ಕ್ರೀಡೆ

ಸ್ವಲ್ಪ ತಲೆ ಉಪಯೋಗಿಸಬೇಕು! ಎಲ್ಲಿ ಹೋಯ್ತು ಕಾಮನ್​ ಸೆನ್ಸ್​? ಸ್ಟೋಕ್ಸ್​ ನಿರ್ಧಾರಕ್ಕೆ ಮಾಜಿ ಕ್ರಿಕೆಟಿಗರು ಗರಂ | IND vs ENG

IND vs ENG Test: ಪ್ರಸಕ್ತ ಇಂಗ್ಲೆಂಡ್ ಮತ್ತು ಭಾರತ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಅತ್ಯುತ್ತಮ ಇನ್ನಿಂಗ್ಸ್​ ಆಡಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದೆ. ತಂಡದ ಪರ ನಾಯಕ ಶುಭಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಶತಕದಾಟ ಪ್ರದರ್ಶಿಸಿದರೆ, ಉಪನಾಯಕ ರಿಷಭ್ ಪಂತ್​ ಆಕರ್ಷಕ ಅರ್ಧ ಶತಕ ದಾಖಲಿಸಿದರು. ಉಳಿದಂತೆ ಕೆ.ಎಲ್. ರಾಹುಲ್​ ಕೂಡ ಉತ್ತಮ ಇನ್ನಿಂಗ್ಸ್ ಆಡಿದರು. ಇದು ಗಿಲ್​ ಪಡೆಗೆ ಖುಷಿ ನೀಡಿದರೆ, ಅತ್ತ ಇಂಗ್ಲೆಂಡ್​ ತಂಡಕ್ಕೆ ಭಾರೀ ಮುಖಭಂಗ ಉಂಟಾಗಿದೆ.

ಇಂಗ್ಲೆಂಡ್ ನಾಯಕ ಬೆನ್​ ಸ್ಟೋಕ್ಸ್ ಕಳಪೆ ನಿರ್ಧಾರಗಳೇ ಟೀಮ್ ಇಂಡಿಯಾ ಅದ್ಭುತ ಬ್ಯಾಟ್​ ಮಾಡಲು ಕಾರಣವಾಯಿತು ಎಂದು ಟೀಕೆಗಳ ಸರಿಮಳೆಯನ್ನೇ ಹರಿಸಿರುವ ಇಂಗ್ಲೆಂಡ್​ ದಿಗ್ಗಜ ಹಾಗೂ ಮಾಜಿ ಕ್ರಿಕೆಟಿಗರು, ಸ್ಟೋಕ್ಸ್​ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಬೆನ್ ಸ್ಟೋಕ್ಸ್ ಅವರ ನಿರ್ಧಾರ ಸರಿಯಿರಲಿಲ್ಲ ಎಂದು ಇಂಗ್ಲೆಂಡ್​ನ ಮಾಜಿ ಕ್ಯಾಪ್ಟನ್​ ಮೈಕೆಲ್ ಅಥರ್ಟನ್ ಟೀಕಿಸಿದ್ದಾರೆ. "ಕಳೆದ ಆರು ಪಂದ್ಯಗಳಲ್ಲಿ ಮೊದಲು ಬೌಲಿಂಗ್ ಮಾಡಿದ ತಂಡ ಗೆದ್ದಿದೆ ಎಂದು ಅಂಕಿಅಂಶಗಳು ತೋರಿಸುತ್ತವೆ. ಆದಾಗ್ಯೂ, ಸ್ವಲ್ಪ ಸಾಮಾನ್ಯ ಜ್ಞಾನ ಉಳ್ಳವರು ತಮ್ಮ ಮಿದುಳನ್ನು ಬಳಸಿಕೊಳ್ಳಬೇಕಿತ್ತು. ಆದ್ರೆ, ಇಲ್ಲಿ ಅವರು ಅದನ್ನು ಮಾಡಿಲ್ಲ" ಎಂದಿದ್ದಾರೆ.

"ಈ ಪಿಚ್​ನಲ್ಲಿ ಟಾಸ್ ಗೆದ್ದಾಗ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳುವುದು ಕಾಮನ್​ ಸೆನ್ಸ್ ಆಗಿತ್ತು. ಆದರೆ, ಸ್ಟೋಕ್ಸ್​ ತಮ್ಮ ಮಿದುಳಿಗೆ ಕೆಲಸ ಕೊಟ್ಟಿಲ್ಲ. ಪ್ರಸ್ತುತ ಇಲ್ಲಿ ತುಂಬಾ ಬಿಸಿಲಿದೆ. ಮುಂದಿನ ಎರಡು ದಿನಗಳವರೆಗೆ 30 ಡಿಗ್ರಿಗಿಂತ ಹೆಚ್ಚು ತಾಪಮಾನ ಇರಲಿದೆ. ಸ್ಟೋಕ್ಸ್ ತನ್ನ ಹಿಂದಿನ ದಾಖಲೆಯನ್ನು ಮಾತ್ರ ಆಧರಿಸಿ ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡರು. ಆದಾಗ್ಯೂ, ಇಂಗ್ಲೆಂಡ್ ತಂಡವು ದೊಡ್ಡ ಗುರಿಯನ್ನು ಸಹ ಬೆನ್ನಟ್ಟುವ ಸಾಮರ್ಥ್ಯವನ್ನು ಹೊಂದಿದೆ" ಎಂದು ಅಥರ್ಟನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟಾಸ್​ನಲ್ಲೇ ಎಡವಟ್ಟು!

ಸ್ಟೋಕ್ಸ್​ ನಿರ್ಧಾರ ಕುರಿತು ಬೇಸರ ಹೊರಹಾಕಿದ ಮಾಜಿ ಕ್ಯಾಪ್ಟನ್ ಆಲಿಸ್ಟೈರ್​ ಕುಕ್​, "ಬಿಸಿಲು ಮತ್ತು ಒಣ ಪಿಚ್​ ಕಂಡೀಷನ್​ ಇರುವಾಗ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು ಸರಿಯಿಲ್ಲ. ಇಂತಹ ಪಿಚ್​ನಲ್ಲಿ ಸ್ವಿಂಗ್ ಮತ್ತು ಅನುಭವವಿಲ್ಲದ ಬೌಲರ್​ಗಳಿಗೆ ಅವಕಾಶವಿಲ್ಲ. ಇಂಗ್ಲೆಂಡ್​ ಟಾಸ್​ನಲ್ಲಿ ಎಡವಿದ್ದಕ್ಕೆ ಮಾತ್ರ ಬೇಸರಗೊಳ್ಳಬೇಕು" ಎಂದು ಕುಕ್​ ಹೇಳಿದರು,(ಏಜೆನ್ಸೀಸ್).