ಕ್ರೀಡೆ

41 ವರ್ಷಗಳ ಬಳಿಕ ಸೆಮಿಫೈನಲ್ ಕನಸಿನಲ್ಲಿ ಭಾರತ ಪುರುಷರ ಹಾಕಿ ತಂಡ

ಟೋಕಿಯೊ: ಭಾರತ ಪುರುಷರ ಹಾಕಿ ತಂಡ ಭಾನುವಾರ ನಡೆಯಲಿರುವ ಟೋಕಿಯೊ ಒಲಿಂಪಿಕ್ ಕೂಟದ ಎಂಟರಘಟ್ಟದ ಹಣಾಹಣಿಯಲ್ಲಿ ಬ್ರಿಟನ್ ತಂಡವನ್ನು ಎದುರಿಸಲಿದೆ. ಇದರಿಂದ 41 ವರ್ಷಗಳ ಬಳಿಕ ಸೆಮಿಫೈನಲ್‌ಗೇರುವ ಅವಕಾಶ ಉಳಿಸಿಕೊಂಡಿದೆ. 8 ಬಾರಿ ಸ್ವರ್ಣ ಪದಕ ವಿಜೇತ ಭಾರತ ತಂಡ 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಕಡೇ ಬಾರಿಗೆ ಪದಕ ಜಯಿಸಿತ್ತು. ಅಲ್ಲಿಂದ ಈಚೆಗೆ ಭಾರತ ತಂಡ ಪದಕ ಜಯಿಸಲು ವಿಫಲವಾಗಿದೆ.

1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ 5ನೇ ಸ್ಥಾನ ಪಡೆದಿದ್ದರೆ, 2008ರ ಬೀಜಿಂಗ್ ಗೇಮ್ಸ್‌ಗೆ ಅರ್ಹತೆ ಪಡೆಯಲು ವಿಫಲವಾಗಿತ್ತು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕಡೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಕಡೇ 5 ವರ್ಷಗಳಲ್ಲಿ ನಿರ್ವಹಣೆಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವ ಭಾರತ ತಂಡ ವಿಶ್ವ ನಂ.3ನೇ ಸ್ಥಾನಕ್ಕೇರಿದೆ.

ಲೀಗ್ ಹಂತದಲ್ಲಿ ಆಸೀಸ್ ಎದುರು 1-7 ರಿಂದ ಸೋಲನುಭವಿಸಿದ್ದು ಬಿಟ್ಟರೆ, 5 ಪಂದ್ಯಗಳಲ್ಲಿ 4ರಲ್ಲಿ ಜಯ ದಾಖಲಿಸಿ ಎ ಗುಂಪಿನಲ್ಲಿ 2ನೇ ಸ್ಥಾನಿಯಾಗಿ ಎಂಟರಘಟ್ಟಕ್ಕೆ ಪ್ರವೇಶಿಸಿದೆ. ಕೂಟದಲ್ಲಿ ಇದುವರೆಗೂ 18 ಗೋಲು ಬಾರಿಸಿದ್ದು, 13 ಗೋಲು ಬಿಟ್ಟುಕೊಟ್ಟಿರುವ ಭಾರತ, ಬ್ರಿಟನ್ ತಂಡವನ್ನು ಮಣಿಸಿ ಇತಿಹಾಸ ಮರುಕಳಿಸುವ ಸಿದ್ಧತೆಯಲ್ಲಿದೆ.