ಇಸ್ಲಾಮಾಬಾದ್: ಪ್ರಮುಖ ಸಿಂಗಲ್ಸ್ ಆಟಗಾರರ ಗೈರಿನ ನಡುವೆ ಪಾಕಿಸ್ತಾನದ ನೆಲದಲ್ಲಿ 60 ವರ್ಷಗಳ ಬಳಿಕ ಡೇವಿಸ್ ಕಪ್ ಪಂದ್ಯ ಆಡಲು ಸಜ್ಜಾಗಿರುವ ಭಾರತ ತಂಡ, ವಿಶ್ವ ಗುಂಪು-1ರ ಪ್ಲೇಆಫ್ ಸೆಣಸಾಟದಲ್ಲಿ ಐತಿಹಾಸಿಕ ಗೆಲುವಿನ ಹಂಬಲದಲ್ಲಿದೆ. ಸಾಂಪ್ರದಾಯಿಕ ಎದುರಾಳಿ ವಿರುದ್ಧದ ಇದುವರೆಗಿನ 7 ಡೇವಿಸ್ ಕಪ್ ಕಾದಾಟಗಳಲ್ಲೂ ಗೆದ್ದ ಅಜೇಯ ದಾಖಲೆ ಹೊಂದಿರುವ ಭಾರತ ಈ ಸಲವೂ ಫೇವರಿಟ್ ತಂಡವಾಗಿ ಕಣಕ್ಕಿಳಿಯಲಿದೆ.
ಹುಲ್ಲುಹಾಸಿನ ಕೋರ್ಟ್ನಲ್ಲಿ ಪಂದ್ಯಗಳು ನಡೆಯಲಿರುವುದರಿಂದ ಆತಿಥೇಯ ಪಾಕಿಸ್ತಾನ ತಂಡದಿಂದ ನಿಕಟ ಪೈಪೋಟಿ ನಿರೀಕ್ಷಿಸಲಾಗಿದೆ. ಯಾಕೆಂದರೆ ಪಾಕಿಸ್ತಾನದ ಪ್ರಮುಖ ಆಟಗಾರರಾದ ಐಸಾಮ್ ಉಲ್ ಹಕ್ ಖುರೇಷಿ ಮತ್ತು ಅಕೀಲ್ ಖಾನ್ ಗ್ರಾಸ್ ಕೋರ್ಟ್ನಲ್ಲಿ ಉತ್ತಮ ನಿರ್ವಹಣೆ ತೋರಿದ ದಾಖಲೆ ಹೊಂದಿದ್ದಾರೆ. ಇಸ್ಲಾಮಾಬಾದ್ನ ಅಂಗಣ ವೇಗ ಮತ್ತು ಲೋ ಬೌನ್ಸ್ನಿಂದ ಕೂಡಿದೆ. ಹೀಗಾಗಿ ಗ್ರಾಸ್ ಕೋರ್ಟ್ನಲ್ಲಿ ಆಡಿದ ಉತ್ತಮ ಅನುಭವ ಹೊಂದಿರುವ ಡಬಲ್ಸ್ ವಿಶೇಷಜ್ಞ ಆಟಗಾರ ಎನ್. ಶ್ರೀರಾಮ್ ಬಾಲಾಜಿರನ್ನು ಭಾರತ ಸಿಂಗಲ್ಸ್ನಲ್ಲಿ ಕಣಕ್ಕಿಳಿಸಲಿದೆ. ರಾಮ್ಕುಮಾರ್ ರಾಮನಾಥನ್ ತಂಡದಲ್ಲಿರುವ ಅತ್ಯುತ್ತಮ ಸಿಂಗಲ್ಸ್ ಆಟಗಾರರಾಗಿದ್ದು, ಮೊದಲ ಪಂದ್ಯದಲ್ಲಿ ಆಡಲಿದ್ದಾರೆ. 43 ವರ್ಷದ ಪಾಕ್ ಅನುಭವಿ ಆಟಗಾರ ಐಸಾಮ್ ಉಲ್ ಹಕ್ ಖುರೇಷಿ ವಿರುದ್ಧ ರಾಮ್ಕುಮಾರ್ ಮೊದಲ ಪಂದ್ಯ ಆಡಲಿದ್ದಾರೆ.
ಭಾರತ ತಂಡ ಡಬಲ್ಸ್ನಲ್ಲಿ ಯೂಕಿ ಭಾಂಬ್ರಿ-ಸಾಕೇತ್ ಮೈನೇನಿ ಜೋಡಿಯನ್ನು ಕಣಕ್ಕಿಳಿಸಲಿದ್ದು, ಪಾಕ್ನಿಂದ ರ್ಬಕತ್ಉಲ್ಲಾ-ಮುಜಮಿಲ್ ಮುರ್ತಜ ಜೋಡಿ ಸವಾಲೊಡ್ಡಲಿದೆ. ಇತ್ತೀಚೆಗೆ ಎಟಿಪಿ ಚಾಲೆಂಜರ್ಗಳಲ್ಲಿ ಉತ್ತಮ ನಿರ್ವಹಣೆ ತೋರಿರುವ ರಾಮ್ಕುಮಾರ್ ಸಿಂಗಲ್ಸ್ ರ್ಯಾಂಕಿಂಗ್ನಲ್ಲಿ 461ನೇ ಸ್ಥಾನದಲ್ಲಿದ್ದರೆ, ಕನ್ನಡಿಗ ರೋಹನ್ ಬೋಪಣ್ಣರ ಮಾಜಿ ಡಬಲ್ಸ್ ಜತೆಗಾರ ಐಸಾಮ್ ಉಲ್ ಹಕ್ ಸಿಂಗಲ್ಸ್ ಆಡದೆ ಸುದೀರ್ ಸಮಯವಾಗಿದೆ.
ಪಾಕ್ ತಂಡ ತವರಿನಲ್ಲಿ ಆಡುವ ಲಾಭ ಹೊಂದಿದ್ದರೂ, ಭದ್ರತಾ ಕಾರಣಗಳಿಂದಾಗಿ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೇವಲ 500 ವಿಶೇಷ ಆಹ್ವಾನಿತ ಗಣ್ಯರು ಮತ್ತು ಅಭಿಮಾನಿಗಳು ಮಾತ್ರ ಕಾಣಿಸಿಕೊಳ್ಳಲಿದ್ದಾರೆ.
ಮುಖಾಮುಖಿ ವೇಳಾಪಟ್ಟಿ
ಶನಿವಾರ (ಆರಂಭ: ಬೆಳಗ್ಗೆ 11.30)
*ರಾಮ್ಕುಮಾರ್ Vs ಐಸಾಮ್ ಉಲ್ ಹಕ್
*ಎನ್. ಶ್ರೀರಾಮ್ ಬಾಲಾಜಿ Vs ಅಕೀಲ್ ಖಾನ್
ಭಾನುವಾರ (ಆರಂಭ: ಬೆಳಗ್ಗೆ 11.30)
*ಯೂಕಿ ಭಾಂಬ್ರಿ, ಸಾಕೇತ್ Vs ಮುರ್ತಜ, ರ್ಬಕತ್
*ರಾಮ್ಕುಮಾರ್ Vs ಅಕೀಲ್ ಖಾನ್
*ಎನ್. ಶ್ರೀರಾಮ್ ಬಾಲಾಜಿ Vs ಐಸಾಮ್ ಉಲ್ ಹಕ್
ಕನ್ನಡಿಗ ಜೀಶನ್ ಅಲಿಗೆ ವಿಶೇಷ ಕ್ಷಣ
ಪಾಕಿಸ್ತಾನ ನೆಲದಲ್ಲಿ 60 ವರ್ಷಗಳ ಹಿಂದೆ 1964ರಲ್ಲಿ ಕೊನೆಯದಾಗಿ ಆಡಿದಾಗ ಭಾರತ ತಂಡದ ಪ್ರಮುಖ ಆಟಗಾರರಾಗಿದ್ದ ಅಖ್ತರ್ ಅಲಿ ಅವರ ಪುತ್ರ ಜೀಶನ್ ಅಲಿ ಈಗಿನ ತಂಡಕ್ಕೆ ಕೋಚ್ ಜತೆಗೆ ಆಡದ ನಾಯಕರೂ ಆಗಿದ್ದಾರೆ. ಹೀಗಾಗಿ 54 ವರ್ಷದ ಕನ್ನಡಿಗ ಜೀಶನ್ ಅಲಿಗೆ ಇದೊಂದು ವಿಶೇಷ ಕ್ಷಣವಾಗಿದೆ. ಭಾರತ ಪರ 8 ವಷ್ ಡೇವಿಸ್ ಕಪ್ನಲ್ಲಿ ಆಡಿದ್ದ ಜೀಶನ್ ಬಳಿಕ ಕೋಚ್ ಆಗಿದ್ದರು. ಇದೀಗ ರೋಹಿತ್ ರಾಜ್ಪಾಲ್ ವೈಯಕ್ತಿಕ ಕಾರಣದಿಂದಾಗಿ ಪಾಕ್ಗೆ ಪ್ರಯಾಣಿಸದ ಕಾರಣ, ಎಐಟಿಎ ಆಡದ ನಾಯಕನ ಪಟ್ಟವನ್ನು ಜೀಶನ್ಗೆ ವಹಿಸಿದೆ.
ಭಾರತ&ಡೇವಿಸ್ ಕಪ್ ಸೆಣಸಾಟ
1962: ಭಾರತಕ್ಕೆ 5-0 ಗೆಲುವು
1963: ಭಾರತಕ್ಕೆ 4-1 ಗೆಲುವು
1964: ಭಾರತಕ್ಕೆ 4-0 ಗೆಲುವು
1970: ಭಾರತಕ್ಕೆ 3-1 ಗೆಲುವು
1973: ಭಾರತಕ್ಕೆ 4-0 ಗೆಲುವು
2006: ಭಾರತಕ್ಕೆ 3-2 ಗೆಲುವು
2019: ಭಾರತಕ್ಕೆ 4-0 ಗೆಲುವು