ಕ್ರೀಡೆ

ಆಸ್ಟ್ರೇಲಿಯಾ ವಿರುದ್ಧದ ಅಹರ್ನಿಶಿ ಟೆಸ್ಟ್ ಪಂದ್ಯ, ಸಾಧಾರಣ ಮೊತ್ತದತ್ತ ಭಾರತ

raghukittur

ಅಡಿಲೇಡ್: ನಾಯಕ ವಿರಾಟ್ ಕೊಹ್ಲಿ (74ರನ್, 180 ಎಸೆತ, 8 ಬೌಂಡರಿ) ಜವಾಬ್ದಾರಿಯುತ ಇನಿಂಗ್ಸ್ ನಡುವೆಯೂ ಭಾರತ ತಂಡ ಅಹರ್ನಿಶಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಾಧಾರಣ ಮೊತ್ತದತ್ತ ಮುಖಮಾಡಿದೆ. ಅಡಿಲೇಡ್ ಓವೆಲ್ ಮೈದಾನದಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಜಯಿಸಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಮೊದಲ ದಿನದಾಟ ಅಂತ್ಯಕ್ಕೆ 6 ವಿಕೆಟ್‌ಗೆ 233 ರನ್ ಪೇರಿಸಿತು. ಆರಂಭಿಕ ವೈಫಲ್ಯದ ನಡುವೆಯೂ ಕೊಹ್ಲಿ ಹಾಗೂ ಅನುಭವಿ ಚೇತೇಶ್ವರ್ ಪೂಜಾರ (43ರನ್, 160 ಎಸೆತ, 2 ಬೌಂಡರಿ) 3ನೇ ವಿಕೆಟ್‌ಗೆ 68 ರನ್ ಜತೆಯಾಟವಾಡಿ ತಂಡದ ಸುಸ್ಥಿತಿಗೆ ಯತ್ನಿಸಿತು. ಆದರೆ ಚಹಾ ವಿರಾಮದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿದ ಅನುಭವಿಸಿತು.

ಅಚ್ಚರಿಯ ರೀತಿಯಲ್ಲಿ ಹನ್ನೊಂದರ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಪೃಥ್ವಿ ಷಾ (0) ಇನಿಂಗ್ಸ್‌ನ 2ನೇ ಎಸೆತದಲ್ಲಿಯೇ ಬೌಲ್ಡ್ ಆದರು. ಮತ್ತೊಂದೆಡೆ, ಭರವಸೆಯ ಕರ್ನಾಟಕದ ಮಯಾಂಕ್ ಅಗರ್ವಾಲ್ (17ರನ್, 40 ಎಸೆತ, 2 ಬೌಂಡರಿ) ದೊಡ್ಡ ಮೊತ್ತ ಪೇರಿಸಲು ವಿಫಲರಾದರು. ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ಪೂಜಾರ ಜೋಡಿ ಭೋಜನ ವಿರಾಮದವರೆಗೂ ವಿಕೆಟ್ ಕಾಯ್ದುಕೊಂಡಿತು. ಆಸೀಸ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ತಂಡಕ್ಕೆ ನೆರವಾಯಿತು. ನಾಥನ್ ಲ್ಯಾನ್ ಎಸೆತವನ್ನು ರಕ್ಷಣಾತ್ಮಕವಾಗಿ ಆಡಲು ಯತ್ನಿಸಿ ಪೂಜಾರ, ಲಬುಶೇನ್ ಹಿಡಿದ ಅದ್ಭುತ ಕ್ಯಾಚ್‌ಗೆ ಬಲಿಯಾದರು. ಕೊಹ್ಲಿ-ಅಜಿಂಕ್ಯ ರಹಾನೆ (42ರನ್, 92 ಎಸೆತ, 3 ಬೌಂಡರಿ, 1 ಸಿಕ್ಸರ್) ಜೋಡಿ 4ನೇ ವಿಕೆಟ್‌ಗೆ 88 ರನ್ ಕಲೆಹಾಕಿತು. ರಹಾನೆ ಇಲ್ಲದ ರನ್‌ಗೆ ಆಹ್ವಾನ ನೀಡಿದರಿಂದ ಕೊಹ್ಲಿ ರನೌಟ್ ಬಲೆಗೆ ಬಿದ್ದರು. ಇದಾದ ಕೆಲಹೊತ್ತಿನಲ್ಲೇ ಅಜಿಂಕ್ಯ ರಹಾನೆ ನಿರ್ಗಮಿಸಿದರೆ, ಹನುಮ ವಿಹಾರಿ (16) ಹೆಚ್ಚು ಹೊತ್ತು ನಿಲ್ಲಲು ವಿಫಲರಾದರು. ವೃದ್ಧಿಮಾನ್ ಸಾಹ (9*) ಹಾಗೂ ಆರ್.ಅಶ್ವಿನ್ (15*) ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಭಾರತ : 89 ಓವರ್‌ಗಳಲ್ಲಿ 6 ವಿಕೆಟ್‌ಗೆ 233 (ವಿರಾಟ್ ಕೊಹ್ಲಿ 74, ಚೇತೇಶ್ವರ್ ಪೂಜಾರ 43, ಅಜಿಂಕ್ಯ ರಹಾನೆ 42, ಮಯಾಂಕ್ ಅಗರ್ವಾಲ್ 17, ಹನುಮ ವಿಹಾರಿ 16, ಪೃಥ್ವಿ ಷಾ 0, ಸಾಹ 9*, ಆರ್.ಅಶ್ವಿನ್ 15*, ಮಿಚೆಲ್ ಸ್ಟಾರ್ಕ್ 49ಕ್ಕೆ 2, ಜೋಸ್ ಹ್ಯಾಸಲ್‌ವುಡ್ 47ಕ್ಕೆ 1, ಪ್ಯಾಟ್ ಕಮ್ಮಿನ್ಸ್ 42ಕ್ಕೆ 1, ನಥಾನ್ ಲ್ಯಾನ್ 68ಕ್ಕೆ 1).