ಕ್ರೀಡೆ

ಡಬ್ಲ್ಯುಟಿಸಿ ಫೈನಲ್‌ಗೆ ವರುಣನ ಅಡ್ಡಿ; ಒಂದು ಎಸೆತ ಕಾಣದೆ ರದ್ದುಗೊಂಡ ಮೊದಲ ದಿನದಾಟ

raghukittur

ಸೌಥಾಂಪ್ಟನ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಬಹುನಿರೀಕ್ಷಿತ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯದ ಮೊದಲ ದಿನದಾಟ ಮಳೆಗೆ ಆಹುತಿಯಾಯಿತು. ಪಂದ್ಯಕ್ಕೆ ಮುನ್ನಾದಿನವಾದ ಗುರುವಾರ ಸಂಜೆಯಿಂದಲೇ ಸೌಥಾಂಪ್ಟನ್‌ನಲ್ಲಿ ವರುಣನ ಸಿಂಚನ ಆರಂಭಗೊಂಡಿತ್ತು. ಶುಕ್ರವಾರ ಬೆಳಗ್ಗೆ ಮತ್ತೆ ಆರಂಭಗೊಂಡ ಮಳೆ ಮಧ್ಯಾಹ್ನದವರೆಗೂ ಬಿಡುವು ನೀಡದ ಹಿನ್ನೆಲೆಯಲ್ಲಿ ಕನಿಷ್ಠ ಟಾಸ್ ಕೂಡ ನಡೆಯಲಿಲ್ಲ.

ಐಸಿಸಿ ನಿಯಮದನ್ವಯ ಡಬ್ಲ್ಯುಟಿಸಿ ಫೈನಲ್‌ಗೆ 6ನೇ ದಿನವನ್ನು ಮೀಸಲು ಇಡಲಾಗಿದೆ. ಮೊದಲ ದಿನದಾಟದಲ್ಲೇ 6 ಗಂಟೆಗಳ ಕಾಲ ಆಟ ರದ್ದುಗೊಂಡಿರುವುದರಿಂದ ಅಗತ್ಯಬಿದ್ದರೆ ಆರನೇ ದಿನವಾದ ಜೂನ್ 23ರಂದು ಕೂಡ ಆಟ ನಡೆಯುವುದು ಖಚಿತವೆನಿಸಿದೆ.

ಪಂದ್ಯದ ಉಳಿದ ದಿನ ಅರ್ಧಗಂಟೆ ಬೇಗನೆ ಆಟ ಆರಂಭಿಸುವ ಮೂಲಕ ನಷ್ಟಗೊಂಡ ಆಟ ಭರ್ತಿಗೊಳಿಸಲು ಪ್ರಯತ್ನಿಸಲಾಗುವುದು. ಆದರೆ ಇದರಿಂದ ಓವರ್ ನಷ್ಟ ಭರ್ತಿಯಾಗದೆ 6ನೇ ದಿನವೂ ಆಟ ಅಗತ್ಯವಾದರೆ, ಬಾಕಿ ಉಳಿದ ಓವರ್‌ಗಳ ಆಟವನ್ನು ಮಾತ್ರ ಆಡಿಸಲಾಗುವುದು ಎಂದು ಐಸಿಸಿ ಸ್ಪಷ್ಟಪಡಿಸಿದೆ. ಮೈದಾನದಲ್ಲಿ ಅತ್ಯುನ್ನತ ದರ್ಜೆಯ ಒಳಚರಂಡಿ ವ್ಯವಸ್ಥೆಯಿದ್ದರೂ ಹೊರ ಮೈದಾನದಲ್ಲಿ ಸಂಪೂರ್ಣ ನೀರು ತುಂಬಿತ್ತು. ಹೀಗಾಗಿ ಮೈದಾನದಲ್ಲಿ ಆಡಲು ಯೋಗ್ಯವಲ್ಲದ ಕಾರಣ ಅಂಪೈರ್‌ಗಳು ಮೊದಲ ದಿನದಾಟವನ್ನು ರದ್ದುಗೊಳಿಸಿದರು.

ಅಂಪೈರ್‌ಗಳಾದ ಮೈಕೆಲ್ ಗೌಫ್ ಹಾಗೂ ರಿಚರ್ಡ್ ಇಲ್ಲಿಂಗ್‌ವೊರ್ಥ್ ಹಲವು ಬಾರಿ ಮೈದಾನದ ಪರಿಶೀಲಿಸಿದರು. ಸ್ಥಳೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ (ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ) ದಿನದಾಟವನ್ನು ರದ್ದುಗೊಳಿಸಿದರು. ಸ್ಟೇಡಿಯಂಗೆ ಹೊಂದಿಕೊಂಡಂತೆ ಪಂಚತಾರಾ ಹೋಟೆಲ್ ಸೌಲಭ್ಯ ಇರುವುದರಿಂದ ಕ್ವಾರಂಟೈನ್ ಅವಧಿಯಲ್ಲಿ ಅಭ್ಯಾಸಕ್ಕೂ ಅನುಕೂಲವಾಗಲಿದೆ ಎಂಬ ದೃಷ್ಟಿಯಿಂದ ಐಸಿಸಿ ಹಾಗೂ ಇಸಿಬಿ, ಸೌಥಾಂಪ್ಟನ್‌ನ ರೋಸ್ ಬೌಲ್ ಮೈದಾನದಲ್ಲೇ ಫೈನಲ್ ಆಯೋಜಿಸಬೇಕೆಂದು ಬಿಸಿಸಿಐಯನ್ನು ಮನವೊಲಿಸಿತ್ತು. ಇಂಗ್ಲೆಂಡ್‌ನಲ್ಲಿ ಈ ವೇಳೆ ಮಾನ್ಸೂನ್ ಅಬ್ಬರ ಸಾಮಾನ್ಯವಾಗಿರುವುದರಿಂದ ಯಾವುದೇ ತಾಣಗಳಲ್ಲೂ ಪಂದ್ಯ ಆಯೋಜಿಸಿದ್ದರೂ ಮಳೆ ಅಡಚಣೆ ಭೀತಿಯಿಂದ ಪಾರಾಗುವಂತಿರಲಿಲ್ಲ ಎನ್ನಲಾಗಿದೆ.