ್ರೆಲಿಯಾ ಪ್ರವಾಸದ 5 ಟೆಸ್ಟ್ಗಳಲ್ಲಿ ಭಾರತ 1ರಲ್ಲಿ ಡ್ರಾ ಸಾಧಿಸಿದರೂ, ಫೈನಲ್ ಸ್ಥಾನ ಸುರತವೆನಿಸಲಿದೆ. ಆದರೆ ತವರಿನಲ್ಲಿ ಕನಿಷ್ಠ 3 ಟೆಸ್ಟ್ ಗೆಲ್ಲದಿದ್ದರೆ ಭಾರತ ತಂಡ ಆಸ್ಟ್ರೆಲಿಯಾ ಪ್ರವಾಸದ ವೇಳೆ ತೀವ್ರ ಒತ್ತಡ ಎದುರಿಸಬೇಕಾಗುತ್ತದೆ.
ಭಾರತದ ಮುಂದಿನ 10 ಟೆಸ್ಟ್ ಪಂದ್ಯಗಳು
ಪಂದ್ಯ. ದಿನಾಂಕ: ಎದುರಾಳಿ, ಸ್ಥಳ
1. ಸೆ.19-23: ಬಾಂಗ್ಲಾದೇಶ, ಚೆನ್ನೈ
2. ಸೆ.27-ಅ.1 : ಬಾಂಗ್ಲಾದೇಶ, ಕಾನ್ಪುರ
3. ಅ.16-20: ನ್ಯೂಜಿಲೆಂಡ್, ಬೆಂಗಳೂರು
4. ಅ.24-28: ನ್ಯೂಜಿಲೆಂಡ್, ಪುಣೆ
5. ನ.1-5: ನ್ಯೂಜಿಲೆಂಡ್, ಮುಂಬೈ
6. ನ.22-26: ಆಸ್ಟ್ರೆಲಿಯಾ, ಪರ್ತ್
7. ಡಿ.6-10: ಆಸ್ಟ್ರೆಲಿಯಾ, ಅಡಿಲೇಡ್
8. ಡಿ.14-18: ಆಸ್ಟ್ರೆಲಿಯಾ, ಬ್ರಿಸ್ಬೇನ್
9. ಡಿ.26-30: ಆಸ್ಟ್ರೆಲಿಯಾ, ಮೆಲ್ಬೋರ್ನ್
10. ಜ.3-7: ಆಸ್ಟ್ರೆಲಿಯಾ, ಸಿಡ್ನಿ