ಕ್ರೀಡೆ

ಶಾರ್ದೂಲ್ ಠಾಕೂರ್‌ಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಿದ ಫ್ಯಾನ್ಸ್..!

ನವದೆಹಲಿ: ಭಾರತ ತಂಡ ಓವಲ್ ಮೈದಾನದಲ್ಲಿ ಸೋಮವಾರ ಮುಕ್ತಾಯಗೊಂಡ 4ನೇ ಟೆಸ್ಟ್ ಪಂದ್ಯದಲ್ಲಿ 157 ರನ್‌ಗಳಿಂದ ಆತಿಥೇಯ ಇಂಗ್ಲೆಂಡ್ ಎದುರು ಭರ್ಜರಿ ಜಯ ದಾಖಲಿಸಿತು. ಇದರಿಂದ 5 ಪಂದ್ಯಗಳ ಸರಣಿಯಲ್ಲಿ ಭಾರತ 2-1 ರಿಂದ ಮುನ್ನಡೆ ಸಾಧಿಸಿತು. ಎರಡನೇ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಆದರೆ, ಅಭಿಮಾನಿಗಳು ಪಾತ್ರ ರೋಹಿತ್ ಶರ್ಮ ಬದಲಿಗೆ 8ನೇ ಕ್ರಮಾಂಕದಲ್ಲಿ ಎರಡೂ ಇನಿಂಗ್ಸ್‌ಗಳಲ್ಲೂ ಅರ್ಧಶತಕ, 3 ವಿಕೆಟ್ ಕಬಳಿಸಿದ್ದ ಶಾರ್ದೂಲ್ ಠಾಕೂರ್‌ಗೆ ಪಂದ್ಯ ಶ್ರೇಷ್ಠ ನೀಡಬೇಕಿತ್ತು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹೊರಹಾಕಿದ್ದಾರೆ.

ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಲ್ವರು ಆಟಗಾರರು ಹೆಸರಿಸಿ, ಖಾಸಗಿ ವೆಬ್‌ಸೈಟ್‌ವೊಂದು ನಡೆಸಿದ ಮತದಾನದಲ್ಲಿ ಶಾರ್ದೂಲ್ ಠಾಕೂರ್‌ಗೆ ಶೇಕಡ 76 ಮಂದಿ ಒಲವು ತೋರಿದ್ದಾರೆ. ರೋಹಿತ್ ಶರ್ಮ ಶೇಕಡ 15 ಮತ ಪಡೆಯುವ ಮೂಲಕ ಎರಡನೇ ಸ್ಥಾನ ಪಡೆದರೆ, ವೇಗಿ ಜಸ್‌ಪ್ರೀತ್ ಬುಮ್ರಾ ಹಾಗೂ ಉಮೇಶ್ ಯಾದವ್ ಕ್ರಮವಾಗಿ ಶೇಕಡ 6.5 ಹಾಗೂ ಶೇಕಡ 1.1 ಮತದಾನ ಪಡೆದಿದ್ದಾರೆ. ಶಾರ್ದೂಲ್ ಠಾಕೂರ್ ಕೂಡ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಆರ್ಹರು ಎಂದು ಸ್ವತಃ ರೋಹಿತ್ ಶರ್ಮ ಕೂಡ ಅದೇ ಅಭಿಪ್ರಾಯ ಹೊರಹಾಕಿದ್ದರು.

ಮೊದಲ ಇನಿಂಗ್ಸ್‌ನಲ್ಲಿ 127 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡ ಸಂಕಷ್ಟದಲ್ಲಿದ್ದ ವೇಳೆ ಕ್ರೀಸ್‌ಗಿಳಿದ ಶಾರ್ದೂಲ್ ಠಾಕೂರ್, ಕೇವಲ 36 ಎಸೆತಗಳಲ್ಲಿ 57 ರನ್ ಸಿಡಿಸಿದರೆ, ಎರಡನೇ ಇನಿಂಗ್ಸ್‌ನಲ್ಲಿ 60 ರನ್ ಬಾರಿಸಿದ್ದರು. ಭಾರತ ನೀಡಿದ ಬೃಹತ್ 368 ರನ್ ಗೆಲುವಿನ ಗುರಿ ಪಡೆದಿದ್ದ ಇಂಗ್ಲೆಂಡ್, 92.2 ಓವರ್‌ಗಳಲ್ಲಿ 210 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತ ಮೊದಲ ಇನಿಂಗ್ಸ್ 191 ರನ್‌ಗಳಿಸಿದರೆ, ಪ್ರತಿಯಾಗಿ ಇಂಗ್ಲೆಂಡ್ 290 ರನ್ ಪೇರಿಸಿ 99 ರನ್ ಮುನ್ನಡೆ ಸಾಧಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ದಿಟ್ಟ ನಿರ್ವಹಣೆ ತೋರಿದ್ದ ಭಾರತ 466 ರನ್ ಕಲೆಹಾಕಿತ್ತು. ಓವಲ್ ಮೈದಾನದಲ್ಲಿ ಭಾರತ 50 ವರ್ಷಗಳ ಬಳಿಕ ಜಯ ದಾಖಲಿಸಿತು.