ನ್ಯೂಯಾರ್ಕ್: ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಎರಡನೇ ಗೆಲುವು ದಾಖಲಿಸಿದೆ. ನ್ಯೂಯಾರ್ಕ್ ಮೈದಾನದಲ್ಲಿ ನಿನ್ನೆ (ಜೂನ್ 09) ನಡೆದ ಪಾಕಿಸ್ತಾನ ವಿರುದ್ಧದ ದಾಯಾದಿ ಕದನದಲ್ಲಿ 6 ರನ್ಗಳ ಅಂತರದಲ್ಲಿ ಭಾರತ ಸೂಪರ್ ಗೆಲುವು ಸಾಧಿಸುವ ಮೂಲಕ ಕಿರು ವಿಶ್ವಕಪ್ ಬೇಟೆಯನ್ನು ಮುಂದುವರಿಸಿದೆ. ಆದರೆ, ಪಾಕ್ ವಿರುದ್ಧ ಜಯಿಸಿದರೂ ಟೀಮ್ ಇಂಡಿಯಾ ಕೆಟ್ಟ ದಾಖಲೆಯೊಂದನ್ನು ಬರೆದಿದೆ. ಭಾರತ ಇತಿಹಾಸದಲ್ಲಿ ಮೊದಲ ಬಾರಿಗೆ ಈ ಕಳಪೆ ದಾಖಲೆಯನ್ನು ನಿರ್ಮಿಸಿದೆ.
ಪಾಕಿಸ್ತಾನ ವಿರುದ್ಧದ ಮಹತ್ವದ ಪಂದ್ಯದಲ್ಲಿ ಭಾರತ 6 ರನ್ಗಳಿಂದ ಗೆದ್ದಿದ್ದು ಗೊತ್ತೇ ಇದೆ. ಈ ಹೋರಾಟದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾಗೆ ಪಾಕ್ ಬೌಲರ್ಗಳು ಕಾಡಿದರು. ವೇಗಿಗಳಾದ ನಸೀಮ್ ಶಾ (3 ವಿಕೆಟ್), ಹ್ಯಾರಿಸ್ ರೌಫ್ (3) ಮತ್ತು ಅಮೀರ್ (2) ಮಳೆಯಿಂದಾಗಿ ಪಿಚ್‌ನ ನೆರವನ್ನು ಅತ್ಯುತ್ತಮವಾಗಿ ಬಳಸಿಕೊಂಡರು. ಇದರೊಂದಿಗೆ ಭಾರತ ಕೇವಲ 19 ಓವರ್‌ಗಳಲ್ಲಿ 119 ರನ್ ಗಳಿಸಿತು. ರಿಷಭ್ ಪಂತ್ ಮಾತ್ರ 42 ರನ್ ಗಳಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಇತರರು ಸಂಪೂರ್ಣ ವಿಫಲರಾದರು.
ಇದಾದ ಬಳಿಕ 120 ರನ್ಗಳ ಸಣ್ಣ ಗುರಿಯೊಂದಿಗೆ ಕಣಕ್ಕೆ ಇಳಿದ ಪಾಕಿಸ್ತಾನಕ್ಕೆ ಟೀಮ್ ಇಂಡಿಯಾ ಬೌಲರ್ಗಳು ದುಸ್ವಪ್ನವಾಗಿ ಕಾಡಿದರು. ಎಲ್ಲಕ್ಕಿಂತ ಮುಖ್ಯವಾಗಿ ಯಾರ್ಕರ್‌ಗಳ ರಾಜ ಜಸ್ಪ್ರೀತ್ ಬುಮ್ರಾ, ತಮ್ಮ ಟ್ರೇಡ್‌ಮಾರ್ಕ್ ಬೌಲಿಂಗ್‌ನೊಂದಿಗೆ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳಲ್ಲಿ ಭಯ ಹುಟ್ಟಿಸಿದರು. ಟೀಮ್ ಇಂಡಿಯಾ ಬೌಲಿಂಗ್ಗೆ ತತ್ತರಿಸಿದ ಪಾಕ್, 7 ವಿಕೆಟ್ ನಷ್ಟಕ್ಕೆ 113 ರನ್ಗಳಿಗೆ ಸೀಮಿತವಾಯಿತು. ಅಂತಿಮವಾಗಿ 6 ರನ್ಗಳಿಂದ ಸೋಲು ಕಂಡಿತು. ಮೊಹಮ್ಮದ್ ರಿಜ್ವಾನ್ 31 ರನ್ ಗಳಿಸಿ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳಲ್ಲಿ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಬುಮ್ರಾ ತಮ್ಮ 4 ಓವರ್‌ಗಳ ಕೋಟಾದಲ್ಲಿ ಕೇವಲ 14 ರನ್ ನೀಡಿ 3 ನಿರ್ಣಾಯಕ ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ ಎರಡು ವಿಕೆಟ್ ಪಡೆದರು.
ಇದೇ ವೇಳೆ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆಲೌಟ್ ಆಗುವ ಮೂಲಕ ಟಿ20ಯಲ್ಲಿ ಕೆಟ್ಟ ದಾಖಲೆ ಬರೆದಿದೆ. ಟಿ20 ಮಾದರಿಯಲ್ಲಿ ಭಾರತ ಪಾಕ್ ವಿರುದ್ಧ ತನ್ನ 10 ವಿಕೆಟ್ ಕಳೆದುಕೊಂಡಿರುವುದು ಇದೇ ಮೊದಲು. ಪಾಕಿಸ್ತಾನದ ವಿರುದ್ಧ ಆಡಿದ 8 ಪಂದ್ಯಗಳಲ್ಲಿ ನಿನ್ನೆಯ ಪಂದ್ಯದಲ್ಲಿ ಮಾತ್ರ ಆಲೌಟ್ ಆಯಿತು. ಇದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಭಾರತಕ್ಕೆ ಇದು ನಾಲ್ಕನೇ ಅತಿ ಕಡಿಮೆ ಸ್ಕೋರ್ ಎಂಬುದು ಗಮನಾರ್ಹ. 2016ರಲ್ಲಿ 79 ರನ್, 2021ರಲ್ಲಿ ನ್ಯೂಜಿಲೆಂಡ್ ವಿರುದ್ಧ 110/7, 2009ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 118/8 ದಾಖಲಾದ ಅತ್ಯಂತ ಕಡಿಮೆ ಸ್ಕೋರ್ ಆಗಿತ್ತು. (ಏಜೆನ್ಸೀಸ್)