IND vs AUS ODI: ಆತಿಥೇಯ ಆಸೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯ ಸೋತಿರುವ ಟೀಮ್ ಇಂಡಿಯಾ, ಇಂದು ಎರಡನೇ ಪಂದ್ಯವನ್ನು ಅಡಿಲೇಡ್ ಕ್ರೀಡಾಂಗಣದಲ್ಲಿ ಆಡುತ್ತಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ, ಮೊದಲು ಬೌಲಿಂಗ್ ಆಯ್ದುಕೊಂಡಿತು. ಅಂತೆಯೇ ಬ್ಯಾಟಿಂಗ್ಗಿಳಿದ ಭಾರತಕ್ಕೆ ಮತ್ತೊಮ್ಮೆ ಆರಂಭಿಕ ಆಘಾತ ಎದುರಾಯಿತು.
ಓಪನಿಂಗ್ ಬಂದ ರೋಹಿತ್ ಶರ್ಮ, ಉತ್ತಮ ಇನ್ನಿಂಗ್ಸ್ ನೀಡಿದರೆ, ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ, ಸತತ ಎರಡನೇ ಪಂದ್ಯದಲ್ಲಿಯೂ ವಿಫಲರಾಗಿದ್ದಾರೆ. ಮೊದಲ ಪಂದ್ಯದಲ್ಲಿ ಡಕ್ಔಟ್ ಆಗಿ ಪೆವಿಲಿಯನ್ ಹಾದಿ ಹಿಡಿದಂತೆಯೇ ಇಂದಿನ ಮ್ಯಾಚ್ನಲ್ಲಿಯೂ ಕೊಹ್ಲಿ ಶೂನ್ಯಕ್ಕೆ ಔಟ್ ಆದರು. ನಾಲ್ಕು ಎಸೆತಗಳನ್ನು ಆಡಿದ ಕೊಹ್ಲಿ, ಕ್ಸೇವಿಯರ್ ಬಾರ್ಟ್ಲೆಟ್ ಬೌಲಿಂಗ್‌ನಲ್ಲಿ ಎಲ್ಬಿಡಬ್ಲ್ಯೂ ಆಗಿ ಪೆವಿಲಿಯನ್ಗೆ ಮರಳಿದರು. ಇದು ಕ್ರಿಕೆಟ್ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಇದುವರೆಗೆ ಒಂದೇ ಒಂದು ರನ್ ಗಳಿಸದ ಕೊಹ್ಲಿ, ಸತತ ಎರಡು ಪಂದ್ಯದಲ್ಲಿಯೂ ಡಕ್ ಔಟ್ ಆಗಿರುವ ಸಂಗತಿ ಸದ್ಯ ಅಭಿಮಾನಿಗಳಿಗೆ ಅರಗಿಸಿಕೊಳ್ಳುವುದು ಅಸಾಧ್ಯವಾಗಿದೆ. ಇನ್ನು ರೋಹಿತ್ ಶರ್ಮ 73 ರನ್ ಬಾರಿಸುವ (7 ಬೌಂಡರಿ, 2 ಸಿಕ್ಸರ್) ಮೂಲಕ ಉತ್ತಮ ಪ್ರದರ್ಶನ ನೀಡಿ, ತಮ್ಮ ಮೇಲಿದ್ದ ಒತ್ತಡವನ್ನು ಕೊಂಚ ಇಳಿಸಿಕೊಂಡಿದ್ದಾರೆ. ಇದರೊಟ್ಟಿಗೆ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆಗಳಿಗೆ ಸಾಕ್ಷಿಯಾಗಿದ್ದಾರೆ.
ಇದನ್ನೂ ಓದಿ: ದೀಪಾವಳಿ ಮುಗಿಯುತ್ತಿದ್ದಂತೆ ಕುಸಿದ ಚಿನ್ನ! ಖರೀದಿದಾರರಿಗೆ ಇದು ಸೂಕ್ತ ಸಮಯವೇ? ಹೀಗಿದೆ ನೋಡಿ ಇಂದಿನ ದರ | Gold Rates
ಟಾಸ್ ಸೋತು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ಒಂದೇ ಓವರ್‌ನಲ್ಲಿ ಡಬಲ್ ಶಾಕ್ ಅನುಭವಿಸಿತು. ಕ್ಸೇವಿಯರ್ ಬಾರ್ಟ್ಲೆಟ್ ಇನ್ನಿಂಗ್ಸ್‌ನ 7ನೇ ಓವರ್‌ನಲ್ಲಿ ಕ್ಯಾಪ್ಟನ್ ಶುಭಮನ್ ಗಿಲ್ (9) ಮೊದಲ ಎಸೆತದಲ್ಲೇ ಔಟಾದರು. ಇದರೊಂದಿಗೆ ಭಾರತವು 17 ಸ್ಕೋರ್ಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಇನ್ನು ಅದೇ ಓವರ್ನ ಐದನೇ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಆಗಿ ವಿರಾಟ್ ಔಟ್ ಆಗಿದ್ದು, ಟೀಮ್ ಇಂಡಿಯಾವನ್ನು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿಸಿತು.