ಕ್ರೀಡೆ

ಭಾರತ ತಂಡ ಗೆದ್ದರೂ ಜಂಟಿ ಚಾಂಪಿಯನ್​! ಸ್ಯಾಫ್​ ಮಹಿಳಾ ಫುಟ್​ಬಾಲ್ ಟೂರ್ನಿಯ ಫೈನಲ್​ನಲ್ಲಿ ವಿಚಿತ್ರ ತೀರ್ಪು!

ಢಾಕಾ: ಸ್ಯಾಫ್​ ಮಹಿಳೆಯರ 19 ವಯೋಮಿತಿ ಫುಟ್​ಬಾಲ್​ ಚಾಂಪಿಯನ್​ಷಿಪ್​ನಲ್ಲಿ ಗುರುವಾರ ನಡೆದ ಫೈನಲ್​ನಲ್ಲಿ ಭಾರತ ತಂಡವನ್ನು ವಿಜಯಿ ಎಂದು ಘೋಷಿಸಿದರೂ, ಅಂತಿಮವಾಗಿ ಆತಿಥೇಯ ಬಾಂಗ್ಲಾದೇಶದೊಂದಿಗೆ ಜಂಟಿ ಚಾಂಪಿಯನ್​ ಎಂದು ಟ್ರೋಫಿ ಹಂಚಲಾಯಿತು!

ಪಂದ್ಯ 1-1ರಿಂದ ಡ್ರಾಗೊಂಡ ಬಳಿಕ ಪೆನಾಲ್ಟಿ ಶೂಟೌಟ್​ನಲ್ಲಿ ಗೋಲುಕೀಪರ್​ ಸಹಿತ ಎಲ್ಲರೂ ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಿದ್ದರಿಂದ 11-11 ಸಮಬಲಗೊಂಡಿತು. ಆಗ ರೆಫ್ರಿ ಉಭಯ ತಂಡಗಳ ನಾಯಕರನ್ನು ಕರೆದು ಟಾಸ್​ ಹಾಕಿದಾಗ ಭಾರತ ಗೆಲುವು ಸಾಧಿಸಿತು.

ಆದರೆ ಈ ನಿರ್ಧಾರವನ್ನು ಒಪ್ಪಿಕೊಳ್ಳದ ಬಾಂಗ್ಲಾ ಆಟಗಾರ್ತಿಯರು ಮೈದಾನ ತೊರೆಯದೆ 1 ಗಂಟೆ ಕಾಲ ಪ್ರತಿಭಟನೆ ನಡೆಸಿದರು. ಅಂತಿಮವಾಗಿ ಭಾರತ ತಂಡದ ಮನವೊಪ್ಪಿಸಿ ಜಂಟಿ ಚಾಂಪಿಯನ್​ ಎಂದು ಘೋಷಿಸಲಾಯಿತು.