ಕ್ರೀಡೆ

ಹಿಟ್​ಮ್ಯಾನ್​ ಅಂದ್ರೆ ಸುಮ್ನೇನಾ? ಒಂದೇ ಒಂದು ಸಿಕ್ಸರ್​ನಿಂದ ಹೊಸ ಇತಿಹಾಸ ಸೃಷ್ಟಿಸಿದ ರೋಹಿತ್​ ಶರ್ಮ! Rohit Sharma

Rohit Sharma : ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅಪರೂಪದ ಸಾಧನೆ ಮಾಡಿದ್ದಾರೆ. ಐಸಿಸಿ ಏಕದಿನ ಟೂರ್ನಿಗಳಲ್ಲಿ (ಚಾಂಪಿಯನ್ಸ್ ಟ್ರೋಫಿ, ಏಕದಿನ ವಿಶ್ವಕಪ್) ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2025ರ ಚಾಂಪಿಯನ್ಸ್ ಟ್ರೋಫಿಯ ಭಾಗವಾಗಿ ದುಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಿಕ್ಸರ್ ಬಾರಿಸಿದ ನಂತರ ರೋಹಿತ್ ಈ ಸಾಧನೆ ಮಾಡಿದರು. ಈ ಮೂಲಕ ರೋಹಿತ್​, ವೆಸ್ಟ್ ಇಂಡೀಸ್ ಕ್ರಿಕೆಟ್​ ದಂತಕಥೆ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಕ್ರಿಸ್ ಗೇಲ್ ಅವರು 51 ಇನ್ನಿಂಗ್ಸ್‌ಗಳಲ್ಲಿ 64 ಸಿಕ್ಸರ್‌ಗಳನ್ನು ಬಾರಿಸಿದರೆ, ರೋಹಿತ್ ಶರ್ಮ ಕೇವಲ 42 ಇನ್ನಿಂಗ್ಸ್‌ಗಳಲ್ಲಿ 65 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ರೋಹಿತ್​, ಗೇಲ್​ ಬಳಿಕ ಗ್ಲೆನ್​ ಮ್ಯಾಕ್ಸ್‌ವೆಲ್, ಡೇವಿಡ್​ ಮಿಲ್ಲರ್ ಮತ್ತು ಸೌರವ್​ ಗಂಗೂಲಿ ಇದಾರೆ.

* ರೋಹಿತ್ ಶರ್ಮ (ಭಾರತ) - 42 ಇನ್ನಿಂಗ್ಸ್​ನಲ್ಲಿ 65 ಸಿಕ್ಸರ್‌

* ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್) - 51 ಇನ್ನಿಂಗ್ಸ್​ನಲ್ಲಿ 64 ಸಿಕ್ಸರ್‌

* ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ) - 30 ಇನ್ನಿಂಗ್ಸ್​ನಲ್ಲಿ 49 ಸಿಕ್ಸರ್‌

* ಡೇವಿಡ್ ಮಿಲ್ಲರ್ (ದಕ್ಷಿಣ ಆಫ್ರಿಕಾ) - 30 ಇನ್ನಿಂಗ್ಸ್​ನಲ್ಲಿ 45 ಸಿಕ್ಸರ್‌

* ಸೌರವ್ ಗಂಗೂಲಿ (ಭಾರತ) - 32 ಇನ್ನಿಂಗ್ಸ್​ನಲ್ಲಿ 42 ಸಿಕ್ಸರ್‌

* ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) - 33 ಇನ್ನಿಂಗ್ಸ್​ನಲ್ಲಿ 42 ಸಿಕ್ಸರ್‌

* ಇಯಾನ್ ಮಾರ್ಗನ್ (ಇಂಗ್ಲೆಂಡ್) - 40 ಇನ್ನಿಂಗ್ಸ್​ನಲ್ಲಿ 40 ಸಿಕ್ಸರ್‌

ನಿನ್ನೆಯ ಪಂದ್ಯದಲ್ಲಿ 265 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರೋಹಿತ್ ಶರ್ಮ 29 ಎಸೆತಗಳನ್ನು ಎದುರಿಸಿ 3 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 28 ​​ರನ್ ಗಳಿಸಿದರು. ಸಿಕ್ಸರ್​ ಬಾರಿಸುವ ಮೂಲಕ ಐಸಿಸಿ ಟೂರ್ನಿಯಲ್ಲಿ ಅತಿ ಹೆಚ್ಚು ಸಿಕ್ಸರ್​ ಬಾರಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ, ಭರ್ಜರಿ ಗೆಲುವಿನ ಓಟ ಮುಂದುವರಿಸಿರುವ ಟೀಮ್ ಇಂಡಿಯಾ, 8 ವರ್ಷಗಳ ಬಳಿಕ ಪುನಾರಂಭಗೊಂಡಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಟೂರ್ನಿಯಲ್ಲಿ ಸತತ ಮೂರನೇ ಹಾಗೂ ಒಟ್ಟಾರೆ ಐದನೇ ಬಾರಿಗೆ ಫೈನಲ್‌ಗೇರಿದೆ. ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ (84 ರನ್, 98 ಎಸೆತ, 5 ಬೌಂಡರಿ) ಸಮಯೋಚಿತ ಆಟ ಹಾಗೂ ವೇಗಿ ಮೊಹಮದ್ ಶಮಿ (48ಕ್ಕೆ 3) ಸಹಿತ ಇತರ ಬೌಲರ್‌ಗಳ ಶಿಸ್ತಿನ ದಾಳಿಯ ನೆರವಿನಿಂದ ಭಾರತ ತಂಡ ಮೊದಲ ಸೆಮಿಫೈನಲ್‌ನಲ್ಲಿ ಏಕದಿನ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ಎದುರು 4 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಇದರೊಂದಿಗೆ ರೋಹಿತ್ ಶರ್ಮ ಬಳಗ 2023ರ ಏಕದಿನ ವಿಶ್ವಕಪ್ ಫೈನಲ್ ಸೋಲಿನ ನೋವನ್ನು ಕಡಿಮೆಗೊಳಿಸಿದೆ. ನ್ಯೂಜಿಲೆಂಡ್ ಹಾಗೂ ದ.ಆಫ್ರಿಕಾ ನಡುವಿನ ವಿಜೇತರ ಎದುರು ಭಾರತ ತಂಡ ಭಾನುವಾರ ದುಬೈನಲ್ಲೇ ಪ್ರಶಸ್ತಿಗಾಗಿ ಕಾದಾಡಲಿದೆ.

ದುಬೈ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಉಪಾಂತ್ಯ ಕಾದಾಟದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್‌ಗೆ ಇಳಿಯಿತು. ನಾಯಕ ಸ್ಟೀವನ್ ಸ್ಮಿತ್ (73 ರನ್, 96 ಎಸೆತ, 4 ಬೌಂಡರಿ, 1 ಸಿಕ್ಸರ್) ಹಾಗೂ ಎಡಗೈ ಬ್ಯಾಟರ್ ಅಲೆಕ್ಸ್ ಕ್ಯಾರಿ (61 ರನ್, 57 ಎಸೆತ, 8 ಬೌಂಡರಿ, 1 ಸಿಕ್ಸರ್) ಅರ್ಧಶತಕಗಳ ನಡುವೆಯೂ ಭಾರತೀಯರ ಸಂಘಟಿತ ದಾಳಿಗೆ ನಲುಗಿದ ಆಸೀಸ್ 49.3 ಓವರ್‌ಗಳಲ್ಲಿ 264 ರನ್‌ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ 43 ರನ್‌ಗಳಿಗೆ ಆರಂಭಿಕರಿಬ್ಬರನ್ನು ಕಳೆದುಕೊಂಡ ಭಾರತ ಸಂಕಷ್ಟಕ್ಕೆ ಸಿಲುಕಿತು. ಆಗ 36 ವರ್ಷದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ (45 ರನ್, 62 ಎಸೆತ, 3 ಬೌಂಡರಿ) ಅಮೂಲ್ಯ ಜತೆಯಾಟದ ಮೂಲಕ ಚೇಸಿಂಗ್‌ಗೆ ಬಲ ತುಂಬಿದರು. ಕೊನೆಯಲ್ಲಿ ವಿಕೆಟ್ ಕೀಪರ್-ಬ್ಯಾಟರ್, ಕನ್ನಡಿಗ ಕೆಎಲ್ ರಾಹುಲ್ (42* ರನ್, 34 ಎಸೆತ, 2 ಬೌಂಡರಿ, 2 ಸಿಕ್ಸರ್) ಸಮಯೋಚಿತ ಆಟದ ನೆರವಿನಿಂದ ಭಾರತ 48.1 ಓವರ್‌ಗಳಲ್ಲಿ 6 ವಿಕೆಟ್‌ಗೆ 267 ರನ್‌ಗಳಿಸಿ ಗೆಲುವು ಒಲಿಸಿಕೊಂಡಿತು. (ಏಜೆನ್ಸೀಸ್​)