ಕ್ರೀಡೆ

ಈ ಬದಲಾವಣೆ ಅಗತ್ಯ.. 4ನೇ ಟೆಸ್ಟ್ ಬೆನ್ನಲ್ಲೇ ಗಂಭೀರ್, ಗಿಲ್​ಗೆ ಅಜಿಂಕ್ಯಾ ರಹಾನೆ ಕಿವಿಮಾತು | IND vs ENG

IND vs ENG: ಪ್ರಸಕ್ತ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಅಂತರದಲ್ಲಿ ಬೆನ್​ ಸ್ಟೋಕ್ಸ್​ ಪಡೆ ಮುನ್ನಡೆ ಸಾಧಿಸಿದೆ. ಸತತ ಎರಡು ಪಂದ್ಯಗಳಲ್ಲಿ ಸೋಲುಂಡಿರುವ ಟೀಮ್ ಇಂಡಿಯಾಗೆ ನಾಲ್ಕನೇ ಟೆಸ್ಟ್​ನಲ್ಲಿ ಗೆಲುವಿನ ಅನಿವಾರ್ಯತೆ ಎದುರಾಗಿದೆ. ಈ ಬೆನ್ನಲ್ಲೇ ತಂಡದಲ್ಲಿ ಒಂದಷ್ಟು ಬದಲಾವಣೆಗಳ ಅಗತ್ಯವಿದೆ ಎಂದು ಕ್ರಿಕೆಟಿಗ ಅಜಿಂಕ್ಯಾ ರಹಾನೆ ಹೇಳಿದ್ದಾರೆ.

ಈಗಾಗಲೇ ಎರಡು ಟೆಸ್ಟ್​ ಪಂದ್ಯಗಳಲ್ಲಿ ಸೋತಿರುವ ಭಾರತಕ್ಕೆ ನಾಲ್ಕನೇ ಪಂದ್ಯದಲ್ಲಿ ಗೆಲುವು ಅನಿವಾರ್ಯವಾಗಿದೆ. ಹೀಗಿರುವಾಗಲೇ ಟೀಮ್ ಇಂಡಿಯಾ ಹೆಡ್​ ಕೋಚ್​ ಗೌತಮ್ ಗಂಭೀರ್ ಮತ್ತು ಕ್ಯಾಪ್ಟನ್ ಶುಭಮನ್ ಗಿಲ್​ಗೆ ರಹಾನೆ ಬಹುಮುಖ್ಯ ಸಲಹೆಗಳನ್ನು ನೀಡಿದ್ದಾರೆ. ಈಗಿರುವ ತಂಡಕ್ಕೆ ಮತ್ತೊಬ್ಬ ಬೌಲರ್ ಸೇರಿಸುವ ಮೂಲಕ ತಂಡದಲ್ಲಿ ದೊಡ್ಡ ಬದಲಾವಣೆ ತರುವುದು ಒಳ್ಳೆಯದು ಎಂದಿದ್ದಾರೆ.

"4 ಮತ್ತು 5ನೇ ದಿನದಂದು ಬ್ಯಾಟಿಂಗ್ ಮಾಡುವುದು ಸ್ವಲ್ಪ ಕಷ್ಟ ಎಂದು ನಮ್ಮೆಲ್ಲರಿಗೂ ತಿಳಿದಿದೆ. ರನ್ ಗಳಿಸುವುದು ಸುಲಭದ ಮಾತಲ್ಲ. ಹೌದು, ಇಂಗ್ಲೆಂಡ್ ನಿಜವಾಗಿಯೂ ಚೆನ್ನಾಗಿ ಬೌಲಿಂಗ್ ಮಾಡಿದೆ. ಆದರೆ, ಮೊದಲ ಇನ್ನಿಂಗ್ಸ್‌ನಲ್ಲಿ ಆ ದೊಡ್ಡ ಸ್ಕೋರ್ ಗಳಿಸುವ ಅವಕಾಶವನ್ನು ಭಾರತ ಕಳೆದುಕೊಂಡಿತು. ತಂಡದಲ್ಲಿ ಇನ್ನೊಬ್ಬ ವೇಗಿಯ ಅಗತ್ಯವಿದೆ. ಈ ಬದಲಾವಣೆಯನ್ನು ತನ್ನಿ. ನೀವು 20 ವಿಕೆಟ್‌ಗಳನ್ನು ಪಡೆಯುವ ಮೂಲಕ ಟೆಸ್ಟ್ ಪಂದ್ಯ ಅಥವಾ ಸರಣಿಯನ್ನು ಗೆಲ್ಲುತ್ತೀರಿ" ಎಂದು ರಹಾನೆ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).