ಕ್ರೀಡೆ

ಭಾರತಕ್ಕೆ ಬೃಹತ್ ಮೊತ್ತದ ಸವಾಲು ನೀಡಿದ ಇಂಗ್ಲೆಂಡ್

ಚೆನ್ನೈ: ಪ್ರವಾಸಿ ಇಂಗ್ಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ 420 ರನ್‌ಗಳ ಬೃಹತ್ ಸವಾಲು ನೀಡಿದ್ದು, ಅಂತಿಮ ದಿನದಾಟದ ಬಗ್ಗೆ ಕುತೂಹಲ ಮೂಡಿದೆ. ಚೆನ್ನೈನ ಚೆಪಾಕ್ ಅಂಗಳದ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 4ನೇ ದಿನದಂತ್ಯಕ್ಕೆ ಭಾರತ ತಂಡ, 1 ವಿಕೆಟ್‌ಗೆ 39 ರನ್ ಪೇರಿಸಿದ್ದು, ಅಂತಿಮ ದಿನದಾಟದಲ್ಲಿ ಜಯ ದಾಖಲಿಸಲು ಇನ್ನೂ 381 ರನ್ ಗಳಿಸಬೇಕಿದೆ.

ಇದಕ್ಕೂ ಮೊದಲು ಆರ್.ಅಶ್ವಿನ್ (61ಕ್ಕೆ 6) ಮಾರಕ ದಾಳಿಗೆ ನಲುಗಿದ ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ 178 ರನ್‌ಗಳಿಗೆ ಸರ್ವಪತನ ಕಂಡಿತ್ತು. ಭಾರತ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ 257 ರನ್‌ಗಳಿಂದ ದಿನದಾಟ ಆರಂಭಿಸಿ 337 ರನ್‌ಗಳಿಗೆ ಆಲೌಟ್ ಆಯಿತು. 241 ರನ್ ಮೊದಲ ಇನಿಂಗ್ಸ್ ಮುನ್ನಡೆಯ ಹೊರತಾಗಿಯೂ ಪ್ರವಾಸಿ ಇಂಗ್ಲೆಂಡ್ ಫಾಲೋಆನ್ ಹೇರದೆ ಎರಡನೇ ಸರದಿ ಬ್ಯಾಟಿಂಗ್ ಆರಂಭಿಸಿತು.

ಇಂಗ್ಲೆಂಡ್: 578 ಮತ್ತು 178 (ಜೋ ರೂಟ್ 40*, ಡೊಮಿನಿಕ್ ಬೆಸ್ 25, ಒಲಿವರ್ ಪೋಪ್ 28, ಆರ್.ಅಶ್ವಿನ್ 61ಕ್ಕೆ 6, ಶಾಬಾಜ್ ನದೀಂ 66ಕ್ಕೆ 2, ಇಶಾಂತ್ ಶರ್ಮ 24ಕ್ಕೆ 1, ಜಸ್‌ಪ್ರೀತ್ ಬುಮ್ರಾ 26ಕ್ಕೆ 1). ಭಾರತ: 337 (ವಾಷಿಂಗ್ಟನ್ ಸುಂದರ್ 85*, ಆರ್.ಅಶ್ವಿನ್ 31, ಡೊಮಿನಿಕ್ ಬೆಸ್ 76ಕ್ಕೆ 4, ಜೇಮ್ಸ್ ಆಂಡರ್‌ಸನ್ 46ಕ್ಕೆ 2, ಜ್ರೋಫ್ರಾ ಆರ್ಚರ್ 75ಕ್ಕೆ 2, ಜಾಕ್ ಲೀಚ್ 105ಕ್ಕೆ 2), ಮತ್ತು 1 ವಿಕೆಟ್‌ಗೆ 34 (ಪೂಜಾರ 12*, ಗಿಲ್ 15*, ರೋಹಿತ್ 12, ಜಾಕ್ ಲೀಚ್ 21ಕ್ಕೆ 1).