ಸಲಾಲಹ್ (ಓಮನ್): ಪಾಕಿಸ್ತಾನ ತಂಡವನ್ನು ಬಗ್ಗುಬಡಿಯುವ ಮೂಲಕ ಭಾರತ ತಂಡ ಪುರುಷರ ಏಷ್ಯಾಕಪ್ ಹಾಕಿ ಫೈವ್ಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಶನಿವಾರ ನಡೆದ ಫೈನಲ್ ಪಂದ್ಯದ ಪೆನಾಲ್ಟಿ ಶೂಟೌಟ್ನಲ್ಲಿ ಭಾರತ ತಂಡ 2-0ಯಿಂದ ಪಾಕಿಸ್ತಾನ ತಂಡವನ್ನು ಮಣಿಸಿತು. ಮುಂದಿನ ವರ್ಷ ಜನವರಿಯಲ್ಲಿ ಮಸ್ಕತ್ನಲ್ಲಿ ನಡೆಯಲಿರುವ ಹಾಕಿ ಫೈವ್ಸ್ ವಿಶ್ವಕಪ್ಗೂ ಭಾರತ ತಂಡ ಅರ್ಹತೆ ಸಂಪಾದಿಸಿದೆ. ಈ ಮುನ್ನ ಇತ್ತೀಚೆಗಷ್ಟೇ ನಡೆದ ಮಹಿಳೆಯರ ಹಾಕಿ ಫೈವ್ಸ್ ಏಷ್ಯಾಕಪ್ನಲ್ಲೂ ಭಾರತ ತಂಡ ಪ್ರಶಸ್ತಿ ಜಯಿಸಿತ್ತು.
ಜಿದ್ದಾಜಿದ್ದಿನಿಂದ ಕೂಡಿದ್ದ ಪ್ರಶಸ್ತಿ ಸೆಣಸಾಟದಲ್ಲಿ ಪಂದ್ಯ ನಿಗದಿತ ಅವಧಿಯಲ್ಲಿ 4-4ರಿಂದ ಸಮಬಲಗೊಂಡಿತು. ಭಾರತ ತಂಡದ ಉಪನಾಯಕ ಹಾಗೂ ಕರ್ನಾಟಕದ ಆಟಗಾರ ಮೊಹಮದ್ ರಾಹೀಲ್ (19, 26ನೇ ನಿಮಿಷ) ಎರಡು ಗೋಲು ಬಾರಿಸಿ ಭಾರತ ತಂಡ ಸಮಬಲ ಸಾಧಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ನಂತರ ಶೂಟೌಟ್ನಲ್ಲಿ ಭಾರತ ತಂಡದ ಗೋಲು ಕೀಪರ್ ಸೂರಜ್ ಕರ್ಕೆರಾ ಪಾಕಿಸ್ತಾನದ ಎರಡು ಹೊಡೆತಗಳನ್ನು ತಡೆದು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಹಾಕಿ ಇಂಡಿಯಾ ತಂಡದ ಆಟಗಾರರಿಗೆ ತಲಾ 2 ಲಕ್ಷ ರೂ. ಮತ್ತು ತರಬೇತಿ ಸಿಬ್ಬಂದಿಗೆ ತಲಾ 1 ಲಕ್ಷ ರೂ. ಬಹುಮಾನ ಪ್ರಕಟಿಸಿದೆ.
ಭಾರತ ತಂಡ ಈ ಮುನ್ನ ಶನಿವಾರ ಬೆಳಗ್ಗೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 10-4 ಅಂತರದಿಂದ ಗೆಲುವು ದಾಖಲಿಸಿ, ವಿಶ್ವಕಪ್ ಪ್ರವೇಶವನ್ನೂ ಖಚಿತಪಡಿಸಿಕೊಂಡಿತ್ತು. ಕನ್ನಡಿಗ ಮೊಹಮದ್ ರಾಹೀಲ್ ಸೆಮೀಸ್ನಲ್ಲೂ 4 ಗೋಲು ಸಿಡಿಸಿ ಮಿಂಚಿದ್ದರು.
ಏನಿದು ಹಾಕಿ ಫೈವ್ಸ್?
ಹೆಸರೇ ಹೇಳುವಂತೆ ಇದು 11 ಜನರಿಗೆ ಬದಲಾಗಿ ಕೇವಲ 5 ಆಟಗಾರರ (ಗೋಲುಕೀಪರ್ ಸೇರಿ) ತಂಡ ಆಡುವ ಆಟ. ಟಿ20 ಕ್ರಿಕೆಟ್ನಂತೆ ಇದು ಚುಟುಕು ಹಾಕಿ. ಎಂದಿನ ಹಾಕಿ (91.4-55 ಮೀ.) ಮೈದಾನಕ್ಕಿಂತ ಸುಮಾರು ಅರ್ಧದಷ್ಟು (55-41.70 ಮೀ.) ಮೈದಾನದಲ್ಲಿ ಪಂದ್ಯ ನಡೆಯುತ್ತದೆ. ತಲಾ 30 ನಿಮಿಷಗಳ ಎರಡು ಅವಧಿಯಲ್ಲಿ ಪಂದ್ಯ ನಡೆಯುತ್ತದೆ. ಜತೆಗೆ ಪೆನಾಲ್ಟಿ ಕಾರ್ನರ್ ಇರುವುದಿಲ್ಲ. ಮುಂದಿನ ವರ್ಷ ಮೊದಲ ಬಾರಿಗೆ ಈ ಮಾದರಿಯ ಹಾಕಿಯ ವಿಶ್ವಕಪ್ ನಡೆಯಲಿದೆ. 2014ರಲ್ಲಿ ಯೂತ್ ಒಲಿಂಪಿಕ್ಸ್ನ ಭಾಗವೂ ಆಗಿತ್ತು.