ಬೆಂಗಳೂರು: ಭಾರತ ಈಗ ಕ್ರಿಕೆಟ್ನಲ್ಲಿ ಶ್ರೀಮಂತವಾಗಿ ಬೆಳೆಯಲು 1983ರ ವಿಶ್ವಕಪ್ ಗೆಲುವು ಯಾವ ರೀತಿ ಕಾರಣವೋ, ಅಷ್ಟೇ 1987ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದ ವಿಶ್ವಕಪ್ ಟೂರ್ನಿಯೂ ಕಾರಣ ಎಂಬುದರಲ್ಲಿ ಅನುಮಾನವಿಲ್ಲ. ಯಾಕೆಂದರೆ, 1983ರ ವಿಶ್ವಕಪ್ ಗೆಲುವು ಭಾರತಕ್ಕೆ ಕ್ರಿಕೆಟ್ ಮೈದಾನದಲ್ಲಿ ಅದರ ಸಾಮರ್ಥ್ಯವನ್ನು ವಿಶ್ವಕ್ಕೆ ಪರಿಚಯಿಸಿಕೊಟ್ಟರೆ, 1987ರ ವಿಶ್ವಕಪ್ ಆತಿಥ್ಯ ವಿಶ್ವಕ್ಕೆ ಭಾರತದ ಕ್ರಿಕೆಟ್ ಮಾರುಕಟ್ಟೆಯ ಶಕ್ತಿಯನ್ನು ತೋರಿಸಿಕೊಟ್ಟಿತು.
ಏಕದಿನ ವಿಶ್ವಕಪ್ನ ಮೊದಲ ಮೂರೂ ಆವೃತ್ತಿಗೆ ಕ್ರಿಕೆಟ್ ಜನಕರೇ ಆತಿಥ್ಯ ವಹಿಸಿದ್ದರೆ, 1987ರಲ್ಲಿ ಮೊಟ್ಟಮೊದಲ ಬಾರಿಗೆ ಇಂಗ್ಲೆಂಡ್ನಿಂದ ಹೊರಗೆ ವಿಶ್ವಕಪ್ ಆಯೋಜನೆಗೊಂಡಿತು. 1983ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಬಿಸಿಸಿಐ ಅಧ್ಯಕ್ಷರಾಗಿದ್ದ ಎನ್ಕೆಪಿ ಸಾಳ್ವೆ ಅವರು 1987ರಲ್ಲಿ ಭಾರತಕ್ಕೆ ವಿಶ್ವಕಪ್ ಆತಿಥ್ಯ ಒಲಿದುಬರಲು ಪ್ರಮುಖ ಕಾರಣ. 1983ರ ವಿಶ್ವಕಪ್ ಪಂದ್ಯದ 2 ಹೆಚ್ಚುವರಿ ಟಿಕೆಟ್ಗಳನ್ನು ಕೇಳಿದಾಗ ಆಂಗ್ಲರು ನಿರಾಕರಿಸಿದರು. ಇದಕ್ಕೆ ಪ್ರತಿಯಾಗಿ ಸಾಳ್ವೆ ವಿಶ್ವಕಪ್ ಆತಿಥ್ಯವನ್ನೇ ಆಂಗ್ಲರಿಂದ ಕಿತ್ತುಕೊಳ್ಳಲು ಮುಂದಾದರು. ಇದಕ್ಕೆ ಪಾಕಿಸ್ತಾನವೂ ಅವರಿಗೆ ಬೆಂಬಲವಾಗಿ ನಿಂತಿತು. ಬರೀ ಭಾರತವೊಂದೇ ಯಾಕೆ, ನಾವೂ ವಿಶ್ವಕಪ್ಗೆ ಆತಿಥ್ಯ ವಹಿಸುತ್ತೇವೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯ ನುರ್ ಖಾನ್ ಮುಂದೆ ಬಂದರು. ಆಗಿನ ಭಾರತ-ಪಾಕ್ ಪ್ರಧಾನಿಗಳಾದ ರಾಜೀವ್ ಗಾಂಧಿ ಮತ್ತು ಜಿಯಾ ಉಲ್ ಹಕ್ ಕೂಡ ಈ ವಿಶ್ವಕಪ್ ಕನಸಿಗೆ ಬೆಂಬಲವಾಗಿ ನಿಂತರು. ಜತೆಗೆ ಆಗ ತಾಪತ್ರಯವೆನಿಸಿದ್ದ ವಿದೇಶಿ ವಿನಿಯಮವನ್ನೂ ಸರಳಗೊಳಿಸಿದರು.
ಎನ್ಕೆಪಿ ಸಾಳ್ವೆ ಕೇವಲ ಬಿಸಿಸಿಐ ಅಧ್ಯಕ್ಷರಷ್ಟೇ ಆಗಿರದೆ, ಆಗಿನ ಪ್ರಭಾವಿ ಕಾಂಗ್ರೆಸ್ ನಾಯಕರೂ ಆಗಿದ್ದುದು ವಿಶ್ವಕಪ್ ಸರಾಗವಾಗಿ ನಡೆಯಲು ನೆರವಾಯಿತು. ಇನ್ನು ಚತುರ ಕ್ರಿಕೆಟ್ ಆಡಳಿತಗಾರರಾದ ಐಎಸ್ ಬಿಂದ್ರಾ ಮತ್ತು ಜಗಮೋಹನ್ ದಾಲ್ಮಿಯಾ ಕೂಡ ಭಾರತ ಯಶಸ್ವಿ ವಿಶ್ವಕಪ್ ಆಯೋಜನೆಯ ರೂವಾರಿಗಳಾಗಿದ್ದರು. ರಿಲಯನ್ಸ್ ಪ್ರಮುಖ ಪ್ರಾಯೋಜಕನಾಗಿ ಸಾಥ್ ನೀಡಿದ್ದರಿಂದ ಭಾರತ-ಪಾಕ್ ಜಂಟಿಯಾಗಿ ಆಗ 32 ಕೋಟಿ ರೂ. ವೆಚ್ಚದಲ್ಲಿ ವಿಶ್ವಕಪ್ ಸಂಘಟಿಸಿತ್ತು. ಇಂಗ್ಲೆಂಡ್ನಲ್ಲಿ ಹಗಲು ಹೆಚ್ಚಿನ ಸಮಯ ಇರುವುದರಿಂದ ಮೊದಲ 3 ವಿಶ್ವಕಪ್ನಲ್ಲಿ ತಲಾ 60 ಓವರ್ಗಳ ಪಂದ್ಯ ನಡೆದಿದ್ದರೆ, 1987ರಲ್ಲಿ ಅದನ್ನು ಮೊದಲ ಬಾರಿ 50 ಓವರ್ಗಳಿಗೆ ಇಳಿಸಲಾಯಿತು.
ಭಾರತದ 14 ಮತ್ತು ಪಾಕಿಸ್ತಾನದ 7 ಸೇರಿದಂತೆ ಒಟ್ಟು 21 ಕ್ರೀಡಾಂಗಣಗಳಲ್ಲಿ ಟೂರ್ನಿಯ 27 ಪಂದ್ಯಗಳು ನಡೆದವು. 8 ತಂಡಗಳ ಟೂರ್ನಿಯಲ್ಲಿ ಆತಿಥೇಯ ಭಾರತ, ಪಾಕಿಸ್ತಾನ ಸೆಮೀಸ್ನಲ್ಲೇ ಹೊರಬಿದ್ದರೆ, ಫೈನಲ್ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಆಸ್ಟ್ರೆಲಿಯಾ ಮೊಟ್ಟಮೊದಲ ಬಾರಿಗೆ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.