ಬಾರ್ಬೋಡಾಸ್: ಇಲ್ಲಿನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ನ 43ನೇ ಪಂದ್ಯದಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ ಮುಖಾಮುಖಿಯಾಗಲಿದ್ದು, ಉಭಯ ತಂಡಗಳು ಎದುರಾಳಿಯನ್ನು ಮಣಿಸಲು ಸಿದ್ಧತೆ ನಡೆಸುತ್ತಿವೆ. ಇನ್ನೂ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್, ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಗರಂ ಆಗಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
ತಮ್ಮ ತಾಳ್ಮೆ ಹಾಗೂ ಶಾಂತ ವರ್ತನೆಯಿಂದಲೇ ಹೆಸರುವಾಸಿಯಾಗಿರುವ ರಾಹುಲ್ ದ್ರಾವಿದ್ ಪತ್ರಕರ್ತರೊಬ್ಬರು 1997ರಲ್ಲಿ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿನ ಸೋಲಿನ ಕುರಿತು ಪ್ರಶ್ನಿಸಿದ್ದಾರೆ. ಈ ಪ್ರಶ್ನೆ ಕೇಳುತ್ತಿದ್ದಂತೆ ಕುಪಿತಗೊಂಡ ರಾಹುಲ್ ದ್ರಾವಿಡ್ ಖಡಕ್ಕಾಗಿಯೇ ಉತ್ತರ ನೀಡಿದ್ದಾರೆ.
ನೀವು ಆಟಗಾರರಾಗಿ ಈ ಕ್ರೀಡಾಂಗಣದಲ್ಲಿ ಆಡಿರುವ ಅನುಭವ ನಿಮಗಿದೆ. 1997ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಸರಣಿ ನಿಮಗೆ ನೆನಪಿದೆಯೇ ಎಂದು ಕೇಳುವ ಮೂಲಕ ಕಿಚಾಯಿಸಲು ಯತ್ನಿಸಿದರು. ಇದಕ್ಕೆ ಖಡಕ್ಕಾಗಿಯೇ ಉತ್ತರಿಸಿದ ರಾಹುಲ್, ತುಂಬಾ ಧನ್ಯವಾದಗಳು ಗೆಳೆಯ ನನಗೆ ಸೋಲಿನ ಜೊತೆಗೆ ಯೋಗ್ಯವಾದ ನೆನಪುಗಳು ನನ್ನ ನೆನಪಿನಲ್ಲಿ ಉಳಿದಿದೆ ಎಂದು ಹೇಳಿದರು.
ಇದನ್ನೂ ಓದಿ: ನಮ್ಮನ್ನು ದೂಷಿಸುವ ಬದಲು ನೆಟ್ಟಗೆ ಕ್ರಿಕೆಟ್ ಆಡಿ; ಪಾಕ್ ಆಟಗಾರರ ಆರೋಪಕ್ಕೆ ತಕ್ಕ ತಿರುಗೇಟು ನೀಡಿದ ಭಾರತೀಯರು
ಬಳಿಕ ನಾನು ಕೆಲ ವಿಷಯಗಳಿಂದ ಬೇಗನೆ ಹೊರಬರುತ್ತೇನೆ. ಅದು ನನ್ನ ವೈಶಿಷ್ಟ್ಯಗಳಲ್ಲಿ ಒಂದು. ಆ ಬಳಿಕ ಕೆಲ ವಿಚಾರಗಳನ್ನು ಹಿಂತಿರುಗಿ ನೋಡುವುದಿಲ್ಲ. ನಾನು ಈಗ ಏನು ಮಾಡುತ್ತಿರುವೆ, ಏನು ಮಾಡಲು ಪ್ರಯತ್ನಿಸಬಹುದು ಎಂಬುದನ್ನಷ್ಟೇ ಯೋಚಿಸುತ್ತೇನೆ. 1997 ರಲ್ಲಿ ಅಥವಾ ಆ ಬಳಿಕ ಏನಾಯಿತು ಎಂಬುದರ ಬಗ್ಗೆ ಚಿಂತಿಸುವುದಿಲ್ಲ ಎಂದು ಖಾರವಾಗಿ ಉತ್ತರಿಸಿದ್ದಾರೆ.
ನಾವು ಅಫ್ಘಾನಿಸ್ತಾನ ತಂಡವನ್ನು ಹಗುರವಾಗಿ ಪರಿಗಣಿಸುವುದಿಲ್ಲ. ಟಿ20 ಸ್ವರೂಪದಲ್ಲಿ ಅಫ್ಘಾನಿಸ್ತಾನ ಅಪಾಯಕಾರಿ ತಂಡವಾಗಿದೆ. ಅವರು ಈ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.ಅವರಿಗೆ ಹೆಚ್ಚಿನ ಅಂತಾರಾಷ್ಟ್ರೀಯ ಅನುಭವ ಇಲ್ಲದಿರಬಹುದು, ಆದರೆ ಅವರ ಕೆಲವು ಆಟಗಾರರು ನಮ್ಮ ಆಟಗಾರರನ್ನು ಹೊರತುಪಡಿಸಿ ಐಪಿಎಲ್ ಸೇರಿದಂತೆ ಹೆಚ್ಚು ಟಿ20 ಲೀಗ್‌ಗಳಲ್ಲಿ ಆಡಿದ್ದಾರೆ. ಅವರನ್ನು ಲಘುವಾಗಿ ಪರಿಗಣಿಸುವಂತಿಲ್ಲಾ ಎಂದು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.