Mohammed Siraj : ಬ್ರಿಸ್ಬೇನ್‌ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ತಮ್ಮದೇಯಾದ ಛಾಪು ಮೂಡಿಸಲು ಸಾಧ್ಯವಾಗುತ್ತಿಲ್ಲ. ಟ್ರಾವಿಸ್ ಹೆಡ್ ಜತೆಗಿನ ವಿವಾದದಿಂದ ತೀವ್ರ ಟೀಕೆಗೆ ಒಳಗಾದ ಬಳಿಕ ಸಿರಾಜ್ ಮಂಕಾದಂತೆ ಕಾಣುತ್ತಿದೆ. ಸದ್ಯ ಬೌಲಿಂಗ್ನಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ಆಸಿಸ್ ಬ್ಯಾಟರ್ಗಳು ಸಿರಾಜ್ ಅವರನ್ನು ಸುಲಭವಾಗಿ ಎದುರಿಸುತ್ತಿದ್ದಾರೆ.
ಸಿರಾಜ್ ಇದುವರೆಗೂ 18.2 ಓವರ್ ಬೌಲ್ ಮಾಡಿ 69 ರನ್ ನೀಡಿ ಒಂದೇ ಒಂದು ವಿಕೆಟ್ ಪಡೆದಿಲ್ಲ. ಈ ಪಂದ್ಯದಲ್ಲಿ ಸಿರಾಜ್ ಬೌಲಿಂಗ್ ಲಯ ಕಳೆದುಕೊಂಡಂತೆ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್ಮನ್ ಸೈಮನ್ ಕ್ಯಾಟಿಚ್ ಸಿರಾಜ್ ಅವರನ್ನು ಟೀಕಿಸಿದ್ದಾರೆ.
ಸಿರಾಜ್ ಅವರು ತಮ್ಮ ಬೌಲಿಂಗ್ ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಲು ವಿಫಲರಾಗಿದ್ದಾರೆ ಎಂದು ಕ್ಯಾಟಿಚ್ ಹೇಳಿದರು. ಆಸೀಸ್ ಇನಿಂಗ್ಸ್ನ 60ನೇ ಓವರ್ನ ಮೊದಲ ಎಸೆತವನ್ನು ಸಿರಾಜ್ ಶಾರ್ಟ್ ಎಸೆದರು. ಈ ವೇಳೆ ಹೆಡ್ ಅವರು ಥರ್ಡ್ ಮ್ಯಾನ್ ಕಡೆಗೆ ಹೊಡೆದರು ಮತ್ತು ಆ ಚೆಂಡು ಬೌಂಡರಿಗೆ ಹೋಯಿತು. ಆದಾಗ್ಯೂ, ಆ ಓವರ್ಗೂ ಮೊದಲು ಥರ್ಡ್ ಮ್ಯಾನ್‌ನಲ್ಲಿ ಫೀಲ್ಡರ್ ಇದ್ದರು. ಆದರೆ, ಸಿರಾಜ್ ಸಲಹೆಯ ಮೇರೆಗೆ ನಾಯಕ ರೋಹಿತ್ ಶರ್ಮ ಥರ್ಡ್ ಮ್ಯಾನ್ ಫೀಲ್ಡರ್ ಅನ್ನು ತೆಗೆದುಹಾಕಿದರು. ಈ ಹಿನ್ನೆಲೆಯಲ್ಲಿ ಕ್ಯಾಟಿಚ್ ಅವರು ಸಿರಾಜ್ ಅವರ ನಿರ್ಧಾರವನ್ನು ತಪ್ಪು ಎಂದು ಹೇಳಿದರು.
ನಾನು ಮೊಹಮ್ಮದ್ ಸಿರಾಜ್‌ನಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಏಕೆಂದರೆ, ಆ ಓವರ್‌ಗೆ ಮೊದಲು, ಥರ್ಡ್‌ಮ್ಯಾನ್‌ನಲ್ಲಿ ಫೀಲ್ಡರ್ ಇದ್ದರು. ಸಿರಾಜ್ ಬೌಲಿಂಗ್ ಮಾಡಲು ಬಂದಾಗ, ಥರ್ಡ್‌ಮ್ಯಾನ್‌ನಲ್ಲಿ ಫೀಲ್ಡರ್ ಅನ್ನು ತೆಗೆದುಹಾಕಲು ಸೂಚಿಸಿದರು. ಇದು ನಿಜವಾಗಿಯೂ ಮೂರ್ಖತನದ ನಿರ್ಧಾರ ಎಂದು ಕ್ಯಾಟಿಚ್ ಟೀಕಿಸಿದ್ದಾರೆ.
ಥರ್ಡ್ ಮ್ಯಾನ್‌ನಲ್ಲಿ ಫೀಲ್ಡರ್ ಇಲ್ಲದಿರುವಾಗ ಶಾರ್ಟ್ ಎಸೆತವನ್ನು ಏಕೆ ಬೌಲ್ ಮಾಡುತ್ತಾನೆ? ಸಿರಾಜ್ ಸರಿಯಾದ ಯೋಜನೆಯೊಂದಿಗೆ ಬೌಲಿಂಗ್ ಮಾಡಲಿಲ್ಲ. ಅವರು ಹೆಡ್ ವಿರುದ್ಧ ಲೆಗ್ ಸೈಡ್‌ನಲ್ಲಿ ಇಬ್ಬರು ಫೀಲ್ಡರ್‌ಗಳನ್ನು ಮತ್ತು ಡೀಪ್ ಪಾಯಿಂಟ್‌ನಲ್ಲಿ ಒಬ್ಬ ಫೀಲ್ಡರ್ ಹಾಕಿದರು. ಆದರೆ, ಥರ್ಡ್ ಮ್ಯಾನ್‌ನಲ್ಲಿ ಫೀಲ್ಡರ್ ತೆಗೆದುಹಾಕಿದರು. ಹೆಡ್ ಆ ಹೊಡೆತವನ್ನು ಆಡಿದ ನಂತರ, ಮತ್ತೆ ಸಿರಾಜ್ ಅವರು ಫೀಲ್ಡರ್ ಅನ್ನು ಥರ್ಡ್ ಮ್ಯಾನ್‌ಗೆ ಹಿಂತಿರುಗಿಸಿದರು ಎಂದು ಗಬ್ಬಾ ಟೆಸ್ಟ್ ಕಾಮೆಂಟರಿಯ ಭಾಗವಾಗಿ ಕ್ಯಾಟಿಚ್ ಹೇಳಿದರು.
ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, 3ನೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಇಂದು ಆಸ್ಟ್ರೇಲಿಯಾ ತಂಡ ಮಧ್ಯಾಹ್ನ 1 ಗಂಟೆ ಹೊತ್ತಿಗೆ 6 ವಿಕೆಟ್ ನಷ್ಟಕ್ಕೆ 378 ರನ್ ಗಳಿಸಿದೆ. ಅಲೆಕ್ಸ್ ಕ್ಯಾರಿ ಮತ್ತು ನಾಯಕ ಪ್ಯಾಟ್ ಕಮಿನ್ಸ್ ಕ್ರೀಸ್ನಲ್ಲಿದ್ದಾರೆ. ಟ್ರಾವಿಸ್ ಹೆಡ್ (152) ಮತ್ತು ಸ್ಟೀವನ್ ಸ್ಮಿತ್ (101) ರನ್ ಗಳಿಸಿ ಔಟಾಗಿದ್ದಾರೆ. (ಏಜೆನ್ಸೀಸ್)