ನವದೆಹಲಿ: ಐದು ಬಾರಿಯ ಚಾಂಪಿಯನ್ ಆಸ್ಟ್ರೆಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಸವಾಲಿನ ಪರಿಸ್ಥಿತಿಯನ್ನು ನಿಭಾಯಿಸಿ ಶುಭಾರಂಭ ಕಂಡಿರುವ ಟೀಮ್ ಇಂಡಿಯಾ, ತವರಿನ ಏಕದಿನ ವಿಶ್ವಕಪ್ನಲ್ಲಿ ಬುಧವಾರ ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡದ ಸವಾಲು ಎದುರಿಸಲಿದೆ. ಟಿ20 ಕ್ರಿಕೆಟ್ನಲ್ಲಿ ಆಫ್ಘನ್ ತಂಡ ಹೆಚ್ಚಿನ ಸದ್ದು ಮಾಡಿದ್ದರೂ, ಏಕದಿನದಲ್ಲಿ ಇನ್ನೂ ಅಂಬೆಗಾಲಿಡುವಂತಿದೆ. ಹೀಗಾಗಿ ರೋಹಿತ್ ಶರ್ಮ ಬಳಗಕ್ಕೆ ಸುಲಭ ಗೆಲುವಿನ ನಿರೀಕ್ಷೆ ಇದೆ. ಪಾಕಿಸ್ತಾನ ವಿರುದ್ಧದ ಹೈ-ವೋಲ್ಟೇಜ್ ಪಂದ್ಯಕ್ಕೆ ಮುನ್ನ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವಂಥ ಗೆಲುವಿನ ಹಂಬಲ ಭಾರತ ತಂಡದ್ದಾಗಿದೆ.
ಆಸೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ಗೆದ್ದರೂ, ಕೆಲವೊಂದು ಎಡವಟ್ಟುಗಳನ್ನು ಮಾಡಿಕೊಂಡಿತ್ತು. ಆಫ್ಘನ್ ಎದುರು ಅದನ್ನು ಸರಿಪಡಿಸಿಕೊಳ್ಳಬೇಕಿದೆ. ಮುಖ್ಯವಾಗಿ ಉತ್ತಮ ಆರಂಭ ಸಿಗಬೇಕಾಗಿದೆ. ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಹೊಡೆತಗಳ ಆಯ್ಕೆ ಕೆಟ್ಟದಾಗಿತ್ತು. ನಾಯಕ ರೋಹಿತ್ ಶರ್ಮ ಕೂಡ ಜವಾಬ್ದಾರಿಯುತ ನಿರ್ವಹಣೆ ತೋರಬೇಕಾಗಿದೆ. ಗಿಲ್ ಗೈರಿನಲ್ಲಿ ದೊರೆತಿರುವ ಅವಕಾಶವನ್ನು ಕಿಶನ್ ಬಳಸಿಕೊಳ್ಳಬೇಕಿದೆ. ಶ್ರೇಯಸ್ ಕೂಡ ಸಿಕ್ಕ ಅವಕಾಶ ಬಳಸಿಕೊಳ್ಳದಿದ್ದರೆ, 4ನೇ ಕ್ರಮಾಂಕದ ಸ್ಥಾನವನ್ನು ಸೂರ್ಯಕುಮಾರ್ಗೆ ಬಿಟ್ಟುಕೊಡಬೇಕಾದೀತು.
ಒತ್ತಡದಲ್ಲಿ ಅಫ್ಘಾನಿಸ್ತಾನ: ಹಶ್ಮಾತ್ಉಲ್ಲಾ ಶಾಹಿದಿ ಬಳಗ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ನೀರಸ ನಿರ್ವಹಣೆ ತೋರಿ ಸೋಲು ಕಂಡಿತ್ತು. ಈ ಬಾರಿ ತಂಡದಿಂದ ಚೇತೋಹಾರಿ ನಿರ್ವಹಣೆ ಬರದಿದ್ದರೆ ಭಾರತಕ್ಕೆ ಸುಲಭ ತುತ್ತಾಗಲಿದೆ. ರಶೀದ್ ಖಾನ್, ಮುಜೀಬ್ ಜದ್ರಾನ್ ಸಹಿತ ಆಫ್ಘನ್ ಸ್ಪಿನ್ನರ್ಗಳು ಟಿ20 ಕ್ರಿಕೆಟ್ನಲ್ಲಿ ಹೆಚ್ಚು ಮಿಂಚಿದ್ದಾರೆ. ಆದರೆ ಏಕದಿನದಲ್ಲಿ ಬ್ಯಾಟರ್ಗಳಿಗೆ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳದೆ ಆಡುವ ಸ್ವಾತಂತ್ರ್ಯ ಇರುತ್ತದೆ. ಹೀಗಾಗಿ ಇಲ್ಲಿ ಆಫ್ಘನ್ ಸ್ಪಿನ್ನರ್ಗಳು ಭಿನ್ನ ಕಾರ್ಯತಂತ್ರ ಅಳವಡಿಸಿಕೊಳ್ಳಬೇಕಾಗಿದೆ. ಬಾಂಗ್ಲಾ ಎದುರು ಕೇವಲ 156 ರನ್ಗೆ ಆಲೌಟ್ ಆಗಿದ್ದ ಆಫ್ಘನ್ ಬ್ಯಾಟಿಂಗ್ನಲ್ಲೂ ಸುಧಾರಣೆ ಕಾಣಬೇಕಿದೆ. ಆಫ್ಘನ್ಗೆ 2019ರ ವಿಶ್ವಕಪ್ನಲ್ಲಿ ಭಾರತದೆದುರು ತೋರಿದ ದಿಟ್ಟ ನಿರ್ವಹಣೆ ಸ್ಫೂರ್ತಿ ತುಂಬಬಹುದು. ಭಾರತವೂ ಆ ಪಂದ್ಯವನ್ನು ನೆನಪಿನಲ್ಲಿಟ್ಟುಕೊಂಡು ಎಚ್ಚರಿಕೆಯಿಂದ ಆಡಬೇಕಿದೆ.
ಟೀಮ್ ನ್ಯೂಸ್:
ಭಾರತ: ಶುಭಮಾನ್ ಗಿಲ್ ಚೇತರಿಸಿಕೊಳ್ಳದ ಕಾರಣ, ಇಶಾನ್ ಕಿಶನ್ ಆರಂಭಿಕರಾಗಿ ಮುಂದುವರಿಯಲಿದ್ದಾರೆ. ಆದರೆ ಭಾರತ ಫಿರೋಜ್ ಷಾ ಕೋಟ್ಲಾದಲ್ಲೂ ತ್ರಿವಳಿ ಸ್ಪಿನ್ನರ್ಸ್ ಕಣಕ್ಕಿಳಿಸುವುದು ಅನುಮಾನ. ಹೀಗಾಗಿ ಅಶ್ವಿನ್ ಬದಲಿಗೆ ವೇಗಿ ಮೊಹಮದ್ ಶಮಿ ಕಣಕ್ಕಿಳಿಯಬಹುದು. ತಂಡದಲ್ಲಿ ಬೇರಾವುದೇ ಬದಲಾವಣೆಯ ಸಾಧ್ಯತೆ ಇಲ್ಲ.
ಅಫ್ಘಾನಿಸ್ತಾನ: ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದ ಸೋಲಿನ ನಡುವೆಯೂ ತಂಡದಲ್ಲಿ ಯಾವುದೇ ಬದಲಾವಣೆಯ ನಿರೀಕ್ಷೆ ಇಲ್ಲ. ಯಾಕೆಂದರೆ ಆಫ್ಘನ್ ಲಭ್ಯವಿರುವ ತನ್ನ ಅತ್ಯುತ್ತಮ 11ರ ಬಳಗವನ್ನು ಕಣಕ್ಕಿಳಿಸುತ್ತಿದೆ.
ಆರಂಭ: ಮಧ್ಯಾಹ್ನ 2.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಡಿ
ಕೊಹ್ಲಿಗೆ ತವರಿನ ಪಂದ್ಯ
ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಾನು ಆಡಿ ಬೆಳೆದ ಸ್ಟೇಡಿಯಂನಲ್ಲೇ ಆಡಲಿದ್ದಾರೆ. ಅದೂ ತನ್ನದೇ ಹೆಸರಿನ ಪೆವಿಲಿಯನ್ ಎದುರಿನಲ್ಲಿ ಆಡುವ ಅವಕಾಶ ಹೊಂದಿದ್ದಾರೆ. ಕಳೆದ ಐಪಿಎಲ್ನಲ್ಲಿ ಆರ್ಸಿಬಿ-ಲಖನೌ ನಡುವಿನ ಮುಖಾಮುಖಿಯ ವೇಳೆ ಕೊಹ್ಲಿ ಮತ್ತು ಆಫ್ಘನ್ ವೇಗಿ ನವೀನ್ ಉಲ್ ಹಕ್ ಜಗಳವಾಡಿದ್ದರು. ಹೀಗಾಗಿ ಈ ಬಾರಿ ಅವರಿಬ್ಬರ ಮುಖಾಮುಖಿ ಕುತೂಹಲ ಕೆರಳಿಸಿದ್ದು, ಕೊಹ್ಲಿ ತವರು ಪ್ರೇಕ್ಷಕರ ಬೆಂಬಲವನ್ನೂ ಪಡೆಯಲಿದ್ದಾರೆ.
ಮತ್ತೆ ರನ್ಪ್ರವಾಹ?
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ-ಶ್ರೀಲಂಕಾ ನಡುವೆ ನಡೆದ ಮೊದಲ ಪಂದ್ಯದಲ್ಲಿ 750ಕ್ಕೂ ಅಧಿಕ ರನ್ ಮತ್ತು 31 ಸಿಕ್ಸರ್ ಸಿಡಿದಿತ್ತು. ಹೀಗಾಗಿ ಈ ಸಲವೂ ರನ್ಪ್ರವಾಹ ಮುಂದುವರಿಯುವ ನಿರೀಕ್ಷೆ ಇದೆ. ಆಫ್ಘನ್ ಸ್ಪಿನ್ನರ್ಗಳು ಪ್ರಬಲರಾಗಿದ್ದರೂ, ವೇಗದ ಬೌಲಿಂಗ್ ವಿಭಾಗ ಭಾರತಕ್ಕೆ ಸುಲಭ ಸವಾಲಾಗಬಹುದು. ರನ್ರೇಟ್ ಸುಧಾರಿಸುವ ನಿಟ್ಟಿನಲ್ಲೂ ಭಾರತ ಪ್ರಯತ್ನಿಸಬಹುದು.
ಏಕದಿನ ಮುಖಾಮುಖಿ: 3
ಭಾರತ: 2
ಅಫ್ಘಾನಿಸ್ತಾನ: 0
ಟೈ: 1
ವಿಶ್ವಕಪ್ ಮುಖಾಮುಖಿ: 1
ಭಾರತ: 1
ಅಫ್ಘಾನಿಸ್ತಾನ: 0
2019ರಲ್ಲಿ ಭೀತಿ ಹುಟ್ಟಿಸಿತ್ತು ಆಫ್ಘನ್!
ಭಾರತ-ಆಫ್ಘನ್ ತಂಡಗಳು ಏಕದಿನ ವಿಶ್ವಕಪ್ನಲ್ಲಿ ಇದುವರೆಗೆ ಒಮ್ಮೆ ಮಾತ್ರ ಮುಖಾಮುಖಿ ಆಗಿವೆ. 2019ರಲ್ಲಿ ಸೌಥಾಂಪ್ಟನ್ನಲ್ಲಿ ನಡೆದ ಆ ಪಂದ್ಯದಲ್ಲಿ ಆಫ್ಘನ್, ಭಾರತಕ್ಕೆ ಸೋಲಿನ ಭೀತಿಯನ್ನೂ ಮೂಡಿಸಿತ್ತು. ಭಾರತವನ್ನು 8 ವಿಕೆಟ್ಗೆ 224 ರನ್ಗಳಿಗೆ ನಿಯಂತ್ರಿಸಿದ್ದ ಆಫ್ಘನ್, ಬಳಿಕ ಮೊಹಮದ್ ನಬಿ ಅರ್ಧಶತಕದಿಂದ ಯಶಸ್ವಿ ಚೇಸಿಂಗ್ನತ್ತ ಮುನ್ನಡೆದಿತ್ತು. ಆದರೆ ಕೊನೇ ಓವರ್ನಲ್ಲಿ 16 ರನ್ ಬೇಕಿದ್ದಾಗ, ಮೊಹಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಸಾಧನೆಯೊಂದಿಗೆ ಅಫ್ಘಾನಿಸ್ತಾನವನ್ನು 213 ರನ್ಗೆ ಆಲೌಟ್ ಮಾಡಿ 11 ರನ್ ಗೆಲುವು ತಂದುಕೊಟ್ಟಿದ್ದರು.