ಕ್ರೀಡೆ

ಸಿಡ್ನಿ ಟೆಸ್ಟ್​ಗೂ ಮುನ್ನವೇ ರೋಹಿತ್​ಗೆ ಆಘಾತ: ಸ್ಟಾರ್​ ಆಟಗಾರನಿಗೆ ನಾಯಕತ್ವ ಪಟ್ಟ!? Rohit Sharma

Rohit Sharma : ಬಾರ್ಡರ್​-ಗವಾಸ್ಕರ್​ ಟ್ರೋಫಿ ಆಡಲು ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್​ ಇಂಡಿಯಾ ನಾಯಕ ರೋಹಿತ್ ಶರ್ಮಾ ಸದ್ಯಕ್ಕೆ ಸಂಕಷ್ಟ ಎದುರಿಸುತ್ತಿರುವುದು ಗೊತ್ತೇ ಇದೆ. ನಾಯಕನಾಗಿ ಮತ್ತು ಬ್ಯಾಟ್ಸ್‌ಮನ್ ಆಗಿ ರೋಹಿತ್ ತೀವ್ರ ನಿರಾಸೆ ಮೂಡಿಸಿದ್ದಾರೆ. ಹೀಗಾಗಿ ತಂಡದಲ್ಲಿ ಅವರ ಸ್ಥಾನಕ್ಕೆ ಕುತ್ತು ಬಂದಿದೆ.

ಅಂದಹಾಗೆ ವೈಯಕ್ತಿಕ ಕಾರಣಗಳಿಂದ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದ ರೋಹಿತ್​ ಶರ್ಮ, ಎರಡನೇ ಟೆಸ್ಟ್‌ನಿಂದ ತಂಡವನ್ನು ಸೇರಿಕೊಂಡರು. ಆದರೆ ತಮ್ಮ ನಾಯಕತ್ವದ ಜವಾಬ್ದಾರಿಯುತ ಆಟವಾಡಲು ಸಾಧ್ಯವಾಗಲಿಲ್ಲ. ರೋಹಿತ್ ಈ ಸರಣಿಯಲ್ಲಿ ಇದುವರೆಗೆ 5 ಇನ್ನಿಂಗ್ಸ್ ಆಡಿದ್ದು ಕೇವಲ 21 ರನ್ ಗಳಿಸಿದ್ದಾರೆ. ನಾಯಕನಾಗಿ ಅಡಿಲೇಡ್ ಮತ್ತು ಮೆಲ್ಬೋರ್ನ್‌ ಟೆಸ್ಟ್​ನಲ್ಲಿ ಹೀನಾಯ ಸೋಲು ಅನುಭವಿಸಿದ್ದಾರೆ.

ಇದಕ್ಕೂ ಮುನ್ನ ನ್ಯೂಜಿಲೆಂಡ್ ಸರಣಿಯಲ್ಲೂ ರೋಹಿತ್ ಹೀನಾಯ ಪ್ರದರ್ಶನ ನೀಡಿದ್ದರು. ಅವರ ನಾಯಕತ್ವದ ಭಾರತ ತಂಡವನ್ನು ಕಿವೀಸ್ ಪಡೆ 3-0 ಅಂತರಲ್ಲಿ ವೈಟ್‌ವಾಶ್ ಮಾಡಿತು. ಇದೀಗ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲೂ ಅದೇ ಸೋಲು ಮರಳುವ ಸಾಧ್ಯತೆ ಇದೆ. ಹೀಗಾಗಿ ರೋಹಿತ್ ಶರ್ಮ ಟೆಸ್ಟ್‌ಗೆ ನಿವೃತ್ತಿ ಘೋಷಿಸಬೇಕು ಎಂಬ ಬೇಡಿಕೆಗಳು ಕೇಳಿ ಬರುತ್ತಿವೆ.

ಈ ಹಿನ್ನಲೆಯಲ್ಲಿ ಸಿಡ್ನಿಯಲ್ಲಿ ನಡೆಯಲಿರುವ ಆಸೀಸ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮ ಅವರನ್ನು ಕೈ ಬಿಡಲು ಭಾರತ ತಂಡದ ಆಡಳಿತ ಮಂಡಳಿ ಮುಂದಾಗಿದೆ ಎಂಬ ವರದಿಗಳು ಬಂದಿವೆ. ಇತ್ತೀಚೆಗೆ ಸಿಡ್ನಿ ಟೆಸ್ಟ್‌ಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದ ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರಿಗೆ ಈ ಪ್ರಶ್ನೆ ಎದುರಾಯಿತು.

ಸಿಡ್ನಿ ಟೆಸ್ಟ್‌ನಲ್ಲಿ ರೋಹಿತ್ ಆಡುತ್ತಾರಾ? ಎಂದು ಪ್ರಶ್ನಿಸಿದಾಗ. ನಾಳೆ (ಶುಕ್ರವಾರ) ಪಿಚ್ ನೋಡಿದ ನಂತರ ನಾವು ಆಡುವ ಹನ್ನೊಂದು ಆಟಗಾರರನ್ನು ನಿರ್ಧರಿಸುತ್ತೇವೆ ಎಂದು ಗಂಭೀರ್ ಉತ್ತರಿಸಿದರು. ಈ ಹೇಳಿಕೆ ಬೆನ್ನಲ್ಲೇ ಐದನೇ ಟೆಸ್ಟ್‌ಗೆ ರೋಹಿತ್ ಶರ್ಮ ಅವರನ್ನು ಕೈಬಿಡುವುದು ಬಹುತೇಕ ಖಚಿತವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನು ರೋಹಿತ್ ಅವರು ಪತ್ರಿಕಾಗೋಷ್ಠಿಗೆ ಗೈರುಹಾಜರಾಗಿರುವುದು ಕೂಡ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಭಾರತದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮತ್ತು ಕೋಚ್​ ಗಂಭೀರ್ ಅವರು ಅಭ್ಯಾಸದ ಅವಧಿಯಲ್ಲಿ ವೇಗದ ಬೌಲರ್ ಜಸ್​ಪ್ರೀತ್​ ಬುಮ್ರಾ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಹೀಗಾಗಿ ಸಿಡ್ನಿ ಟೆಸ್ಟ್‌ನಲ್ಲಿ ಬುಮ್ರಾ ಭಾರತ ತಂಡದ ಸಾರಥ್ಯವನ್ನು ವಹಿಸಿಕೊಳ್ಳಲಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಒಂದು ವೇಳೆ ರೋಹಿತ್ ಶರ್ಮ ತಂಡದಿಂದ ಔಟಾದರೆ ಶುಭಮನ್ ಗಿಲ್ ಅಂತಿಮ ತಂಡಕ್ಕೆ ಮರಳುವ ಸಾಧ್ಯತೆ ಇದೆ. (ಏಜೆನ್ಸೀಸ್​)