ಕ್ರೀಡೆ

ಪಾಕ್​ ವಿರುದ್ಧ ಇಂದು ಹೈವೋಲ್ಟೇಜ್​ ಪಂದ್ಯ: ಟೀಮ್​ ಇಂಡಿಯಾದಲ್ಲಿ ಈ 2 ಬದಲಾವಣೆ ಸಾಧ್ಯತೆ! IND vs PAK

IND vs PAK : ಏಷ್ಯಾಕಪ್ ಟೂರ್ನಿಯ ಭಾಗವಾಗಿ ಒಂದು ವಾರದ ಬಳಿಕ ಮತ್ತೆ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್​ ಪಂದ್ಯಕ್ಕೆ ನಾವಿಂದು (ಸೆ.21) ಸಾಕ್ಷಿಯಾಗಲಿದ್ದೇವೆ. ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಗ್ರೂಪ್​ ಹಂತದ ಪಂದ್ಯದಲ್ಲಿ ಪಾಕಿಸ್ತಾನದ ಮೇಲೆ ಎಲ್ಲಾ ಅಂಶಗಳಲ್ಲೂ ಪ್ರಾಬಲ್ಯ ಸಾಧಿಸಿದ್ದ ಟೀಮ್​ ಇಂಡಿಯಾ, ಇಂದು ನಡೆಯಲಿರುವ ಸೂಪರ್-4 ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಲು ಉತ್ಸುಕವಾಗಿದೆ.

ಗ್ರೂಪ್​ ಹಂತದ ಪಂದ್ಯದ ವೇಳೆ ಭಾರತೀಯ ಆಟಗಾರರು ಪಾಕಿಸ್ತಾನಿ ಕ್ರಿಕೆಟಿಗರೊಂದಿಗೆ ಕೈಕುಲುಕಲು ನಿರಾಕರಿಸಿದರು. ನಂತರದ ಬೆಳವಣಿಗೆಗಳ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಸಮಾಧಾನ ವ್ಯಕ್ತಪಡಿಸಿತ್ತು. ಹೀಗಾಗಿ ನೋ ಹ್ಯಾಂಡ್​ಶೇಕ್​ ವಿಚಾರ ವಿವಾದಕ್ಕೆ ಕಾರಣವಾಯಿತು. ಈ ವಿವಾದದ ನಂತರ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುತ್ತಿದ್ದು, ಹೈವೋಲ್ಟೇಜ್​ ಪಂದ್ಯದ ಮೇಲೆ ಕ್ರೀಡಾಭಿಮಾನಿಗಳ ಆಸಕ್ತಿ ಮತ್ತಷ್ಟು ಹೆಚ್ಚಾಗಿದೆ.

ಅಂದಹಾಗೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಘರ್ಷಣೆ ಸ್ವಾಭಾವಿಕವಾಗಿಯೇ ಆಸಕ್ತಿಯ ವಿಷಯವಾಗಿದೆ. ಲೀಗ್ ಹಂತದಲ್ಲಿ ಪಾಕಿಸ್ತಾನದ ಪ್ರದರ್ಶನವನ್ನು ಗಮನಿಸಿದರೆ, ಟೀಮ್ ಇಂಡಿಯಾ ಅವರನ್ನು ಮತ್ತೆ ಸುಲಭವಾಗಿ ಸೋಲಿಸಬಹುದು. ದುಬೈನಲ್ಲಿನ ದಾಖಲೆ ಮತ್ತು ಪರಿಸ್ಥಿತಿಯನ್ನು ಗಮನಿಸಿದರೆ, ಟಾಸ್ ಗೆದ್ದ ತಂಡವು ಫೀಲ್ಡಿಂಗ್ ಆಯ್ಕೆ ಮಾಡಬಹುದು. ಮತ್ತೊಂದೆಡೆ, ನೋ-ಶೇಕ್ ಹ್ಯಾಂಡ್ ಶೇಕ್ ವಿವಾದದ ನಂತರ, ಪಾಕಿಸ್ತಾನದ ಆಕ್ಷೇಪಣೆಗಳನ್ನು ನಿರ್ಲಕ್ಷಿಸಿ ಐಸಿಸಿ ಈ ಪಂದ್ಯಕ್ಕೂ ಆಂಡಿ ಪೈಕ್ರಾಫ್ಟ್ ಅವರನ್ನು ರೆಫರಿಯಾಗಿ ಆಯ್ಕೆ ಮಾಡಿರುವುದು ಗಮನಾರ್ಹ.

ಪಾಕಿಸ್ತಾನ ವಿರುದ್ಧದ ಇಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಎರಡು ಸಂಭಾವ್ಯ ಬದಲಾವಣೆಗಳಾಗುವ ಸಾಧ್ಯತೆ ಇದೆ. ಓಮನ್ ವಿರುದ್ಧದ ಪಂದ್ಯದ ಸಮಯದಲ್ಲಿ ಟೀಮ್ ಇಂಡಿಯಾ ಆಲ್‌ರೌಂಡರ್ ಅಕ್ಷರ್ ಪಟೇಲ್ ಫೀಲ್ಡಿಂಗ್ ಮಾಡುವಾಗ ತಲೆಗೆ ಗಾಯವಾಗಿತ್ತು. ಪರಿಣಾಮವಾಗಿ, ಅಕ್ಷರ್ ಪಟೇಲ್ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಮತ್ತೊಂದೆಡೆ, ದುಬೆ ಬದಲಿಗೆ ಮತ್ತೊಬ್ಬ ಬ್ಯಾಟ್ಸ್‌ಮನ್‌ರನ್ನು ಮೈದಾನಕ್ಕೆ ತರುವ ಸಾಧ್ಯತೆಯಿದೆ.

ಭಾರತ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿದೆ. ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ಬೌಲಿಂಗ್ ವಿಭಾಗದಲ್ಲಿ ಅಸಾಧಾರಣ ಆಟಗಾರರಾಗಿದ್ದಾರೆ. ಆದಾಗ್ಯೂ, ಅಕ್ಷರ್ ಪಟೇಲ್ ಈ ಪಂದ್ಯವನ್ನು ತಪ್ಪಿಸಿಕೊಂಡರೆ, ಅವರ ಬದಲಿಗೆ ಯಾರನ್ನು ಕರೆತರಲಾಗುತ್ತದೆ ಎಂಬುದು ಕುತೂಹಲಕಾರಿಯಾಗಿದೆ. ಇದಕ್ಕೆ ಉತ್ತರ ಬೇಕಾದರೆ, ಇಂದಿನ ಪಂದ್ಯವನ್ನು ನೋಡಲೇಬೇಕಾಗುತ್ತದೆ. (ಏಜೆನ್ಸೀಸ್​)